ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮುಂಬೈನ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (PBKS vs DC) ತಂಡಗಳು ಸೆಣೆಸಾಟ ನಡೆಸಲಿದೆ. ಉಭಯ ತಂಡಗಳು ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ ತಲಾ 6 ಗೆಲುವು ಮತ್ತು ಸೋಲನ್ನು ಕಂಡಿದ್ದು, 12 ಪಾಯಿಂಟ್ಸ್ ಪಡೆದಿವೆ. ಆದರೆ, ನೆಟ್ ರನ್ ರೇಟ್ ದೃಷ್ಟಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನ ಅಲಂಕರಿಸಿದ್ದು, ಪಂಜಾಬ್ ಕಿಂಗ್ಸ್ ತಂಡವು ಏಳನೇ ಸ್ಥಾನದಲ್ಲಿ ಉಳಿದಿದೆ. ಪ್ಲೇ ಆಫ್ಗೇರಲು ಡೆಲ್ಲಿ ಹಾಗೂ ಪಂಜಾಬ್ಗೆ ಇಂದಿನ ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹಾಗೆಯೆ ಈ ಪಂದ್ಯದಲ್ಲಿ ಗೆದ್ದ ತಂಡ ಪಾಯಿಂಟ್ ಟೇಬಲ್‌ನಲ್ಲಿ (Point Table) ನಾಲ್ಕನೇ ಸ್ಥಾನಕ್ಕೇರಲಿದೆ.
ಪಂಜಾಬ್ ಕಿಂಗ್ಸ್ ತಂಡವು ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನೊಂದಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಸ್ಥಿರ ಪ್ರದರ್ಶನದ ಹೊರತಾಗಿಯೂ ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ಎದುರು ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಡೆಲ್ಲಿ ಮತ್ತು ಪಂಜಾಬ್ ತಂಡಗಳು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು ಈ ಹಿಂದೆ ಏಪ್ರಿಲ್ 20ರಂದು ನಡೆದಿದ್ದ ಪ್ರಥಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಖ್ಯವಾಗಿ ಆರಂಭಿಕ ಸಮಸ್ಯೆ ಕಾಡುತ್ತಿದೆ. ಡೇವಿಡ್ ವಾರ್ನರ್ ಅತ್ಯುತ್ತಮ ಲಯದಲ್ಲಿದ್ದಾರೆ. ತಂಡದ ರನ್ ಮೆಷಿನ್ ಆಗಿ ಗೆಲುವಿನ ರೂವಾರಿ ಕೂಡ ಆಗುತ್ತಿದ್ದಾರೆ. ಆದ್ರೆ ಪೃಥ್ವಿ ಶಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿದೆ. ಟೈಫೈಡ್ ನಿಂದ ಚೇತರಿಸಿಕೊಂಡಿರುವ ಪೃಥ್ವಿ ಶಾ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ. ಶಾ ಬದಲು ಎಸ್. ಭರತ್ ಮತ್ತು ಮನ್ ದೀಪ್ ಸಿಂಗ್ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ಪೃಥ್ವಿ ಶಾ ಅಲಭ್ಯರಾದರೆ ತಂಡಕ್ಕೆ ಮತ್ತಷ್ಟು ಬಲ ಸಿಗಲಿದೆ.
ಉಳಿದಂತೆ ರಿಷಬ್ ಪಂತ್ ಇನ್ನಷ್ಟು ಜವಾಬ್ದಾರಿಯುತವಾಗಿ ಆಡಬೇಕಿದೆ. ಲಲಿತ್ ಯಾದವ್ ಕೂಡ ತಂಡಕ್ಕೆ ಆಧಾರವಾಗಬೇಕಿದೆ. ಹಾಗೇ ರೊವ್ಮನ್ ಪೊವೆಲ್ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಬೌಲಿಂಗ್ ನಲ್ಲಿ ಆನ್ರಿಚ್ ನೊಕಿಯಾ, ಶಾರ್ದೂಲ್ ಥಾಕೂರ್ ಮತ್ತು ಚೇತನ್ ಸಕಾರಿಯಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಅಸ್ತ್ರಗಳು. ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಮ್ಯಾಜಿಕ್ ಡೆಲ್ಲಿ ತಂಡಕ್ಕೆ ಅಗತ್ಯವಿದೆ.
ಇತ್ತ ಪಂಜಾಬ್ ಕಿಂಗ್ಸ್ ತಂಡದ ಪರ ಶಿಖರ್ ಧವನ್ ಗರಿಷ್ಠ ಸ್ಕೋರರ್ ಎನಿಸಿದ್ದು ಬೊಂಬಾಟ್ ಫಾರ್ಮ್ನಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಹೆಚ್ಚಾಗಿ ಜಾನಿ ಬೇರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ನೆಚ್ಚಿಕೊಂಡಿದೆ. ಬೇರ್‌ಸ್ಟೋವ್ ಅವರನ್ನು ಕಟ್ಟಿ ಹಾಕಬೇಕಿರುವುದು ಡೆಲ್ಲಿಗೆ ದೊಡ್ಡ ಸವಾಲಾಗಿದೆ. ಕಳೆದ ಪಂದ್ಯದಲ್ಲಿ ಇವರ ಸ್ಫೋಟಕ ಬ್ಯಾಟಿಂಗ್ ಎದುರಾಳಿಯ ನಿದ್ದೆಹೆಡಿಸಿದೆ.
ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಕಳೆದ ಐದು ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ಮೂರು ತಂಡವು ಗೆಲುವನ್ನ ಸಾಧಿಸಿದೆ. ಪಂದ್ಯವು ರಾತ್ರಿ 7.30ಕ್ಕೆ ಪ್ರಾರಂಭವಾಗುವುದರಿಂದ ಇಬ್ಬನಿ ಅಂಶವು ಪರಿಣಾಮ ಬೀರಲಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಬಹುತೇಕ ಬೌಲಿಂಗ್ ಆಯ್ಕೆಗೆ ಮುಂದಾಗಬಹುದು. ಎರಡೂ ತಂಡಗಳು ಐಪಿಎಲ್‌ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. ಪಂಜಾಬ್ ಕಿಂಗ್ಸ್ 15 ಸಂದರ್ಭಗಳಲ್ಲಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಸಂಭಾವ್ಯ ತಂಡ:
ಪಂಜಾಬ್ ಕಿಂಗ್ಸ್: ಜಾನಿ ಬೇರ್‌ಸ್ಟೋವ್, ಶಿಖರ್ ಧವನ್, ಭನುಕಾ ರಾಜಪಕ್ಸಾ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್‌ವಾಲ್ (ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಹಪ್ರೀತ್ ಬ್ರಾರ್, ರಿಷಿ ಧವನ್, ಕಗಿಸೋ ರಬಾಡ, ರಾಹುಲ್ ಚಹಾರ್, ಆಶರ್ದೀಪ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್: ಶ್ರೀಕಾರ್ ಭರತ್/ ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ&ವಿಕೆಟ್ ಕೀಪರ್), ಲಲಿತ್ ಯಾದವ್, ರೋಮನ್ ಪೋವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಸಿಂಗ್, ಖಲೀಲ್ ಅಹಮ್ಮದ್, ಏನ್ರಿಚ್ ನೋಕಿಯ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:59 am, Mon, 16 May 22