ಮುಖಕ್ಕೆ ಬಿದ್ದ ಚೆಂಡು… ರಚಿನ್ ರವೀಂದ್ರಗೆ ಗಂಭೀರ ಗಾಯ
Pakistan vs New Zealand: ಆತಿಥೇಯ ಪಾಕಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 330 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಕೇವಲ 252 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದ ವೇಳೆ ನ್ಯೂಝಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಗಂಭೀರವಾಗಿ ಗಾಯಗೊಂಡು ಅರ್ಧದಲ್ಲೇ ಮೈದಾನ ತೊರೆದಿದ್ದಾರೆ.

ಪಾಕಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿತು.
331 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 35 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ಈ ಹಂತದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ಖುಷ್ದಿಲ್ ಶಾ, ಮೈಕೆಲ್ ಬ್ರೇಸ್‌ವೆಲ್ ಎಸೆದ 38ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ನತ್ತ ಬಾರಿಸಿದ್ದರು.
ಅತ್ತ ಬೌಂಡರಿ ಲೈನ್ನಲ್ಲಿದ್ದ ರಚಿನ್ ರವೀಂದ್ರ ಕ್ಯಾಚ್ ಹಿಡಿಯಲು ಓಡಿ ಬಂದಿದ್ದಾರೆ. ಆದರೆ ಫ್ಲಡ್‌ಲೈಟ್ ಬೆಳಕಿನಿಂದಾಗಿ ಚೆಂಡನ್ನು ಸರಿಯಾಗಿ ಗುರುತಿಸುವಲ್ಲಿ ರಚಿನ್ ಎಡವಿದ್ದಾರೆ. ಪರಿಣಾಮ ಬಾಲ್ ನೇರವಾಗಿ ಮುಖಕ್ಕೆ ಬಡಿದಿದೆ.
ತಕ್ಷಣವೇ ವೈದ್ಯಕೀಯ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿದ್ದು, ಈ ವೇಳೆ ಅವರ ಮುಖದಿಂದ ರಕ್ತ ಬರುತ್ತಿರುವುದು ಕಂಡು ಬಂದಿದೆ. ಈ ಗಂಭೀರ ಗಾಯದ ಕಾರಣ ರಚಿನ್ ರವೀಂದ್ರ ಅರ್ಧದಲ್ಲೇ ಮೈದಾನ ತೊರೆದಿದ್ದಾರೆ.
ರಚಿನ್ ರವೀಂದ್ರ ವಿಡಿಯೋ:
A tough moment on the field for Rachin Ravindra as an attempted catch turned into an unfortunate injury. 🤕
Get well soon, Rachin! pic.twitter.com/34dB108tpF
— FanCode (@FanCode) February 8, 2025
ಗೆದ್ದು ಬೀಗಿದ ನ್ಯೂಝಿಲೆಂಡ್:
ಇನ್ನು ಈ ಪಂದ್ಯದಲ್ಲಿ ನ್ಯೂಝಿಲೆಂಡ್ ನೀಡಿದ 331 ರನ್ಗಳ ಗುರಿಯನ್ನು ಬೆನ್ನತ್ತಿದ ಆತಿಥೇಯ ಪಾಕಿಸ್ತಾನ್ ತಂಡವು 47.5 ಓವರ್ಗಳಲ್ಲಿ 252 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಕಿವೀಸ್ ಪಡೆ ತ್ರಿಕೋನ ಸರಣಿಯ ಮೊದಲ ಮ್ಯಾಚ್ನಲ್ಲಿ 78 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಖುಷ್ದಿಲ್ ಶಾ , ಕಮ್ರಾನ್ ಗುಲಾಮ್ , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹರಿಸ್ ರೌಫ್ , ಅಬ್ರಾರ್ ಅಹ್ಮದ್.
ನ್ಯೂಝಿಲೆಂಡ್ ಪ್ಲೇಯಿಂಗ್ 11: ರಚಿನ್ ರವೀಂದ್ರ , ವಿಲ್ ಯಂಗ್ , ಕೇನ್ ವಿಲಿಯಮ್ಸನ್ , ಡ್ಯಾರಿಲ್ ಮಿಚೆಲ್ , ಟಾಮ್ ಲ್ಯಾಥಮ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಮೈಕೆಲ್ ಬ್ರೇಸ್‌ವೆಲ್ , ಮಿಚೆಲ್ ಸ್ಯಾಂಟ್ನರ್ (ನಾಯಕ) , ಮ್ಯಾಟ್ ಹೆನ್ರಿ , ಬೆನ್ ಸಿಯರ್ಸ್ , ವಿಲಿಯಂ ಒರೂಕ್.
