Rajat Patidar: ಗೇಲ್ ರೆಕಾರ್ಡ್​ ಉಡೀಸ್: ಶತಕ ಸಿಡಿಸಿ 9 ದಾಖಲೆ ಬರೆದ ಪಾಟಿದಾರ್

| Updated By: ಝಾಹಿರ್ ಯೂಸುಫ್

Updated on: May 26, 2022 | 5:04 PM

Rajat Patidar Records: ಕೇವಲ 49 ಎಸೆತಗಳಲ್ಲಿ ರಜತ್ ಪಾಟಿದಾರ್ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಈ ಶತಕದೊಂದಿಗೆ ಆರ್​ಸಿಬಿ ತಂಡದ ಯುವ ಆಟಗಾರ ಹಲವು ದಾಖಲೆಗಳನ್ನೂ ಕೂಡ ತಮ್ಮದಾಗಿಸಿಕೊಂಡರು.

Rajat Patidar: ಗೇಲ್ ರೆಕಾರ್ಡ್​ ಉಡೀಸ್: ಶತಕ ಸಿಡಿಸಿ 9 ದಾಖಲೆ ಬರೆದ ಪಾಟಿದಾರ್
rajat Patidar
Follow us on

ಚೊಚ್ಚಲ ಶತಕ…ಹಲವು ದಾಖಲೆಗಳು…ಹೌದು, ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ರಜತ್ ಪಾಟಿದಾರ್ (Rajat Patidar) ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್(LSG vs RCB)​ ವಿರುದ್ದದ ಈ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ (RCB) ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಆರ್​ಸಿಬಿ ಪರ ಅತಿರಥ ಮಹಾರಥ ಎನಿಸಿಕೊಂಡಿರುವ ಬ್ಯಾಟ್ಸ್​ಮನ್​ಗಳೇ ವಿಫಲರಾಗಿದ್ದರು. ನಾಯಕ ಫಾಫ್ ಡುಪ್ಲೆಸಿಸ್ ಶೂನ್ಯಕ್ಕೆ ಔಟಾದರೆ, ವಿರಾಟ್ ಕೊಹ್ಲಿ 25 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 9 ರನ್​ಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಒಂದೆಡೆ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದ ನಡುವೆ ಏಕಾಂಗಿಯಾಗಿ ರಜತ್ ಪಾಟಿದಾರ್ ಲಕ್ನೋ ಸೂಪರ್ ಜೈಂಟ್ಸ್​ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಮಳೆಯನ್ನು ನಿರೀಕ್ಷಿಸಲಾಗಿದ್ದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಸಿಕ್ಸ್-ಫೋರ್​ಗಳ ಸುರಿಮಳೆಯಾಯಿತು.

ಅದರಂತೆ ಕೇವಲ 49 ಎಸೆತಗಳಲ್ಲಿ ರಜತ್ ಪಾಟಿದಾರ್ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಈ ಶತಕದೊಂದಿಗೆ ಆರ್​ಸಿಬಿ ತಂಡದ ಯುವ ಆಟಗಾರ ಹಲವು ದಾಖಲೆಗಳನ್ನೂ ಕೂಡ ತಮ್ಮದಾಗಿಸಿಕೊಂಡರು. ಆ ದಾಖಲೆಗಳು ಯಾವುವು ಎಂದು ನೋಡುವುದಾದದರೆ…

  1. – ರಜತ್ ಪಾಟಿದಾರ್ ಐಪಿಎಲ್‌ನ ಪ್ಲೇಆಫ್‌ನಲ್ಲಿ ಶತಕ ಗಳಿಸಿದ ಮೊದಲ ಅನ್‌ಕ್ಯಾಪ್ ಆಟಗಾರ. ಅಂದರೆ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ಐಪಿಎಲ್​ನ ಪ್ಲೇಆಫ್​ನಲ್ಲಿ ಶತಕ ಬಾರಿಸಿದ್ದು ಇದೇ ಮೊದಲು. ಇದಕ್ಕೂ ಮುನ್ನ​ 2014ರ ಐಪಿಎಲ್‌ನ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿದ್ದು ಅನ್‌ಕ್ಯಾಪ್ಡ್‌ ಆಟಗಾರನ ಗರಿಷ್ಠ ಸ್ಕೋರ್ ಆಗಿತ್ತು.
  2. – ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಮತ್ತೊಂದು ದಾಖಲೆಯನ್ನು ಕೂಡ ರಜತ್ ಪಾಟಿದಾರ್ ತಮ್ಮದಾಗಿಸಿಕೊಂಡರು. ಅಂದರೆ ಐಪಿಎಲ್​ನ ಪ್ಲೇಆಫ್ ಪಂದ್ಯದಲ್ಲಿ ಮೂಡಿಬಂದ ಅತೀ ವೇಗದ ಶತಕ ಇದಾಗಿದೆ. ಆದರೆ ಈ ದಾಖಲೆಯನ್ನು ಪಾಟಿದಾರ್ ವೃದ್ದಿಮಾನ್ ಸಾಹ ಅವರೊಂದಿಗೆ ಹಂಚಿಕೊಂಡಿದ್ದಾರೆ. ಸಾಹ 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ ರಜತ್ ಪಾಟಿದಾರ್ ಕೂಡ 49 ಎಸೆತಗಳಲ್ಲಿ ವೇಗದ ಶತಕ ಬಾರಿಸಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
  3. ಇದನ್ನೂ ಓದಿ
    Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
    IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
    IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
    IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
  4. – ಇದು ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಅತಿ ಹೆಚ್ಚು ಸ್ಕೋರ್ ಎಂಬುದು ವಿಶೇಷ. ಕಳೆದ ಸೀಸನ್​ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ RCB ಪರ ದೇವದತ್ ಪಡಿಕ್ಕಲ್ ಅಜೇಯ 101 ಬಾರಿಸಿದ್ದರು. ಇದೀಗ ರಜತ್ ಪಾಟಿದಾರ್ 112 ರನ್​ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಪಾಲ್ ವಾಲ್ತಾಟಿ (120) ಇದ್ದು, 2ನೇ ಸ್ಥಾನದಲ್ಲಿ ಮನೀಷ್ ಪಾಂಡೆ (114) ಇದ್ದಾರೆ.
  5. – ಐಪಿಎಲ್ ಪ್ಲೇಆಫ್‌ನಲ್ಲಿ ಆಟಗಾರನೊಬ್ಬ ಶತಕ ಸಿಡಿಸಿದ ಐದನೇ ಶತಕ ಇದಾಗಿದೆ. ರಜತ್ ಪಾಟಿದಾರ್ ಔಟಾಗದೆ 112 ರನ್ ಗಳಿಸಿದ್ದು ಪ್ಲೇಆಫ್‌ನಲ್ಲಿ ಇದುವರೆಗಿನ ನಾಲ್ಕನೇ ಗರಿಷ್ಠ ಸ್ಕೋರ್ ಆಗಿದೆ.
  6. – ಎಲಿಮಿನೇಟರ್​ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ದಾಖಲೆಯನ್ನೂ ಕೂಡ ರಜತ್ ಪಾಟಿದಾರ್ ಬರೆದಿದ್ದಾರೆ. ಅಂದರೆ ಇದುವರೆಗೆ ಯಾವುದೇ ಬ್ಯಾಟ್ಸ್​ಮನ್ ಐಪಿಎಲ್​ ಎಲಿಮಿನೇಟರ್ ಪಂದ್ಯದಲ್ಲಿ ಸೆಂಚುರಿ ಬಾರಿಸಿಲ್ಲ.
  7. – ಇದಲ್ಲದೆ ನಾಕೌಟ್/ಪ್ಲೇಆಫ್ ಹಂತದಲ್ಲಿ ಆರ್​ಸಿಬಿ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆ ಕೂಡ ರಜತ್ ಪಾಟಿದಾರ್ ಪಾಲಾಗಿದೆ. ಅಂದರೆ ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಪ್ಲೇಆಫ್​ ಹಂತದಲ್ಲಿ ಆರ್​ಸಿಬಿ ಪರ ಯಾವುದೇ ಬ್ಯಾಟ್ಸ್​ಮನ್ ಮೂರಂಕಿ ರನ್​ ಕಲೆಹಾಕಿಲ್ಲ.
  8. – ಐಪಿಎಲ್ ನಾಕೌಟ್ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ ಭಾರತದ ಮೊದಲ ಅನ್​ಕ್ಯಾಪ್ಡ್​ ಆಟಗಾರ ಎಂಬ ದಾಖಲೆಯನ್ನೂ ಕೂಡ ರಜತ್ ಪಾಟಿದಾರ್ ತಮ್ಮದಾಗಿಸಿಕೊಂಡಿದ್ದಾರೆ.
  9. – ಪ್ಲೇಆಫ್​ನಲ್ಲಿ ಶತಕ ಬಾರಿಸಿದ ಭಾರತದ 4ನೇ ಆಟಗಾರ ಎಂಬ ಹಿರಿಮೆಗೂ ಪಾಟಿದಾರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸೆಹ್ವಾಗ್, ಮುರುಳಿ ವಿಜಯ್ ಹಾಗೂ ಸಾಹ ಪ್ಲೇಆಫ್​ನಲ್ಲಿ ಶತಕ ಬಾರಿಸಿದ್ದರು.
  10. – ಐಪಿಎಲ್​ ಪ್ಲೇಆಫ್‌ಗಳಲ್ಲಿ RCB ಆಟಗಾರನ ಅತ್ಯಧಿಕ ಸ್ಕೋರ್ ಕೂಡ ಇದಾಗಿದೆ. ಈ ಹಿಂದೆ ಕ್ರಿಸ್ ಗೇಲ್ ಅವರ 47 ಎಸೆತಗಳಲ್ಲಿ 89 ರನ್​ಗಳಿಸಿದ್ದು ದಾಖಲೆಯಾಗಿತ್ತು. ಇದೀಗ 112 ರನ್ ಬಾರಿಸಿ ಯೂನಿವರ್ಸ್ ಬಾಸ್ ದಾಖಲೆಯನ್ನು ಮುರಿದು ರಜತ್ ಪಾಟಿದಾರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.