
ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ವೆಸ್ಟ್ ಇಂಡೀಸ್ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ರನ್ ಮಳೆಯೇ ಹರಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 250 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 5 ರನ್ಗಳಿಗೆ ಪ್ರಮುಖ 2 ವಿಕೆಟ್‌ಗಳನ್ನು ಕಳೆದುಕೊಂಡರೂ ದಿಟ್ಟ ಹೋರಾಟ ನೀಡಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ವಿಂಡೀಸ್ ಗೆಲುವಿನ ರೂವಾರಿಗಳಾದ ನಾಯಕ ಶಾಯ್ ಹೋಪ್ ಅಜೇಯ ಶತಕ ಬಾರಿಸಿದರೆ, ರುದರ್ಫೋರ್ಡ್ ಕೂಡ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು. ವಿಂಡೀಸ್ ಗೆಲುವಿನಲ್ಲಿ ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಕೂಡ ಪ್ರಮುಖ ಪಾತ್ರವಹಿಸಿತು. ರುದರ್ಫೋರ್ಡ್ ಅವರ ಎರಡು ಕ್ಯಾಚ್‌ಗಳನ್ನು ಭಾರತ ಕೈಚೆಲ್ಲಿತು. ಇದರ ಲಾಭ ಪಡೆದ ರುದರ್ಫೋರ್ಡ್ ತಂಡವನ್ನು ಗೆಲುವಿನ ಸನಿಹಕ್ಕೆ ತರುವಲ್ಲಿ ಯಶಸ್ವಿಯಾದರು.
ರಾಂಚಿಯಲ್ಲಿ ನಡೆದ ಈ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸಂಜು ಸ್ಯಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ 249 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಸತತ ವೈಫಲ್ಯಗಳಿಂದ ಕಂಗೆಟ್ಟಿದ ಸಂಜು ಸ್ಯಾಮ್ಸನ್ ತಂಡಕ್ಕೆ ಸ್ಫೋಟಕ ಆರಂಭವನ್ನು ನೀಡಿ 41 ಎಸೆತಗಳಲ್ಲಿ 82 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಲ್ಲದೆ, ಇಶಾನ್ ಕಿಶನ್ ಕೂಡ 43 ರನ್‌ಗಳ ಕಾಣಿಕೆ ನೀಡಿದರು. ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದ ತಿಲಕ್ ವರ್ಮಾ ಮತ್ತು ನಾಯಕ ಶ್ರೇಯಸ್ ಅಯ್ಯರ್ 44 ಮತ್ತು 43 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ರಾಂಚಿಯಲ್ಲಿ ಮೊದಲ ಬಾರಿಗೆ, ಒಂದು ತಂಡವು ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 200 ರನ್‌ಗಳ ಗಡಿ ದಾಟಿದ ದಾಖಲೆ ಸೃಷ್ಟಿಯಾಯಿತು.
ಸತತ 4 ವೈಫಲ್ಯಗಳ ನಂತರ ಅಬ್ಬರದ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್..!
ಆದಾಗ್ಯೂ ಈ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ, ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜೊತೆಯಾದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮತ್ತು ಶೆರ್ಫೇನ್ ರುದರ್ಫೋರ್ಡ್ ತಂಡದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದಲ್ಲದೆ, ವೇಗವಾಗಿ ರನ್ ಗಳಿಸುವುದನ್ನು ಮುಂದುವರೆಸಿದರು. ಇದರ ಫಲವಾಗಿ ಈ ಜೋಡಿ ನಾಲ್ಕನೇ ವಿಕೆಟ್‌ಗೆ 54 ಎಸೆತಗಳಲ್ಲಿ 120 ರನ್‌ಗಳನ್ನು ಸೇರಿಸಿತು. ರುದರ್ಫೋರ್ಡ್ 84 ರನ್ ಗಳಿಸಿ ಔಟಾಗುವ ಹೊತ್ತಿಗೆ, ವೆಸ್ಟ್ ಇಂಡೀಸ್ ಅದಾಗಲೇ ಪಂದ್ಯದ ಮೇಲೆ ಬಲವಾದ ಹಿಡಿತ ಸಾಧಿಸಿತ್ತು. ಅಂತಿಮವಾಗಿ ನಾಯಕ ಶಾಯ್ ಹೋಪ್ 45 ಎಸೆತಗಳಲ್ಲಿ 102 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
Published On - 10:52 pm, Fri, 9 October 26