Ranji Trophy 2024: ಕಾವೇರಪ್ಪ ಬೆಂಕಿ ಬೌಲಿಂಗ್: ರೋಚಕಘಟ್ಟದತ್ತ ರಣಜಿ ಪಂದ್ಯ

Vidwath Kaverappa: ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿರುವ ಕೊಡಿಗಿನ ಕುವರ ವಿಧ್ವತ್ ಕಾವೇರಪ್ಪ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಕರ್ನಾಟಕ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದ್ದಾರೆ. ಇದೀಗ ದ್ವಿತೀಯ ಇನಿಂಗ್ಸ್ ಆಡುತ್ತಿರುವ ಕರ್ನಾಟಕ ತಂಡ ಗೆದ್ದರೆ ಸೆಮಿಫೈನಲ್​ಗೇರಲಿದೆ.

Ranji Trophy 2024: ಕಾವೇರಪ್ಪ ಬೆಂಕಿ ಬೌಲಿಂಗ್: ರೋಚಕಘಟ್ಟದತ್ತ ರಣಜಿ ಪಂದ್ಯ
Vidwath Kaverappa
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 27, 2024 | 10:49 AM

ನಾಗ್​ಪುರದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ವಿದರ್ಭ ನಡುವಣ ರಣಜಿ ಟ್ರೋಫಿಯ (Ranji Trophy 2024) ಕ್ವಾರ್ಟರ್ ಫೈನಲ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡವು ಅಥರ್ವ ತೈಡೆ (109) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 460 ರನ್ ಕಲೆಹಾಕಿತು. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ಪರ ನಿಕಿಲ್ ಜೋಸ್ (84) ಹಾಗೂ ರವಿಕುಮಾರ್ ಸಮರ್ಥ್ (59) ಅರ್ಧಶತಕ ಬಾರಿಸಿ ಮಿಂಚಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಕರ್ನಾಟಕ ತಂಡವು 286 ರನ್​ಗಳಿಸಿ ಆಲೌಟ್ ಆಯಿತು.

174 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡಕ್ಕೆ ಆಘಾತ ನೀಡುವಲ್ಲಿ ಯುವ ವೇಗಿ ವಿಧ್ವತ್ ಕಾವೇರಪ್ಪ ಯಶಸ್ವಿಯಾದರು. ಕರಾರುವಾಕ್ ದಾಳಿ ಸಂಘಟಿಸಿದ ಕಾವೇರಪ್ಪ ಕೇವಲ 61 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ವಿದರ್ಭ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 196 ರನ್​ಗಳಿಗೆ ಆಲೌಟ್ ಆಯಿತು.

ದ್ವಿತೀಯ ಇನಿಂಗ್ಸ್​ನಲ್ಲಿ 370 ರನ್​ಗಳ ಗುರಿ ಪಡೆದ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ (70) ಹಾಗೂ ರವಿಕುಮಾರ್ ಸಮರ್ಥ್ (40) ಭರ್ಜರಿ ಆರಂಭ ಒದಗಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡವು 4 ವಿಕೆಟ್ ಕಳೆದುಕೊಂಡು 136 ರನ್​ ಕಲೆಹಾಕಿದೆ. ಇನ್ನು ಐದನೇ ದಿನದಾಟದ ಮುಕ್ತಾಯದ ವೇಳೆಗೆ 235 ರನ್​ಗಳಿಸಿದರೆ ಕರ್ನಾಟಕ ತಂಡವು ಗೆಲುವಿನೊಂದಿಗೆ ಸೆಮಿಫೈನಲ್​ಗೇರಬಹುದು. ಹೀಗಾಗಿ ಕೊನೆಯ ದಿನದಾಟವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಪಂದ್ಯ ಡ್ರಾ ಆದರೆ ಯಾರು ವಿನ್ನರ್?

ಒಂದು ವೇಳೆ ಈ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡರೆ ವಿದರ್ಭ ತಂಡ ಸೆಮಿಫೈನಲ್​ಗೇರಲಿದೆ. ಏಕೆಂದರೆ ನಾಕೌಟ್ ಹಂತದಲ್ಲಿ ಪಂದ್ಯವು ಡ್ರಾ ಆದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿರುವ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.

ವಿದರ್ಭ ಪ್ಲೇಯಿಂಗ್ 11: ಧ್ರುವ ಶೋರೆ , ಅಥರ್ವ ತೈಡೆ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಮೋಹಿತ್ ಕಾಳೆ , ಯಶ್ ರಾಥೋಡ್ , ಆದಿತ್ಯ ಸರ್ವತೆ , ಯಶ್ ಠಾಕೂರ್ , ಹರ್ಷ ದುಬೆ , ಉಮೇಶ್ ಯಾದವ್ , ಆದಿತ್ಯ ಠಾಕರೆ.

ಇದನ್ನೂ ಓದಿ: IPL 2024: ಇಬ್ಬರು ಭಾರತೀಯರು: 10 ತಂಡಗಳ ಕೋಚ್​ ಫೈನಲ್​

ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಹಾರ್ದಿಕ್ ರಾಜ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಧೀರಜ್ ಗೌಡ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ.