
2025-26 ರ ರಣಜಿ ಟ್ರೋಫಿಯ ( Ranji Trophy 2025-26) ಫೈನಲ್ ಪಂದ್ಯವು ಭಾರತೀಯ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಅಧ್ಯಾಯವಾಗಿದೆ. ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ಬರೋಬ್ಬರಿ 67 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ.
ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 584 ರನ್ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 293 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 291 ರನ್ಗಳ ಮುನ್ನಡೆ ಸಿಕ್ಕಿತು.
ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಪ್ರಾಬಲ್ಯ ಕಾಯ್ದುಕೊಂಡು ಮುನ್ನಡೆಯನ್ನು 630 ರನ್ಗಳಿಗೆ ಕೊಂಡೊಯ್ಯಿತು. ಅಂತಿಮವಾಗಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ 291 ರನ್ಗಳ ಮುನ್ನಡೆ ಪಡೆದುಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಿತು. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಜೆಕೆ ತಂಡಕ್ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬರೋಬ್ಬರಿ 2 ಕೋಟ ರೂ. ಬಹುಮಾನ ಘೋಷಿಸಿದ್ದಾರೆ. ಇದರ ಜೊತೆಗೆ ಬಿಸಿಸಿಐನಿಂದಲೂ ಕೋಟಿ ಮೊತ್ತದ ಬಹುಮಾನ ಸಿಕ್ಕಿದೆ.
ರಣಜಿ ಟ್ರೋಫಿ ಚಾಂಪಿಯನ್ ಆಗಿರುವ ಜಮ್ಮುಕಾಶ್ಮಿರ ತಂಡ ಬಿಸಿಸಿಐನಿಂದ 5 ಕೋಟಿ ರೂ. ಬಹುಮಾನವನ್ನು ಪಡೆಯಲಿದೆ. ಹಾಗೆಯೇ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ 3 ಕೋಟಿ ರೂಗಳನ್ನು ಪಡೆಯಲಿದೆ. ಈ ಬಹುಮಾನದ ಹಣವು ತಂಡದ ಕಠಿಣ ಪರಿಶ್ರಮವನ್ನು ಗುರುತಿಸುವುದಲ್ಲದೆ, ಆಟಗಾರರಿಗೆ ಪ್ರೋತ್ಸಾಹವನ್ನೂ ನೀಡುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Sat, 28 February 26