ಕರ್ನಾಟಕ ತಂಡಕ್ಕೆ 4 ರನ್ಗಳ ಹಿನ್ನಡೆ
Saurashtra vs Karnataka: ರಣಜಿ ಟೂರ್ನಿಯ ಬಿ ಗ್ರೂಪ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಿದೆ. ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರು ದಿನದಾಟಗಳು ಮುಗಿದಿದ್ದು, ಕೊನೆಯ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸುವ ಮೂಲಕ ಕರ್ನಾಟಕ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಾಧ್ಯತೆಯಿದೆ.

ರಾಜ್ ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ತಂಡ 4 ರನ್ ಗಳ ಹಿನ್ನಡೆ ಅನುಭವಿಸಿದೆ. ಸೌರಾಷ್ಟ್ರ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಶುರು ಮಾಡಿದ ಕರ್ನಾಟಕ ತಂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ನಿಕಿನ್ ಜೋಸ್ 12 ರನ್ ಗಳಿಸಿ ಔಟಾದರೆ, ಮಯಾಂಕ್ ಅಗರ್ವಾಲ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಉತ್ತಮ ಜೊತೆಯಾಟವಾಡಿದರು.
ಮೂರನೇ ವಿಕೆಟ್ ಗೆ 146 ರನ್ ಪೇರಿಸಿದ ಬಳಿಕ (73) ಔಟಾದರು. ಆ ಬಳಿಕ ಬಂದ ಸ್ಮರಣ್ ರವಿಚಂದ್ರನ್ 77 ರನ್ ಗಳ ಕೊಡುಗೆ ನೀಡಿದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ದೇವದತ್ ಪಡಿಕ್ಕಲ್ 141 ಎಸೆತಗಳಲ್ಲಿ 96 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು.
ಇನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಗೋಪಾಲ್ 51 ರನ್ ಬಾರಿಸಿದರು. ಈ ಮೂಲಕ ಕರ್ನಾಟಕ ತಂಡ ಮೊದಲ ಇನಿಂಗ್ಸ್ ನಲ್ಲಿ 372 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಸೌರಾಷ್ಟ್ರ ಪರ ಆರಂಭಿಕ ದಾಂಡಿಗ ಚಿರಾಗ್ ಜನಿ 90 ರನ್ ಬಾರಿಸಿದರೆ, ವಸವದ 58 ರನ್ ಗಳಿಸಿದರು. ಇನ್ನು ಸಮರ್ ಗಜ್ಜರ್ ನೀಡಿದ 45 ರನ್ ಗಳ ಕೊಡುಗೆಯೊಂದಿಗೆ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್ ನಲ್ಲಿ 376 ರನ್ ಕಲೆಹಾಕಿತು. ಈ ಮೂಲಕ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ರನ್ ಗಳ ಮುನ್ನಡೆ ಪಡೆದುಕೊಂಡಿದೆ.
ದ್ವಿತೀಯ ಇನಿಂಗ್ಸ್:
4 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 89 ರನ್ ಕಲೆಹಾಕಿದೆ. ಸದ್ಯ ಕ್ರೀಸ್ ನಲ್ಲಿ ಮಯಾಂಕ್ ಅಗರ್ವಾಲ್ (31) ಹಾಗೂ ದೇವದತ್ ಪಡಿಕ್ಕಲ್ (18) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸೌರಾಷ್ಟ್ರ ಪ್ಲೇಯಿಂಗ್ 11: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ತರಂಗ್ ಗೊಹೆಲ್ , ಯುವರಾಜ್ ಸಿಂಗ್ ದೋಡಿಯಾ , ಸಮ್ಮರ್ ಗಜ್ಜರ್ , ಅರ್ಪಿತ್ ವಾಸವಾದ , ಚಿರಾಗ್ ಜಾನಿ , ಪ್ರೇರಕ್ ಮಂಕಡ್ , ಜಯದೇವ್ ಉನಾದ್ಕತ್ (ನಾಯಕ) , ಧರ್ಮೇಂದ್ರಸಿನ್ಹ್ ಜಡೇಜಾ , ಚೇತನ್ ಸಕರಿಯಾ , ಅಂಶ್ ಗೋಹಿಲಾಯ್.
ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ದೇವದತ್ ಪಡಿಕ್ಕಲ್ , ಕರುಣ್ ನಾಯರ್ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಸ್ಮರಣ್ ರವಿಚಂದ್ರನ್ , ಮುರಳೀಧರ ವೆಂಕಟೇಶ್ , ಶ್ರೇಯಸ್ ಗೋಪಾಲ್ , ಶಿಖರ್ ಶೆಟ್ಟಿ , ಅಭಿಲಾಷ್ ಶೆಟ್ಟಿ , ಮೊಹ್ಸಿನ್ ಖಾನ್.
Published On - 7:36 am, Sat, 18 October 25
