
2025-26ರ ರಣಜಿ ಟ್ರೋಫಿಯ ಫೈನಲ್ (Ranji Trophy 2025-26 Final) ಪಂದ್ಯ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ (Jammu Kashmir vs Karnataka) ನಡುವೆ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಾರುಪತ್ಯ ನಾಲ್ಕನೇ ದಿನವೂ ಮುಂದುವರೆದಿದೆ. ಮೊದಲು ಬ್ಯಾಟಿಂಗ್ನಲ್ಲಿ ಕರ್ನಾಟಕ ವೇಗಿಗಳನ್ನು ಹೈರಾಣಾಗಿಸಿದ್ದ ಜೆಕೆ ತಂಡ, ಆ ಬಳಿಕ ಬೌಲಿಂಗ್ನಲ್ಲೂ ಕರ್ನಾಟಕ ತಂಡವನ್ನು ಕಟ್ಟಿಹಾಕಿದೆ. ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡಿರುವ ಜೆಕೆ ತಂಡ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಎತ್ತಿಹಿಡಿಯುವ ಸನಿಹದಲ್ಲಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 584 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡದಿಂದ ಪ್ರತಿರೋಧವನ್ನು ನಿರೀಕ್ಷಿಸಲಾಗಿತ್ತು. ಆದರೆ ಅನುಭವಿ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದ ಕರ್ನಾಟಕ ತಂಡಕ್ಕೆ ಜೆಕೆ ಬೌಲಿಂಗ್ ವಿಭಾಗದ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಏಕಾಂಗಿ ಹೋರಾಟ ನೀಡಿದ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಶತಕದ ಇನ್ನಿಂಗ್ಸ್ ಆಡಿದರಾದರೂ ಅವರಿಗೆ ಇತರರಿಂದ ಬೆಂಬಲ ಸಿಗಲಿಲ್ಲ. ಹೀಗಾಗಿ ಕರ್ನಾಟಕ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 293 ರನ್‌ಗಳಿಗೆ ಆಲೌಟ್ ಆಯಿತು.
ಇದರಿಂದಾಗಿ, ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಸಿಕ್ಕಿತು. ಈ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ತಂಡ ನಾಲ್ಕನೇ ದಿನದಂದು 4 ವಿಕೆಟ್‌ಗಳನ್ನು ಕಳೆದುಕೊಂಡು 186 ರನ್ ಬಾರಿಸಿದೆ. ಇದರೊಂದಿಗೆ ಜೆಕೆ ತಂಡದ ಮುನ್ನಡೆ 477 ರನ್‌ಗಳಿಗೇರಿದೆ. ಹೀಗಾಗಿ ಐದನೇ ದಿನ ಕೇವಲ ಔಪಚಾರಿಕವಾಗಿದ್ದು, ಬೃಹತ್ ಮುನ್ನಡೆ ಸಾಧಿಸಿರುವ ಜಮ್ಮು ಕಾಶ್ಮೀರ ತಂಡ ಈ ಬಾರಿಯ ರಣಜಿ ಚಾಂಪಿಯನ್ ಆಗುವುದು ಬಹುತೇಕ ಖಚಿತವಾಗಿದೆ.
ಜಮ್ಮು ಮತ್ತು ಕಾಶ್ಮೀರ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ತಂಡ 6 ರನ್‌ಗಳಲ್ಲಿದ್ದಾಗ, ಯಾವರ್ ಹಸನ್ 1 ರನ್ ಗಳಿಸಿ ಔಟಾದರು. ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಶುಭಂ ಪುಂಡಿರ್ ಕೇವಲ 4 ರನ್‌ಗಳಿಗೆ ಸುಸ್ತಾದರು. ಪರಾಸ್ ಡೋಗ್ರಾ 16 ರನ್‌ಗಳಿಗೆ ಮತ್ತು ಅಬ್ದುಲ್ ಸಮದ್ 32 ರನ್‌ಗಳಿಗೆ ಔಟಾದರು. ಆದರೆ ಕಮ್ರಾನ್ ಇಕ್ಬಾಲ್ ಒಂದು ಕಡೆಯಿಂದ ಹೋರಾಟ ಮುಂದುವರಿಸಿ ಶತಕದ ಸಮೀಪಕ್ಕೆ ತಲುಪಿದ್ದಾರೆ.
ರಣಜಿ ಟ್ರೋಫಿ ಫೈನಲ್: ಕರ್ನಾಟಕದ ಆಟಗಾರನ ಜೊತೆ ಕಾಲ್ಕೆರೆದು ಜಗಳಕ್ಕಿಳಿದ ಜೆಕೆ ನಾಯಕ
ಮೇಲೆ ಹೇಳಿದಂತೆ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿಯ ಫೈನಲ್ ತಲುಪಿದ್ದು, ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿದೆ. ಐದನೇ ದಿನದಂದು ಜಮ್ಮು ಮತ್ತು ಕಾಶ್ಮೀರ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ ಎಲೈಟ್ ಡಿ ಗುಂಪಿನಲ್ಲಿತ್ತು. ಈ ಗುಂಪಿನಲ್ಲಿ ದೆಹಲಿ ಮತ್ತು ಮುಂಬೈನಂತಹ ಬಲಿಷ್ಠ ತಂಡಗಳಿದ್ದವು. ಇದರ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರ ಈ ಗುಂಪಿನಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಕ್ವಾರ್ಟರ್ ಫೈನಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಮಧ್ಯಪ್ರದೇಶವನ್ನು 56 ರನ್‌ಗಳಿಂದ ಸೋಲಿಸಿತು. ಬಳಿಕ ಸೆಮಿಫೈನಲ್‌ನಲ್ಲಿ ಬಂಗಾಳವನ್ನು 6 ವಿಕೆಟ್‌ಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ