ರಣಜಿಯಲ್ಲಿ ತನ್ನ ವಿಕೆಟ್ ಉರುಳಿಸಿದ ವೇಗಿಗೆ ಸ್ಮರಣೀಯ ಉಡುಗೊರೆ ನೀಡಿದ ಕೊಹ್ಲಿ; ವಿಡಿಯೋ
Virat Kohli: ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡಿದ್ದ ಕೊಹ್ಲಿ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ತನ್ನನ್ನು ಕ್ಲೀನ್ ಬೌಲ್ಡ್ ಮಾಡಿದ ಬೌಲರ್‌ಗೆ ಕೊಹ್ಲಿ ತಮ್ಮ ಆಟೋಗ್ರಾಫ್‌ನೊಂದಿಗೆ ಚೆಂಡನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಸಿಸಿಐ ಕಟ್ಟು ನಿಟ್ಟಿನ ಆದೇಶದ ಮೇರೆಗೆ ದೇಶೀ ಕ್ರಿಕೆಟ್ನತ್ತ ಮುಖ ಮಾಡಿದ ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರೂ ಕೂಡ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಟಗಾರರ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಪ್ರತಿಯೊಬ್ಬರು ದೇಶೀ ಟೂರ್ನಿಯನ್ನು ಆಡಲೇಬೇಕೆಂಬ ಸೂಚನೆ ನೀಡಿತ್ತು. ಅದರಂತೆ ದೇಶೀ ಟೂರ್ನಿ ರಣಜಿ ಅಂಗಳದಲ್ಲಿ ಬಹಳ ವರ್ಷಗಳ ನಂತರ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್, ಕೆಎಲ್ ರಾಹುಲ್ ಸೇರಿದಂತೆ ಇನ್ನು ಅನೇಕ ಆಟಗಾರರಿಗೆ ಅರ್ಧಶತಕದ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಡೆಲ್ಲಿ ಪರ ರಣಜಿ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿತ್ತು. ಆದರೆ ಕೊಹ್ಲಿಗೆ ಒಂದಂಕಿಯನ್ನು ದಾಟಲು ಸಾಧ್ಯವಾಗದೆ ಕ್ಲೀನ್ ಬೌಲ್ಡ್ ಆಗಿದ್ದರು. ಇದೀಗ ತನ್ನ ವಿಕೆಟ್ ಉರುಳಿಸಿದ್ದ ಎದುರಾಳಿ ತಂಡದ ಆ ಬೌಲರ್‌ಗೆ ಕೊಹ್ಲಿ ಸ್ಮರಣೀಯ ಉಡುಗೊರೆಯೊಂದನ್ನು ನೀಡಿದ್ದಾರೆ.
12 ವರ್ಷಗಳ ನಂತರ ರಣಜಿ
ವಾಸ್ತವವಾಗಿ ರಣಜಿ ಟ್ರೋಫಿಯ ಏಳನೇ ಸುತ್ತಿನಲ್ಲಿ ದೆಹಲಿ ಮತ್ತು ರೈಲ್ವೇಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ದೆಹಲಿ ತಂಡ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ದೆಹಲಿ ಪರ ಕಣಕ್ಕಿಳಿದಿದ್ದರು. ಕೊಹ್ಲಿ ಬರೋಬ್ಬರಿ 12 ವರ್ಷಗಳ ನಂತರ ರಣಜಿ ಪಂದ್ಯವನ್ನಾಡಿದರಾದರೂ ವಿರಾಟ್ ಅವರ ಕಳಪೆ ಪ್ರದರ್ಶನ ರಣಜಿಯಲ್ಲೂ ಮುಂದುವರೆದಿತ್ತು.
ಈ ಪಂದ್ಯದಲ್ಲಿ ಕೊಹ್ಲಿಗೆ ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಆ ಇನ್ನಿಂಗ್ಸ್ನಲ್ಲೂ ಕೊಹ್ಲಿ ಕೇವಲ 6 ರನ್ ಗಳಿಸಿ ಔಟಾದರು. ರೈಲ್ವೇಸ್ ತಂಡದ ವೇಗದ ಬೌಲರ್ ಹಿಮಾಂಶು ಸಂಗ್ವಾನ್ ಎಸೆತದಲ್ಲಿ ಕೊಹ್ಲಿ ಕ್ಲೀನ್ ಬೌಲ್ಡ್ ಆದರು. ಇದೀಗ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಿಮಾಂಶು ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
विराट कोहली से गेंद पर हस्ताक्षर लेते हिमांशु सांगवानी #विराटकोहली #ViratKohli𓃵 Nice gesture by Virat Kohli😧 pic.twitter.com/P5WAib5g65
— Lokesh sharma/ लोकेश शर्मा (@lokeshreporter) February 2, 2025
This 5 wicket haul will always be close to my heart. Legend himself Virat Kohli bhaiya signing the ball for me made it more special. God is great and kind ❤️@imVkohli @delhi_cricket #RanjiTrophy2025 #RadheyRadhey pic.twitter.com/BJz66JZXG6
— Shivvam Sharma (@imshivamsharma9) February 1, 2025
ಹಿಮಾಂಶುಗೆ ವಿಶೇಷ ಉಡುಗೊರೆ
ವೈರಲ್ ಆಗಿರುವ ವಿಡಿಯೋದಲ್ಲಿ, ಪಂದ್ಯ ಮುಗಿದ ನಂತರ ರೈಲ್ವೇಸ್ ತಂಡದ ವೇಗಿ ಹಿಮಾಂಶು ಸಂಗ್ವಾನ್ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಅದೇ ಚೆಂಡಿನೊಂದಿಗೆ ದೆಹಲಿ ಡ್ರೆಸ್ಸಿಂಗ್ ಕೋಣೆಗೆ ತೆರಳಿದ್ದಾರೆ. ಈ ಸಮಯದಲ್ಲಿ ಕೊಹ್ಲಿ ಹಿಮಾಂಶು ಅವರನ್ನು ಇದು ಅದೇ ಚೆಂಡು ತಾನೆ ಎಂದು ಕೇಳಿದ್ದಾರೆ. ಹಿಮಾಂಶು ಹೌದು ಎಂದು ಹೇಳಿದಾಗ, ಕೊಹ್ಲಿ ಉತ್ತಮವಾಗಿ ಬೌಲ್ ಮಾಡಿದೆ, ತುಂಬಾ ಖುಷಿ ಕೊಟ್ಟಿತು ಎಂದು ಹೇಳಿದ್ದಾರೆ. ಇದಾದ ನಂತರ, ವಿರಾಟ್ ಆ ಚೆಂಡಿನ ಮೇಲೆ ಹಿಮಾಂಶು ಸಾಂಗ್ವಾನ್‌ಗೆ ತಮ್ಮ ಆಟೋಗ್ರಾಫ್ ನೀಡಿದ್ದಾರೆ. ಆ ಬಳಿಕ ಹಿಮಾಂಶುರನ್ನು ಹೊಗಳಿದ ಕೊಹ್ಲಿ, ‘ನಾನು ನಿಮ್ಮ ಬಗ್ಗೆ ಕೇಳಿದ್ದೇನೆ. ನೀವು ಒಳ್ಳೆಯ ಬೌಲರ್. ನಿಮ್ಮ ಭವಿಷ್ಯಕ್ಕೆ ಶುಭಾಶಯಗಳು’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ