ರಶೀದ್ ಖಾನ್ ಸ್ಪಿನ್ ಮೋಡಿ: 20 ಎಸೆತಗಳಲ್ಲಿ 5 ವಿಕೆಟ್​!

MI London vs Manchester Super Giants: ದಿ ಹಂಡ್ರೆಡ್ ಲೀಗ್​ನ 18ನೇ ಪಂದ್ಯದಲ್ಲಿ ಎಂಐ ಲಂಡನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಲಂಡನ್ 100 ಎಸೆತಗಳಲ್ಲಿ 183 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡ 95 ಎಸೆತಗಳಲ್ಲಿ 138 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಂಐ ಲಂಡನ್ ತಂಡ 45 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ರಶೀದ್ ಖಾನ್ ಸ್ಪಿನ್ ಮೋಡಿ: 20 ಎಸೆತಗಳಲ್ಲಿ 5 ವಿಕೆಟ್​!
Rashid Khan
Image Credit source: MI London

Updated on: Aug 03, 2026 | 8:34 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ 5 ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಅದು ಸಹ 20 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಪ್ರತಿ ಇನ್ನಿಂಗ್ಸ್‌ಗೆ ಇರುವುದು ಕೇವಲ 100 ಎಸೆತಗಳು ಮಾತ್ರ. ಬ್ಯಾಟರ್‌ಗಳ ಅಬ್ಬರವೇ ಹೆಚ್ಚಾಗಿರುವ 100 ಎಸೆತಗಳ ಈ ಟೂರ್ನಿಯಲ್ಲಿ ಕೇವಲ 20 ಎಸೆತಗಳ ಕೋಟಾದಲ್ಲಿ ಎದುರಾಳಿ ಪಡೆಯ 5 ವಿಕೆಟ್ ಪಡೆಯುವುದು ಅತಿ ದೊಡ್ಡ ಸಾಹಸವೇ ಸರಿ.

2021 ರಲ್ಲಿ ಆರಂಭವಾದ ಈ ಲೀಗ್‌ನ ಪುರುಷರ ವಿಭಾಗದಲ್ಲಿ ಇದುವರೆಗೆ ಕೇವಲ 8 ಮಂದಿ ಬೌಲರ್‌ಗಳು ಮಾತ್ರ ಈ ಐತಿಹಾಸಿಕ ಮೈಲಿಗಲ್ಲು ತಲುಪಲು ಯಶಸ್ವಿಯಾಗಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್.

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಲಂಡನ್ ಪರ ಕಣಕ್ಕಿಳಿದ ರಶೀದ್ ಖಾನ್, ಟಿಮ್ ಸೈಫರ್ಟ್, ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಟಾಮ್ ಮೂರ್ಸ್ ಹಾಗೂ ಲಿಯಾಮ್ ಡಾಸನ್ ವಿಕೆಟ್ ಕಬಳಿಸಿದರು. ಈ ಮೂಲಕ ಕೇವಲ 20 ಎಸೆತಗಳಲ್ಲಿ 17 ರನ್​ ನೀಡಿ 5 ವಿಕೆಟ್​ಗಳ ಸಾಧನೆ ಮಾಡಿದರು.

ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

ಈ ಸಾಧನೆ ಏಕೆ ಇಷ್ಟೊಂದು ವಿಶೇಷ?

ಸಾಮಾನ್ಯ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್‌ಗೆ 24 ಎಸೆತಗಳ ಅವಕಾಶ ಇರುತ್ತದೆ. ಆದರೆ ದಿ ಹಂಡ್ರೆಡ್‌ನಲ್ಲಿ ಬೌಲರ್‌ಗೆ ಸಿಗುವುದು ಕೇವಲ 20 ಎಸೆತಗಳು (5 ಅಥವಾ 10 ಎಸೆತಗಳ ಸ್ಪೆಲ್) ಮಾತ್ರ. ಈ 20 ಎಸೆತಗಳ ಅತ್ಯಲ್ಪ ಅವಧಿಯಲ್ಲಿ ಬ್ಯಾಟರ್‌ಗಳು ಪ್ರತಿಯೊಂದು ಚೆಂಡನ್ನೂ ಬೌಂಡರಿಗಟ್ಟಲು ಯತ್ನಿಸುತ್ತಿರುತ್ತಾರೆ.

ಇಂತಹ ಒತ್ತಡದ ಪರಿಸ್ಥಿತಿಯಲ್ಲೂ ರನ್ ನಿಯಂತ್ರಿಸಿ, ಎದುರಾಳಿ ಪಡೆಯ ಅರ್ಧದಷ್ಟು ತಂಡವನ್ನು ಒಬ್ಬನೇ ಬೌಲರ್ ಪೆವಿಲಿಯನ್‌ಗೆ ಅಟ್ಟುವುದು ನಿಜಕ್ಕೂ ಶ್ರೇಷ್ಠ ಪ್ರದರ್ಶನ.

ಹೀಗಾಗಿಯೇ, ನೂರಾರು ಪಂದ್ಯಗಳು ಮುಗಿದಿದ್ದರೂ ದಿ ಹಂಡ್ರೆಡ್ ಲೀಗ್‌ನಲ್ಲಿ ಕೇವಲ 8 ಬೌಲರ್‌ಗಳಿಗೆ ಮಾತ್ರ 5 ವಿಕೆಟ್​ಗಳ ಗೊಂಚಲು​ ಪಡೆಯಲು ಸಾಧ್ಯವಾಗಿದೆ.

‘ದಿ ಹಂಡ್ರೆಡ್’ ಲೀಗ್‌ನಲ್ಲಿ 5 ವಿಕೆಟ್ ಪಡೆದ ಬೌಲರ್​ಗಳು:

ಕ್ರಮಾಂಕ ಬೌಲರ್ ಹೆಸರು ವಿಕೆಟ್/ರನ್ ತಂಡ ಸೀಸನ್ ಎದುರಾಳಿ ತಂಡ
1 ಮಾರ್ಚೆಂಟ್ ಡಿ ಲ್ಯಾಂಗೆ 5 / 20 ಟ್ರೆಂಟ್ ರಾಕೆಟ್ಸ್ 2021 ಸದರ್ನ್ ಬ್ರೇವ್
2 ಇಮ್ರಾನ್ ತಾಹಿರ್ 5 / 25 ಬರ್ಮಿಂಗ್ಹ್ಯಾಮ್ ಫೀನಿಕ್ಸ್ 2021 ವೆಲ್ಷ್ ಫೈರ್
3 ಹೆನ್ರಿ ಬ್ರೂಕ್ಸ್ 5 / 25 ಬರ್ಮಿಂಗ್ಹ್ಯಾಮ್ ಫೀನಿಕ್ಸ್ 2022 ಸದರ್ನ್ ಬ್ರೇವ್
4 ಜೋಶ್ ಲಿಟಲ್ 5 / 13 ಮ್ಯಾಂಚೆಸ್ಟರ್ ಒರಿಜಿನಲ್ಸ್ 2022 ಓವಲ್ ಇನ್ವಿನ್ಸಿಬಲ್ಸ್
5 ಕ್ಯಾಲ್ವಿನ್ ಹ್ಯಾರಿಸನ್ 5 / 11 ಮ್ಯಾಂಚೆಸ್ಟರ್ ಒರಿಜಿನಲ್ಸ್ 2023 ನಾರ್ದರ್ನ್ ಸೂಪರ್‌ಚಾರ್ಜರ್ಸ್
6 ಸ್ಯಾಮ್ ಕರ್ರನ್ 5 / 16 ಓವಲ್ ಇನ್ವಿನ್ಸಿಬಲ್ಸ್ 2024 ಲಂಡನ್ ಸ್ಪಿರಿಟ್
7 ಟಿಮ್ ಸೌಥಿ 5 / 12 ಬರ್ಮಿಂಗ್ಹ್ಯಾಮ್ ಫೀನಿಕ್ಸ್ 2024 ಟ್ರೆಂಟ್ ರಾಕೆಟ್ಸ್
8 ರಶೀದ್ ಖಾನ್ 5 / 17 ಎಂಐ ಲಂಡನ್ 2026 ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್

 

Loading...
Unable to load recommendations.
Follow Us