ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ಗೆ ತಣ್ಣೀರೆರಚಿದ ಭಾರತದ ಯುವ ಸ್ಪಿನ್ನರ್
Ravichandran Ashwin: ಅಶ್ವಿನ್ ಅವರ ಆಫ್ ಸ್ಪಿನ್ ಅನ್ನು ಎದುರಿಸಲು ಆಸ್ಟ್ರೇಲಿಯಾ ಬ್ಯಾಟರ್ಗಳು ಮಹೇಶ್ ಪಿಥಿಯಾ ಮೂಲಕ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಬಾರಿ ಕೂಡ ವಿಶ್ವಕಪ್ಗೂ ಮುನ್ನ ಪಿಥಿಯಾ ಅವರನ್ನು ಕರೆಸಿಕೊಳ್ಳಲು ಆಸೀಸ್ ಪಡೆ ಮುಂದಾಗಿತ್ತು. ಆದರೀಗ ಆಸ್ಟ್ರೇಲಿಯಾ ತಂಡ ನೀಡಿದ ಆಫರ್ ಅನ್ನು ಮಹೇಶ್ ಫಿಥಿಯಾ ತಿರಸ್ಕರಿಸಿದ್ದಾರೆ.
ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಅಕ್ಟೋಬರ್ 5 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ಮುಖಾಮುಖಿಯಾದರೆ, ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ರಣತಂತ್ರ ಹೂಡಲು ಆಸ್ಟ್ರೇಲಿಯಾ ತಂಡ ಸಜ್ಜಾಗಿತ್ತು. ಆದರೆ ಈ ಪ್ರಿಪ್ಲ್ಯಾನ್ಗೆ ಭಾರತದ ಯುವ ಸ್ಪಿನ್ನರ್ ಮಹೇಶ್ ಪಿಥಿಯಾ ತಣ್ಣೀರೆರಚಿದ್ದಾರೆ.
ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವು ಮಹೇಶ್ ಪಿಥಿಯಾ ಅವರನ್ನು ನೆಟ್ ಬೌಲರ್ ಆಗಿ ನೇಮಿಸಿಕೊಳ್ಳಲು ಮುಂದಾಗಿತ್ತು. ಏಕೆಂದರೆ ಮಹೇಶ್ ಅವರ ಬೌಲಿಂಗ್ ಶೈಲಿಯು ಥೇಟ್ ಅಶ್ವಿನ್ ಅವರ ಬೌಲಿಂಗ್ ಅನ್ನು ಹೋಲುತ್ತದೆ. ಹೀಗಾಗಿಯೇ ಕಳೆದ ಬಾರಿ ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ಆಸ್ಟ್ರೇಲಿಯನ್ ತಂಡದ ನೆಟ್ ಸೆಷನ್‌ಗಳಲ್ಲಿ ಮಹೇಶ್ ಪಿಥಿಯಾ ಕಾಣಿಸಿಕೊಂಡಿದ್ದರು.
ಇತ್ತ ಅಶ್ವಿನ್ ಅವರ ಆಫ್ ಸ್ಪಿನ್ ಅನ್ನು ಎದುರಿಸಲು ಆಸ್ಟ್ರೇಲಿಯಾ ಬ್ಯಾಟರ್ಗಳು ಮಹೇಶ್ ಪಿಥಿಯಾ ಮೂಲಕ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಬಾರಿ ಕೂಡ ವಿಶ್ವಕಪ್ಗೂ ಮುನ್ನ ಪಿಥಿಯಾ ಅವರನ್ನು ಕರೆಸಿಕೊಳ್ಳಲು ಆಸೀಸ್ ಪಡೆ ಮುಂದಾಗಿತ್ತು. ಆದರೀಗ ಆಸ್ಟ್ರೇಲಿಯಾ ತಂಡ ನೀಡಿದ ಆಫರ್ ಅನ್ನು ಮಹೇಶ್ ಫಿಥಿಯಾ ತಿರಸ್ಕರಿಸಿದ್ದಾರೆ.
21 ವರ್ಷದ ಮಹೇಶ್ ಪಿಥಿಯಾ ಅಶ್ವಿನ್ ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಇದೀಗ ಭಾರತೀಯ ಬೌಲರ್ ವಿರುದ್ಧ ರಣತಂತ್ರ ಹೆಣೆಯಲು ಮತ್ತೊಮ್ಮೆ ಫಿಥಿಯಾ ಅವರ ಮೊರೆ ಹೋಗಲು ನಿರ್ಧರಿಸಿದ್ದ ಆಸ್ಟ್ರೇಲಿಯಾ ಪಡೆಗೆ ನಿರಾಸೆಯಾಗಿದೆ.
ಈ ಬಗ್ಗೆ ಮಾತನಾಡಿದ ಮಹೇಶ್ ಫಿಥಿಯಾ, ನನಗೆ ಗೊತ್ತು ಇದು ಅತ್ಯುತ್ತಮ ಅವಕಾಶವಾಗಿತ್ತು. ಏಕೆಂದರೆ ರಾಷ್ಟ್ರೀಯ ತಂಡದ ಬ್ಯಾಟರ್ಗಳಿಗೆ ಬೌಲಿಂಗ್ ಮಾಡುವುದರಿಂದ ಉತ್ತಮ ಅನುಭವ ಸಿಗುತ್ತದೆ. ಆದರೆ ನಾನು ಈ ಬಾರಿಯ ದೇಶೀಯ ಟೂರ್ನಿಯಲ್ಲಿ ನಾನು ಬರೋಡಾ ಪರ ಆಡಲು ನಿರ್ಧರಿಸಿದ್ದೇನೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ಆಫರ್ ಅನ್ನು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ಇತ್ತ ಮಹೇಶ್ ಪಿಥಿಯಾ ಅವರ ಈ ನಿರ್ಧಾರ ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಬಹುದು. ಏಕೆಂದರೆ ಭಾರತ ತಂಡವು ಆಸ್ಟ್ರೇಲಿಯಾವನ್ನು ಚೆನ್ನೈನ ಚೆಪಾಕ್ ಮೈದಾನದಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ನ ಅತ್ಯಂತ ಯಶಸ್ವಿ ನಾಯಕ ಯಾರು ಗೊತ್ತಾ?
ಹೀಗಾಗಿಯೇ ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ವಿರುದ್ಧ ರಣತಂತ್ರ ಹೆಣೆಯಲು ಪ್ಲ್ಯಾನ್ ರೂಪಿಸಿತ್ತು. ಆದರೀಗ ಆಸೀಸ್ ಪಡೆಯ ಆಫರ್ ಅನ್ನು ನಿರಾಕರಿಸುವ ಮೂಲಕ ಭಾರತೀಯ ಯುವ ಸ್ಪಿನ್ನರ್ ಬಿಗ್ ಶಾಕ್ ನೀಡಿದ್ದಾರೆ.