ICC World Cup 2023: ಪಾಕಿಸ್ತಾನ್ ಸೆಮಿಫೈನಲ್ಗೇರಿದರೆ ಪಂದ್ಯ ಸ್ಥಳಾಂತರ..!
ICC World cup 2023: 2016 ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿತ್ತು. ಅಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಕೋರಿಕೆಯ ಮೇರೆಗೆ ಐಸಿಸಿ ಕೊಲ್ಕತ್ತಾಗೆ ಸ್ಥಳಾಂತರಿಸಿತ್ತು.
ಏಕದಿನ ವಿಶ್ವಕಪ್ ರಂಗೇರಲು ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಅಕ್ಟೋಬರ್ 5 ರಿಂದ ಶುರುವಾಗಲಿರುವ ಕ್ರಿಕೆಟ್ ಮಹಾಸಮರದ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ ತಂಡಗಳಾದ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ಕಣಕ್ಕಿಳಿಯಲಿದೆ. ಇನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಒಟ್ಟು ಹತ್ತು ತಂಡಗಳ ನಡುವಣ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ 45 ಪಂದ್ಯಗಳು ನಡೆಯಲಿದೆ. ಅಂದರೆ ಪ್ರತಿ ತಂಡಗಳು ಉಳಿದ 9 ತಂಡಗಳ ವಿರುದ್ಧ ಒಂದೊಂದು ಪಂದ್ಯವಾಡಲಿದೆ. ಇದಾದ ಬಳಿಕ ಅಂಕಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್ಗೇರಲಿದೆ. ಅದರಂತೆ ನವೆಂಬರ್ 15 ಮತ್ತು 16 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದೆ.
ಇಲ್ಲಿ ಮೊದಲ ಸೆಮಿಫೈನಲ್ಗೆ ಮುಂಬೈನ ವಾಂಖೆಡೆ ಮೈದಾನವನ್ನು ನಿಗದಿ ಮಾಡಲಾಗಿದ್ದರೆ, 2ನೇ ಸೆಮಿಫೈನಲ್ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನ್ ಸೆಮಿಫೈನಲ್ಗೇರಿದರೆ ಸ್ಟೇಡಿಯಂ ಬದಲಾಗಲಿದೆ.
ಪಾಕ್ಗೆ ಕೊಲ್ಕತ್ತಾದಲ್ಲಿ ಪಂದ್ಯ:
ಒಂದು ವೇಳೆ ಪಾಕಿಸ್ತಾನ್ ತಂಡವು ಮೊದಲ ಸೆಮಿಫೈನಲ್ಗೆ ಪ್ರವೇಶಿಸಿದರೆ ಆ ಪಂದ್ಯವು ಮುಂಬೈ ಬದಲಿಗೆ ಕೊಲ್ಕತ್ತಾದಲ್ಲಿ ನಡೆಯಲಿದೆ. ಈ ಹಿಂದೆಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಇಂತಹದೊಂದು ಕೋರಿಕೆಯನ್ನು ಸಲ್ಲಿಸಿತ್ತು. ಅದರಂತೆ ಮೊದಲ ಸೆಮಿಫೈನಲ್ಗೆ ಪಾಕಿಸ್ತಾನ್ ಅರ್ಹತೆ ಪಡೆದರೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ಸೆಮಿಫೈನಲ್ನಲ್ಲಿ ಮುಖಾಮುಖಿಯಾದರೂ ಕೂಡ ಆ ಪಂದ್ಯ ಕೊಲ್ಕತ್ತಾದಲ್ಲೇ ಜರುಗಲಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಹಾಗೆಯೇ 2ನೇ ಸೆಮಿಫೈನಲ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲಾಗುತ್ತದೆ.
ಇನ್ನು ಪಾಕಿಸ್ತಾನ್ ತಂಡ 2ನೇ ಸೆಮಿಫೈನಲ್ಗೆ ಅರ್ಹತೆ ಪಡೆದರೆ ಆ ಪಂದ್ಯವನ್ನು ಸ್ಥಳಾಂತರ ಮಾಡುವುದಿಲ್ಲ. ಏಕೆಂದರೆ 2ನೇ ಸೆಮಿಫೈನಲ್ಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವನ್ನು ನಿಗದಿಪಡಿಸಲಾಗಿದೆ.
2016 ರಲ್ಲೂ ಬದಲಾಗಿದ್ದ ಸ್ಟೇಡಿಯಂ:
2016 ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್ಗೆ ಪ್ರವೇಶಿಸಿತ್ತು. ಅಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಕೋರಿಕೆಯ ಮೇರೆಗೆ ಐಸಿಸಿ ಕೊಲ್ಕತ್ತಾಗೆ ಸ್ಥಳಾಂತರಿಸಿತ್ತು. ಇದೀಗ ಈ ಬಾರಿಯ ವಿಶ್ವಕಪ್ನಲ್ಲೂ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲೇ ಸೆಮಿಫೈನಲ್ ಆಡಲು ಪಾಕಿಸ್ತಾನ್ ತಂಡ ನಿರ್ಧರಿಸಿರುವುದು ವಿಶೇಷ.
ಇದನ್ನೂ ಓದಿ: ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಫೈನಲ್ ಪಂದ್ಯ ಯಾವಾಗ?
ಪಾಕಿಸ್ತಾನ್ ಮೊದಲ ಸೆಮಿಫೈನಲ್ಗೆ ಅರ್ಹತೆ ಪಡೆದರೆ ಮಾತ್ರ ಸ್ಟೇಡಿಯಂ ಬದಲಾಗಲಿದೆ. ಇದಾಗ್ಯೂ ಫೈನಲ್ ಪಂದ್ಯ ನಡೆಯುವುದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ನವೆಂಬರ್ 19 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಯಾರು ಮುಖಾಮುಖಿಯಾಗಲಿದ್ದಾರೆ ಎಂಬುದೇ ಈಗ ಕುತೂಹಲ.