IPL 2025: ತವರಿನ ಸೋಲಿಗೆ ತವರಿನಲ್ಲೇ ಉತ್ತರ; ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ ಆರ್​ಸಿಬಿ

RCB's Revenge: ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದ ಆರ್​ಸಿಬಿ, ಇದೀಗ ಮುಲ್ಲನ್‌ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಗಳಿಸಿದರೆ, ಆರ್​ಸಿಬಿ 7 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿತು

IPL 2025: ತವರಿನ ಸೋಲಿಗೆ ತವರಿನಲ್ಲೇ ಉತ್ತರ; ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡ ಆರ್​ಸಿಬಿ
Rcb Win

Updated on: Apr 20, 2025 | 7:18 PM

ಕೇವಲ 2 ದಿನಗಳ ಹಿಂದೆ ಇದೇ ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋತಿದ್ದ ಆರ್​ಸಿಬಿ (PBKS vs RCB), ಇದೀಗ ಪಂಜಾಬ್ ತವರಿನಲ್ಲಿ ಅವರನ್ನೇ ಮಕಾಡೆ ಮಲಗಿಸಿದೆ. ಮುಲ್ಲನ್‌ಪುರದ ಮಹಾರಾಜ ಯದ್ವಿಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ (IPL 2025) 37ನೇ ಪಂದ್ಯದಲ್ಲಿ ರಜತ್ ಪಡೆ, ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಟೂರ್ನಿಯಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿರುವ ಆರ್​ಸಿಬಿ ತವರಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ತವರಿನಿಂದ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ತವರಿನಿಂದ ಹೊರಗಿನ ಪಂದ್ಯಗಳಲ್ಲಿ 100 ಪ್ರತಿಶತ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಿದೆ.

ಆರ್​​ಸಿಬಿ ಬೌಲರ್​ಗಳ ಅಮೋಘ ಬೌಲಿಂಗ್

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ಆರ್​ಸಿಬಿ ಬೌಲರ್​ಗಳು ಆರಂಭದಲ್ಲಿ ಸರಾಗವಾಗಿ ರನ್​ ಬಿಟ್ಟುಕೊಟ್ಟರೂ ಆ ಬಳಿಕ ಕಡಿಮೆ ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಹೀಗಾಗಿ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ ಅತ್ಯಧಿಕ 33 ರನ್ ಗಳಿಸಿದರೆ, ಕೊನೆಯಲ್ಲಿ ಹೋರಾಡಿದ ಶಶಾಂಕ್ ಸಿಂಗ್ ಅಜೇಯ 31 ರನ್ ಗಳಿಸಿ ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ದರು. ಜೋಶ್ ಇಂಗ್ಲಿಸ್ ಕೂಡ 29 ರನ್ ಮತ್ತು ಮಾರ್ಕೊ ಯಾನ್ಸೆನ್ 25 ರನ್​ಗಳ ಕಾಣಿಕೆ ನೀಡಿದರು.

ಮತ್ತೊಂದೆಡೆ,ಆರ್‌ಸಿಬಿ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಕೃನಾಲ್ ಪಾಂಡ್ಯ ತಮ್ಮ 4 ಓವರ್‌ಗಳ ಖೋಟಾದಲ್ಲಿ ಕೇವಲ 25 ರನ್‌ ನೀಡಿ 2 ವಿಕೆಟ್ ಪಡೆದರು. ಸುಯಶ್ ಶರ್ಮಾ ಕೂಡ 4 ಓವರ್‌ಗಳಲ್ಲಿ 26 ರನ್‌ಗಳಿಗೆ 2 ವಿಕೆಟ್ ಪಡೆದರು. ಈ ಇಬ್ಬರ ಹೊರತಾಗಿ, ರೊಮಾರಿಯೊ ಶೆಫರ್ಡ್ 1 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಯಾವುದೇ ವಿಕೆಟ್ ಪಡೆಯದಿದ್ದರೂ ರನ್​ಗಳಿಗೆ ಕಡಿವಾಣ ಹಾಕಿದರು.

IPL 2025: ಆರ್​ಸಿಬಿ ಬೌಲರ್​​ಗಳ ಪರಾಕ್ರಮ; ಒಮ್ಮೆಯೂ 50 ರನ್ ಗಡಿ ದಾಟದ 8 ಎದುರಾಳಿ ತಂಡಗಳು

ವಿರಾಟ್-ಪಡಿಕ್ಕಲ್ ಅರ್ಧಶತಕ

158 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್ 1 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಆದರೆ ಇದಾದ ನಂತರ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ನಡುವೆ ಪಂದ್ಯ ಗೆಲ್ಲುವ ಪಾಲುದಾರಿಕೆ ಕಂಡುಬಂದಿತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು. ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 174.28 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 61 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 73 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಆರ್​ಸಿಬಿ 10 ಅಂಕ ಸಂಪಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Sun, 20 April 25