Houlihan Lokey: ಈ ಸಲ ಕಪ್​ ಗೆದ್ದು ಮಾರುಕಟ್ಟೆ ಮೌಲ್ಯಮಾಪನದಲ್ಲಿ CSK ತಂಡವನ್ನು ಧೂಳಿಪಟ ಮಾಡಿದ RCB

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್​ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಅದು ಕೂಡ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಗಳನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

Houlihan Lokey: ಈ ಸಲ ಕಪ್​ ಗೆದ್ದು ಮಾರುಕಟ್ಟೆ ಮೌಲ್ಯಮಾಪನದಲ್ಲಿ CSK ತಂಡವನ್ನು ಧೂಳಿಪಟ ಮಾಡಿದ RCB
RCB - CSK
Edited By:

Updated on: Jul 08, 2025 | 3:57 PM

ಇಂಡಿಯನ್ ಪ್ರೀಮಿಯರ್ ಲೀಗ್​ನ ಅತ್ಯಂತ ಮೌಲ್ಯಯುತ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಹೊರಹೊಮ್ಮಿದೆ. ಕಳೆದ ಬಾರಿ ಅಗ್ರಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯನ್ನು ಹಿಂದಿಕ್ಕಿ ಆರ್​ಸಿಬಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಹೌಲಿಹಾನ್ ಲೋಕೆ ಅವರ ಇತ್ತೀಚಿನ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಅಭೂತಪೂರ್ವ ಆರ್ಥಿಕ ಜಿಗಿತ ಕಂಡಿದೆ. ಈ ಜಿಗಿತದೊಂದಿಗೆ ಆರ್​ಸಿಬಿ ಫ್ರಾಂಚೈಸಿಯು ಹೆಚ್ಚಿನ ಮೌಲ್ಯಯುತ ತಂಡವಾಗಿ ರೂಪುಗೊಂಡಿದೆ.

ಐಪಿಎಲ್​ನ ವ್ಯವಹಾರ ಮೌಲ್ಯಮಾಪನವು ವರ್ಷದಿಂದ ವರ್ಷಕ್ಕೆ ಶೇ. 12.9 ರಷ್ಟು ಹೆಚ್ಚಾಗಿ $18.5 ಬಿಲಿಯನ್ ( 1.56 ಟ್ರಿಲಿಯನ್) ತಲುಪಿದೆ. ಈ ಮೂಲಕ ಐಪಿಎಲ್​ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್‌ಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೌಲಿಹಾನ್ ಲೋಕೆ ಅವರ ಬ್ರಾಂಡ್ ಮೌಲ್ಯಮಾಪನ ಅಧ್ಯಯನ ತಿಳಿಸಿದೆ.

ಇನ್ನು ಐಪಿಎಲ್ ಟೂರ್ನಿಗೆ ಸಿಗುತ್ತಿರುವ ದಾಖಲೆಯ ವೀಕ್ಷಕರ ಸಂಖ್ಯೆ, ಹೆಚ್ಚುತ್ತಿರುವ ಜಾಹೀರಾತು ಆದಾಯ ಮತ್ತು ಹೂಡಿಕೆದಾರರ ಬಲವಾದ ಆಸಕ್ತಿಯಿಂದ ಇಂಡಿಯನ್ ಪ್ರೀಮಿಯರ್ ಲೀಗ್​ನ ಸ್ವತಂತ್ರ ಬ್ರಾಂಡ್ ಮೌಲ್ಯವು 13.8% ರಷ್ಟು ಹೆಚ್ಚಾಗಿ $3.9 ಬಿಲಿಯನ್ ( 32,721 ಕೋಟಿ) ತಲುಪಿದೆ ಎಂದು ಇದೇ ವರದಿಯಲ್ಲಿ ತಿಳಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂಬರ್ ಒನ್:

ಫ್ರಾಂಚೈಸಿ ಶ್ರೇಯಾಂಕಗಳ ಗಮನಾರ್ಹ ಪುನರ್ರಚನೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್​ಸಿಬಿ ತನ್ನ ಬ್ರ್ಯಾಂಡ್ ವಾಲ್ಯೂ ಅನ್ನು ಹೆಚ್ಚಿಸಿಕೊಂಡಿದ್ದು, ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿದೆ.

ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯವು 2024 ರಲ್ಲಿ $227 ಮಿಲಿಯನ್‌ ಇತ್ತು. ಈ ಬಾರಿ ಅದು $269 ಮಿಲಿಯನ್‌ಗೆ ಏರಿದೆ. ಈ ಮೂಲಕ ಇತರೆ ಚಾಂಪಿಯನ್ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂಬೈ ಇಂಡಿಯನ್ಸ್ $242 ಮಿಲಿಯನ್‌ನೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ $235 ಮಿಲಿಯನ್‌ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬ್ರ್ಯಾಂಡ್ ಮೌಲ್ಯದಲ್ಲಿ ಗಮನಾರ್ಹ 39.6% ಹೆಚ್ಚಳವನ್ನು ಪಡೆದುಕೊಂಡಿದೆ. ಈ ಮೂಲಕ ಒಟ್ಟು ಮೌಲ್ಯವನ್ನು $141 ಮಿಲಿಯನ್‌ಗೆ ಏರಿಸಿದೆ.

ಐಪಿಎಲ್ ಆದಾಯ ಹೆಚ್ಚಳ:

ಈ ವರ್ಷ ಐಪಿಎಲ್‌ನ ಜಾಹೀರಾತು ಆದಾಯ $600 ಮಿಲಿಯನ್ (₹5,000 ಕೋಟಿ) ದಾಟಿದೆ. ಇದು 2024 ರಿಂದ ಗಣನೀಯವಾಗಿ ಶೇ. 50 ರಷ್ಟು ಏರಿಕೆಯಾಗಿದೆ. My11Circle, Angel One, RuPay ಮತ್ತು CEAT ಜೊತೆಗಿನ ಬಿಸಿಸಿಐನ ಅಸೋಸಿಯೇಟ್ ಪ್ರಾಯೋಜಕತ್ವದ ಒಪ್ಪಂದಗಳು ₹1,485 ಕೋಟಿ ಗಳಿಸಿವೆ. ಹಾಗೆಯೇ ಟಾಟಾದ ಶೀರ್ಷಿಕೆ ಪ್ರಾಯೋಜಕತ್ವ ನವೀಕರಣದಿಂದ 2028 ರವರೆಗೆ $300 ಮಿಲಿಯನ್ ಆದಾಯ ಗಳಿಸಿದೆ ಎಂದು ಹೌಲಿಹಾನ್ ಲೋಕೆ ಅವರ ವರದಿಯಲ್ಲಿ ತಿಳಿಸಲಾಗಿದೆ.

ವೀಕ್ಷಕರ ಸಂಖ್ಯೆಯಲ್ಲೂ ಹೆಚ್ಚಳ:

ಇಂಡಿಯನ್ ಪ್ರೀಮಿಯರ್ ಲೀಗ್​ನ ವೀಕ್ಷಕರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡಿದೆ. ಆರಂಭಿಕ ವಾರಾಂತ್ಯದಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ 1.37 ಬಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡರೆ, ಆರ್‌ಸಿಬಿ ಮತ್ತು ಪಿಬಿಕೆಎಸ್ ನಡುವಿನ ಅಂತಿಮ ಪಂದ್ಯವನ್ನು 678 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದರು. ಇದು ಟಿ20 ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯವಾಗಿ ದಾಖಲೆಯನ್ನು ಸಹ ನಿರ್ಮಿಸಿದೆ.

ಇದನ್ನೂ ಓದಿ: IPL 2026: RCB ತಂಡದಿಂದ ಪ್ರಮುಖ ಆಟಗಾರನಿಗೆ ಗೇಟ್ ಪಾಸ್ ಸಾಧ್ಯತೆ

ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ ( ಹೌಲಿಹಾನ್ ಲೋಕೆ):

  1. ರಾಯಲ್ ಚಾಲೆಂಜರ್ಸ್ ಬೆಂಗಳೂರು – 269 ಮಿಲಿಯನ್ ಡಾಲರ್
  2. ಮುಂಬೈ ಇಂಡಿಯನ್ಸ್ – 242 ಮಿಲಿಯನ್ ಡಾಲರ್
  3.  ಚೆನ್ನೈ ಸೂಪರ್ ಕಿಂಗ್ಸ್ – 235 ಮಿಲಿಯನ್ ಡಾಲರ್
  4. ಕೊಲ್ಕತ್ತಾ ನೈಟ್ ರೈಡರ್ಸ್–  227 ಮಿಲಿಯನ್ ಡಾಲರ್
  5. ಸನ್​ರೈಸರ್ಸ್ ಹೈದರಾಬಾದ್ – 154 ಮಿಲಿಯನ್ ಡಾಲರ್
  6. ಡೆಲ್ಲಿ ಕ್ಯಾಪಿಟಲ್ಸ್– 152 ಮಿಲಿಯನ್ ಡಾಲರ್
  7. ರಾಜಸ್ಥಾನ್ ರಾಯಲ್ಸ್– 146 ಮಿಲಿಯನ್ ಡಾಲರ್
  8. ಗುಜರಾತ್ ಟೈಟಾನ್ಸ್– 142 ಮಿಲಿಯನ್ ಡಾಲರ್
  9. ಪಂಜಾಬ್ ಕಿಂಗ್ಸ್– 141 ಮಿಲಿಯನ್ ಡಾಲರ್
  10. ಲಕ್ನೋ ಸೂಪರ್ ಜೈಂಟ್ಸ್ – 122 ಮಿಲಿಯನ್ ಡಾಲರ್.

 

 

Published On - 2:28 pm, Tue, 8 July 25