
ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬಂತೆ ಐಪಿಎಲ್ (IPL) ಮುಗಿದು ದಿನಗಳೇ ಕಳೆದರೂ, ಈ ಮಿಲಿಯನ್ ಡಾಲರ್ ಟೂರ್ನಿಯ ಗುಂಗಿನಿಂದ ಅಭಿಮಾನಿಗಳು ಹೊರಬಂದಿಲ್ಲ. ಅದರಲ್ಲೂ ಐಪಿಎಲ್ನ ಅತ್ಯಂತ ಜನಪ್ರಿಯ ತಂಡವಾದ ಆರ್‌ಸಿಬಿ (RCB) ಟ್ರೋಫಿ ಗೆದ್ದಿರುವುದು ಕನ್ನಡಿಗರ ಪಾಲಿಗೆ ಹಬ್ಬದಂತ್ತಾಗಿದೆ. ಆದಾಗ್ಯೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅದೊಂದು ಕಾಲ್ತುಳಿತದ ದುರಂತ ನಡೆಯದಿದ್ದರೆ, ಆರ್‌ಸಿಬಿ ಖ್ಯಾತಿಗೆ ಕಪ್ಪು ಚುಕ್ಕಿ ಬರುತ್ತಿರಲಿಲ್ಲ. ಆದಾಗ್ಯೂ ಅದೇನೆ ಕಹಿ ಘಟನೆ ನಡೆದಿದ್ದರೂ, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ನಡೆದ ಫೈನಲ್ ಪಂದ್ಯದ ರೋಮಾಂಚಕತೆಯನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು ನಿರೀಕ್ಷಿತ ಫಲಿತಾಂಶವೇ ಹೊರಬಿದ್ದಿತ್ತು. ಇದೀಗ ಈ ಪಂದ್ಯ ವೀಕ್ಷಣೆಯ ವಿಚಾರದಲ್ಲೂ ವಿಶ್ವ ದಾಖಲೆ ಸೃಷ್ಟಿಸಿದೆ.
ಬರೋಬ್ಬರಿ 18 ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಕಾದು ಕುಳಿತಿದ್ದ ಆರ್‌ಸಿಬಿ 2016 ರ ಬಳಿಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇತ್ತ ಆರ್ಸಿಬಿಯಂತೆಯೇ ಮೊದಲ ಟ್ರೋಫಿಗಾಗಿ ಕಾಯುತ್ತಿದ್ದ ಪಂಜಾಬ್ ಕೂಡ ಬಹಳ ವರ್ಷಗಳ ನಂತರ ಫೈನಲ್ಗೇರಿತ್ತು. ನಿರೀಕ್ಷೆಯಂತೆಯೇ ಅಹಮದಾಬಾದ್ನ ಮೋದಿ ಮೈದಾನದಲ್ಲಿ ನಡೆದಿದ್ದ ಈ ಪಂದ್ಯವನ್ನು ವೀಕ್ಷಿಸಲು 95 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಮೈದಾನದಲ್ಲಿ ಉಪಸ್ಥಿತಿರಿದ್ದರು. ಇದನ್ನು ಹೊರತುಪಡಿಸಿ ಟಿವಿ ಹಾಗೂ ಡಿಜಿಟಲ್‌ನಲ್ಲಿ ಈ ಪಂದ್ಯದ ವೀಕ್ಷಣೆ ಇದೀಗ ಇತಿಹಾಸ ಬರೆದಿದೆ.
ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯವೆಂಬ ಇತಿಹಾಸ ಸೃಷ್ಟಿಸಿದೆ. ಈ ಪಂದ್ಯ ಒಟ್ಟು 31.7 ಬಿಲಿಯನ್ ನಿಮಿಷಗಳ ವೀಕ್ಷಣೆ ಕಂಡಿದೆ. ಗಮನಾರ್ಹ ಸಂಗತಿಯೆಂದರೆ, ಈ ಪಂದ್ಯವನ್ನು ಟಿವಿಯಲ್ಲಿ 169 ಮಿಲಿಯನ್ ಜನರು ವೀಕ್ಷಿಸಿದ್ದರೆ, ಡಿಜಿಟಲ್‌ನಲ್ಲಿ 892 ಮಿಲಿಯನ್ ವೀಕ್ಷಣೆ ಕಂಡಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಡಿಜಿಟಲ್ ವೀಕ್ಷಕರಲ್ಲಿ 29% ಏರಿಕೆಯಾಗಿದೆ ಎಂದು ಜಿಯೋಹಾಟ್‌ಸ್ಟಾರ್ ವರದಿ ಮಾಡಿದೆ. ಇತ್ತ ಸ್ಟಾರ್ ಸ್ಪೋರ್ಟ್ಸ್ನಲ್ಲೂ 456 ಬಿಲಿಯನ್ ನಿಮಿಷಗಳ ನೇರ ಪ್ರಸಾರ ವೀಕ್ಷಣೆಯಾಗಿದ್ದು, ಇದು ಕೂಡ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ದಾಖಲೆಯಾಗಿದೆ.
ಜನರ ಜೀವಗಳು ಮುಖ್ಯ; ಆರ್‌ಸಿಬಿ ರೋಡ್ ಶೋ ದುರಂತದ ಬಗ್ಗೆ ಮೌನ ಮುರಿದ ಗಂಭೀರ್
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 190 ರನ್ ಗಳಿಸಿತು. ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ರಜತ್ ಪತಿದಾರ್ 16 ಎಸೆತಗಳಲ್ಲಿ 26 ರನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ 15 ಎಸೆತಗಳಲ್ಲಿ 25 ರನ್ ಗಳಿಸಿದರು.
ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಶಶಾಂಕ್ ಸಿಂಗ್ 30 ಎಸೆತಗಳಲ್ಲಿ 61 ರನ್ ಗಳಿಸಿದರೆ, ಜೋಶ್ ಇಂಗ್ಲಿಸ್ 23 ಎಸೆತಗಳಲ್ಲಿ 39 ರನ್ ಗಳಿಸಿದರು. ಕೊನೆಯಲ್ಲಿ, ಆರ್‌ಸಿಬಿ ಐತಿಹಾಸಿಕ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Thu, 19 June 25