ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 2022 ಫೈನಲ್ ಗೇರಲು ರಾಜಸ್ಥಾನ್ ರಾಯಲ್ಸ್ ವಿರುದ್ಧ ಇಂದಿನ ಕ್ವಾಲಿಫೈಯರ್ – 2 (Qualifier 2) ಪಂದ್ಯದಲ್ಲಿ ಜಯ ಸಾಧಿಸಿಬೇಕಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ಈ ರೋಚಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. 14 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಆರ್ಸಿಬಿ (RCB) ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧ 14 ರನ್ಗಳಿಂದಗ ಗೆದ್ದು ಬೀಗಿತ್ತು. ಇದೀಗ ಕ್ವಾಲಿಫೈಯರ್-2 ಗೆ ಪ್ರವೇಶ ಪಡೆದಿದ್ದರೂ ಡುಪ್ಲೆಸಿಸ್ ಪಡೆ ಪ್ರಮುಖ ಮೂರು ವಿಭಾಗಗಳಲ್ಲಿ ದುರ್ಬಲವಾಗಿದೆ. ಇದನ್ನು ಸರಿಪಡಿಸಿದರಷ್ಟೆ ಗೆಲುವು ಸಾಧಿಸಬಹುದು. ಅವುಗಳು ಯಾವುವು?, ಆರ್ಸಿಬಿ ತಂಡದಲ್ಲಿ ಏನು ಬದಲಾವಣೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ಆರಂಭಿಕ ಜೋಡಿ:
ಆರ್ಸಿಬಿಯ ಓಪನಿಂಗ್ ಜೋಡಿ ವಿರಾಟ್ ಕೊಹ್ಲಿ ಹಾಗೂ ಫಾಪ್ ಡುಪ್ಲೆಸಿಸ್ ಕಡೆಯಿಂದ ನಿರೀಕ್ಷೆ ತಕ್ಕ ಆರಂಭ ಸಿಗುತ್ತಿಲ್ಲ. ಇಡೀ ಟೂರ್ನಮೆಂಟ್ನಲ್ಲಿ ಈ ಜೋಡಿ ವೈಫಲ್ಯ ಅನುಭವಿಸಿದೆ. ಕಳೆದ ಪಂದ್ಯದಲ್ಲಂತು ನಾಯಕ ಫಾಫ್ ಗೋಲ್ಡನ್ ಡಕ್ ಆಗಿದ್ದರು. ಈ ಜೋಡಿ ಕನಿಷ್ಟ 80+ ರನ್ಗಳ ಜೊತೆಯಾಟ ಆಡಲೇಬೇಕು. ಹೀಗಾದಲ್ಲಿ ಮಾತ್ರ ಒತ್ತಡವಿಲ್ಲದೆ ಮುಂದಿನ ಬ್ಯಾಟರ್ಗಳು ಲೀಲಾಜಾಲವಾಗಿ ಬ್ಯಾಟ್ ಬೀಸಬಹುದು.
RR vs RCB: ಇಂದು ಆರ್ಸಿಬಿ ಗೆದ್ದರೆ ಫೈನಲ್ಗೆ ಎಂಟ್ರಿ: ಫಾಫ್ ಪಡೆಯ ಮೇಲೆ ಬೆಟ್ಟದಷ್ಟು ನಿರೀಕ್ಷೆ
ವಿರಾಟ್ ಕೊಹ್ಲಿ ಫಾರ್ಮ್:
ಈ ಸೀಸನ್ನಲ್ಲಿ ಆರ್ಸಿಬಿ ತಂಡದಲ್ಲಿ ದೊಡ್ಡ ಸದ್ದು ಮಾಡಿದ ವಿಚಾರವೆಂದರೆ ಅದು ವಿರಾಟ್ ಕೊಹ್ಲಿ ಫಾರ್ಮ್. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಫಾರ್ಮ್ ಕಂಡುಕೊಂಡರು ಎನ್ನುವಷ್ಟರಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ 25 ರನ್ಗೆ ಔಟಾಗುವ ಮೂಲಕ ನಿರೀಕ್ಷೆ ಹುಸಿಗೊಳಿಸಿದರು. ಇಂದು ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವುದರಿಂದ ಕೊಹ್ಲಿ ಬ್ಯಾಟ್ನಿಂದ ದೊಡ್ಡ ಮೊತ್ತ ಬರಬೇಕಿದೆ.
ಸಿರಾಜ್ ದುಬಾರಿ:
ಮೊಹಮ್ಮದ್ ಸಿರಾಜ್ ಪ್ರತಿ ಪಂದ್ಯದಲ್ಲಿ ದುಬಾರಿ ಆಗುತ್ತಿದ್ದಾರೆ. ಲೀಗ್ ಹಂತದ ಪಂದ್ಯದಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟಿದ್ದರಿಂದ ಜಿಟಿ ವಿರುದ್ಧದ ಪಂದ್ಯದಿಂದ ಇವರನ್ನು ಕೈಬಿಡಲಾಯಿತು. ಆದರೆ, ಎಲಿಮಿನೇಟರ್ ಪಂದ್ಯದಲ್ಲಿ ಮತ್ತೆ ಆಡಿಸಿದ್ದರು. ಇಲ್ಲೂ ಮತ್ತದೆ ಲೈನ್-ಲೆಂತ್ನಲ್ಲಿ ಎಡವಿದ ಸಿರಾಜ್ ಮತ್ತೆ ದುಬಾರಿಯಾದರು. ಇದರ ಬಗ್ಗೆ ನಾಯಕ ಹೆಚ್ಚಿನ ಗಮನ ಹರಿಸಿ ದೊಡ್ಡ ತೀರ್ಮಾನ ತೆಗೆದುಕೊಳ್ಳಬೇಕಿದೆ.
ಕಳೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಲೆಸಿಸ್ ಕೈಕೊಟ್ಟರೂ ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ತಂಡಕ್ಕೆ ಆಧಾರವಾಗುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಒತ್ತಡದ ನಡುವೆಯೂ ರಜತ್ ಕಳೆದ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಕಟ್ಟುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಆರ್ಸಿಬಿ ಸ್ಪಿನ್ನರ್ ವನಿಂದು ಹಸರಂಗ ಕೊಂಚ ದುಬಾರಿಯಾಗಿದ್ದರೂ ವಿಕೆಟ್ ಪಡೆಯುತ್ತಿರುವುದು ಸಂತಸ. ಸ್ಲಾಗ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹ್ಯಾಸಲ್‌ವುಡ್ ಜೋಡಿ ಮಾರಕ ದಾಳಿ ನಡೆಸುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 24 ಪಂದ್ಯಗಳು ನಡೆದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳಲ್ಲಿ ಜಯ ಸಾಧಸಿದ್ದರೆ, ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ನಡುವಿನ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಷ್ಟ ಮೇಲುಗೈ ಸಾಧಿಸಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 am, Fri, 27 May 22