RCB vs RR Qualifier 2: ಈ ಒಂದು ವಿಕೆಟ್ ಸಿಕ್ಕರೆ RCB ಅರ್ಧ ಪಂದ್ಯ ಗೆದ್ದಂತೆ..!
IPL 2022: ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಲೀಗ್ ಹಂತದ ಮುಖಾಮುಖಿಯಲ್ಲಿ ಜೋಸ್ ಬಟ್ಲರ್ ಅಬ್ಬರಿಸಿದ್ದರು. ಅದರಲ್ಲೂ ಏಕಾಂಗಿಯಾಗಿ ಬ್ಯಾಟ್ ಬೀಸಿ ಆರ್ಆರ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
IPL 2022: ಐಪಿಎಲ್ ಸೀಸನ್ 15 ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಏಕೆಂದರೆ ಗೆದ್ದ ತಂಡ ಫೈನಲ್ಗೆ ಪ್ರವೇಶಿಸಿದರೆ ಸೋತ ತಂಡ ಐಪಿಎಲ್ನಿಂದ ಔಟ್ ಆಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಆದರೆ ಈ ಪಂದ್ಯದಲ್ಲೂ ಆರ್ಸಿಬಿ ಪಾಲಿಗೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಜೋಸ್ ಬಟ್ಲರ್ (Joss Buttler) ಕಂಟಕವಾಗಬಹುದು. ಏಕೆಂದರೆ ಉತ್ತಮ ಫಾರ್ಮ್ನಲ್ಲಿರುವ ಬಟ್ಲರ್ ಈ ಬಾರಿ 15 ಪಂದ್ಯಗಳಲ್ಲಿ 718 ರನ್ ಕಲೆಹಾಕಿದ್ದಾರೆ. ಇದರಲ್ಲಿ ಆರ್ಸಿಬಿ ವಿರುದ್ದ ಸಿಡಿಸಿದ್ದ ಅರ್ಧಶತಕ ಕೂಡ ಸೇರಿದೆ.
ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಲೀಗ್ ಹಂತದ ಮುಖಾಮುಖಿಯಲ್ಲಿ ಜೋಸ್ ಬಟ್ಲರ್ ಅಬ್ಬರಿಸಿದ್ದರು. ಅದರಲ್ಲೂ ಏಕಾಂಗಿಯಾಗಿ ಬ್ಯಾಟ್ ಬೀಸಿ ಆರ್ಆರ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಏಪ್ರಿಲ್ 6 ರಂದು ನಡೆದಿದ್ದ ಆ ಪಂದ್ಯದಲ್ಲಿ 47 ಎಸೆತಗಳಲ್ಲಿ ಅಜೇಯ 70 ರನ್ ಬಾರಿಸಿದ್ದರು. ವಿಶೇಷ ಎಂದರೆ ಆ ಪಂದ್ಯದಲ್ಲಿ ಬಟ್ಲರ್ ಬ್ಯಾಟ್ನಿಂದ ಒಂದೇ ಒಂದು ಫೋರ್ ಬಂದಿಲ್ಲ. ಬದಲಾಗಿ 6 ಭರ್ಜರಿ ಸಿಕ್ಸ್ಗಳನ್ನು ಸಿಡಿಸಿದ್ದರು.
ಅಷ್ಟೇ ಅಲ್ಲದೆ ಆರ್ಸಿಬಿ ವಿರುದ್ದ ಜೋಸ್ ಬಟ್ಲರ್ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಆರ್ಸಿಬಿ ವಿರುದ್ದ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 306 ರನ್ ಬಾರಿಸಿದ್ದಾರೆ. ಈ ವೇಳೆ ಆರ್ಆರ್ ಆರಂಭಿಕನ ಬ್ಯಾಟ್ನಿಂದ 24 ಬೌಂಡರಿ ಹಾಗೂ 16 ಸಿಕ್ಸರ್ಗಳು ಮೂಡಿಬಂದಿವೆ. ಅಂದರೆ ಕಳೆದ ಕೆಲ ಸೀಸನ್ಗಳಿಂದ ಆರ್ಸಿಬಿ ವಿರುದ್ದ ಜೋಸ್ ಬಟ್ಲರ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಬಟ್ಲರ್ ಲೀಗ್ ಹಂತದಲ್ಲಿ ಆರ್ಸಿಬಿ ವಿರುದ್ದ ಅಬ್ಬರಿಸಿದ್ದರು.
ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ 56 ಎಸೆತಗಳಲ್ಲಿ 89 ರನ್ ಸಿಡಿಸಿದ್ದರು. ಹೀಗಾಗಿ 2ನೇ ಕ್ವಾಲಿಫೈಯರ್ ಪಂದ್ಯದಲ್ಲೂ ಅದೇ ಆತ್ಮ ವಿಶ್ವಾಸದಲ್ಲಿ ಬಟ್ಲರ್ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಜೋಸ್ ಬಟ್ಲರ್ ಅವರ ವಿಕೆಟ್ ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಲಿದೆ.
ಏಕೆಂದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದೇ ಜೋಸ್ ಬಟ್ಲರ್. ಇದಕ್ಕೆ ಸಾಕ್ಷಿಯೇ ಈ ಬಾರಿ 15 ಪಂದ್ಯಗಳಲ್ಲಿ 718 ರನ್ಗಳು. ಹೀಗಾಗಿ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ವಿಕೆಟ್ ಬೇಗನೆ ಪಡೆದರೆ ಆರ್ಸಿಬಿ ತಂಡವು ಅರ್ಧ ಪಂದ್ಯವನ್ನು ಗೆದ್ದುಕೊಂಡಂತೆ ಎನ್ನಬಹುದು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:19 pm, Thu, 26 May 22