RR vs RCB: ಇಂದು ಆರ್‌ಸಿಬಿ ಗೆದ್ದರೆ ಫೈನಲ್ಗೆ ಎಂಟ್ರಿ: ಫಾಫ್ ಪಡೆಯ ಮೇಲೆ ಬೆಟ್ಟದಷ್ಟು ನಿರೀಕ್ಷೆ
Qualifier 2, IPL 2022: ಇಂದು ಸೆಮಿಫೈನಲ್ ಮಾದರಿಯ ಕ್ವಾಲಿಫೈಯರ್-2 ಪಂದ್ಯ ನಡೆಯಲಿದ್ದು, ಇದರಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ ಮುಖಾಮುಖಿ ಆಗಲಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತದತ್ತ ಸಾಗುತ್ತಿದೆ. ಇಂದು ಸೆಮಿಫೈನಲ್ ಮಾದರಿಯ ಕ್ವಾಲಿಫೈಯರ್-2 (Qualifier 2) ಪಂದ್ಯ ನಡೆಯಲಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ನರೇಂದ್ರ ಮೋದಿ ಕ್ರಿಕೆಟ್ ಮೈದಾನ ಸಜ್ಜಾಗುತ್ತಿದೆ. ಇದರಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಫೈನಲ್ಗೆ ಪ್ರವೇಶ ಪಡೆಯಲಿದ್ದು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಇದುವರೆಗೆ ಒಂದು ಬಾರಿಯೂ ಕಪ್ ಗೆಲ್ಲದ ಆರ್‌ಸಿಬಿ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತ ರಾಜಸ್ಥಾನ್ ಕೂಡ ಫೈನಲ್ಗೆ ಪ್ರವೇಶ ಪಡೆಯಲು ರಣತಂತ್ರ ರೂಪಿಸುತ್ತಿದೆ. ಲೀಗ್ ಹಂತದಲ್ಲಿ ಆರ್‌ಸಿಬಿ-ರಾಜಸ್ಥಾನ್ ಎರಡು ಸಲ ಎದುರಾಗಿವೆ. ಮೊದಲ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ಇನ್ನೊಂದು ಮುಖಾಮುಖಿಯಲ್ಲಿ ರಾಜಸ್ಥಾನ್ ಸೇಡು ತೀರಿಸಿಕೊಂಡಿತ್ತು. ಇವೆರಡಕ್ಕಿಂತ ದ್ವಿತೀಯ ಕ್ವಾಲಿಫೈಯರ್ ಪಂದ್ಯದ ಫಲಿತಾಂಶ ನಿರ್ಣಾಯಕ.
ಪ್ಲೇ-ಆಫ್‌ಗೆ ಬಂದಿರುವ ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದೆ ಮತ್ತು ಎಲಿಮಿನೇಟರ್‌ನಲ್ಲಿ ಲಖನೌ ವಿರುದ್ಧದ ಭರ್ಜರಿ ಗೆಲುವು ಬಹುನಿರೀಕ್ಷಿತ ಐಪಿಎಲ್ ಟ್ರೋಫಿಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಲೆಸಿಸ್ ಕೈಕೊಟ್ಟರೂ ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ತಂಡಕ್ಕೆ ಆಧಾರವಾಗುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಒತ್ತಡದ ನಡುವೆಯೂ ರಜತ್ ಕಳೆದ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಕಟ್ಟುವ ಮೂಲಕ ಎಲ್ಲರ ಗಮನಸೆಳೆದಿದ್ದರು.
RR vs RCB Predicted Playing XI: ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಆರ್‌ಸಿಬಿ ಸ್ಪಿನ್ನರ್ ವನಿಂದು ಹಸರಂಗ ಕೊಂಚ ದುಬಾರಿಯಾಗಿದ್ದರೂ ವಿಕೆಟ್ ಪಡೆಯುತ್ತಿರುವುದು ಸಂತಸ. ಸ್ಲಾಗ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹ್ಯಾಸಲ್‌ವುಡ್ ಜೋಡಿ ಮಾರಕ ದಾಳಿ ನಡೆಸುತ್ತಿದೆ. ಆದರೆ, ಹೊಸ ಚೆಂಡಿನಲ್ಲಿ ಮೊಹಮ್ಮದ್ ಸಿರಾಜ್ ಸತತವಾಗಿ ದುಬಾರಿ ಆಗುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ.
ಇತ್ತ ಲಖನೌಗೆ ಹೋಲಿಸಿದರೆ ರಾಜಸ್ಥಾನ್ ಬ್ಯಾಟಿಂಗ್ ಹೆಚ್ಚು ಬಲಿಷ್ಠ ಹಾಗೂ ಅಪಾಯಕಾರಿ. ಆರೆಂಜ್ ಕ್ಯಾಪ್‌ಧಾರಿ ಜಾಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್, ದೇವದತ್ತ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಶಿಮ್ರನ್ ಹೆಟ್‌ಮೈರ್, ರಿಯಾನ್ ಪರಾಗ್ ರಾಜಸ್ಥಾನ್ ಬ್ಯಾಟಿಂಗ್ ಲೈನ್‌ಅಪ್‌ನ ಪ್ರಮುಖರು. ಬಟ್ಲರ್ ವಿಕೆಟನ್ನು ಬೇಗ ಉರುಳಿಸಿದರೆ ಯಾವುದೇ ಎದುರಾಳಿ ಮೇಲುಗೈ ಸಾಧಿಸಬಹುದು. ಆಗ ರಾಜಸ್ಥಾನ್ ಕೂಡ ಒತ್ತಡಕ್ಕೆ ಸಿಲುಕಲಿದೆ.
ಬೌಲರ್‌ಗಳಾದ ಪ್ರಸಿದ್ಧಕೃಷ್ಣ, ಕುಲ್ದೀಪ್ ಯಾದವ್, ಯುಜ್ವೇವೇಂದ್ರ ಚಹಲ್, ಆರ್. ಅಶ್ವಿನ್ ಮತ್ತು ಬೌಲ್ಟ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರೆ ಆರ್‌ಸಿಬಿ ಬ್ಯಾಟಿಂಗ್ ಪಡೆಯ ಹಾದಿ ಕಠಿಣವಾಗಬಹುದು. ಅದರಲ್ಲೂ ಚಹಲ್ ತಮ್ಮ ನಿಕಟಪೂರ್ವ ತಂಡದ ಎದುರು ಉತ್ತಮ ಬೌಲಿಂಗ್ ಮಾಡುವ ಛಲದಲ್ಲಿದ್ದಾರೆ.ಮೊದಲ ಕ್ವಾಲಿಫೈಯರ್ ಪಂದ್ಯದ ಸೋಲಿನ ನಡುವೆಯೂ ಅದೇ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
ಪಂದ್ಯದ ದಿನದಂದು ತಾಪಮಾನವು 48% ತೇವಾಂಶ ಮತ್ತು ಗಂಟೆಗೆ 18-22 ಕಿ.ಮೀ ಗಾಳಿಯ ವೇಗದೊಂದಿಗೆ 36° ಸೆಲ್ಸಿಯಸ್‌ನಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ ಹಾಗೂ ಆಟದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಅಹ್ಮದಾಬಾದ್ ಕ್ರಿಕೆಟ್ ಕ್ರೀಡಾಂಗಣದ ಕೆಂಪು ಮಣ್ಣಿನ ಪಿಚ್‌ಗಳು ಬೇಗ ಒಣಗುವ ಲಕ್ಷಣಗಳನ್ನು ಹೊಂದಿದ್ದು, ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಸಹಾಯಕವಾಗಿರಲಿವೆ. ಇನ್ನು ಹಿಂದಿನ ಪಂದ್ಯಗಳನ್ನು ಗಮನಿಸಿದರೆ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ವಿಕೆಟ್ ಕಬಳಿಸಲಿದ್ದು, ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಬಾರಿಸಲು ತಿಣುಕಾಡಬಹುದು. ಈ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯಗಳು ಕಡಿಮೆ ರನ್ ಮೊತ್ತದ ಪಂದ್ಯಗಳಾಗಿದ್ದು, ದೊಡ್ಡ ಬೌಂಡರಿಗಳಾಗಿರುವುದರಿಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಅಬ್ಬರಿಸುವುದೂ ಕಷ್ಟ.
ಸಂಭಾವ್ಯ ಪ್ಲೇಯಿಂಗ್ XI:
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಮಹಿಪಾಲ್ ಲೊಮೊರೊರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಓಬೇದ್ ಮೆಕಾಯ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Fri, 27 May 22