ಅವಘಡ ನಡೆದ ಐದಾರು ಗಂಟೆಗಳ ಬಳಿಕ ಸಂತಾಪ ಸೂಚಿಸಿದ ಆರ್​ಸಿಬಿ

RCB Responds to Chinnaswamy Stadium Incident: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಅವಘಡಕ್ಕೆ ಆರ್​ಸಿಬಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜೀವಹಾನಿಗೆ ಶೋಕ ವ್ಯಕ್ತಪಡಿಸಿ, ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಸ್ಥಳೀಯ ಆಡಳಿತದ ಸಲಹೆಯನ್ನು ಪಾಲಿಸಿ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದೇವೆ.ಹಾಗೆಯೇ ಅಭಿಮಾನಿಗಳಿಗೆ ಸುರಕ್ಷಿತವಾಗಿರಲು ಮನವಿ ಮಾಡುತ್ತಿದ್ದೇವೆ ಎಂದಿದೆ.

ಅವಘಡ ನಡೆದ ಐದಾರು ಗಂಟೆಗಳ ಬಳಿಕ ಸಂತಾಪ ಸೂಚಿಸಿದ ಆರ್​ಸಿಬಿ
Rcb 2025

Updated on: Jun 04, 2025 | 10:52 PM

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ (RCB Chinnaswamy incident) 11 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ತನ್ನ ನೆಚ್ಚಿನ ತಂಡ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದ ಬಳಿ ಬಂದವರಿಗೆ ನರಕ ಸದೃಶ್ಯವಾಗಿದೆ. ಒಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಸಾವು ನೋವುಗಳಿಂದ ನರಳುತ್ತಿದ್ದರೂ, ಇನ್ನೊಂದೆಡೆ ಕ್ರೀಡಾಂಗಣದೊಳಗೆ ಆರ್​ಸಿಬಿ (RCB) ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಾವು ನೋವಿನ ನಡುವೆಯೂ ಫ್ರಾಂಚೈಸಿಯ ಈ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಘಟನೆ ನಡೆದ ಗಂಟೆಗಳೇ ಕಳೆದುಹೋದರು, ಫ್ರಾಂಚೈಸಿ ಕಡೆಯಿಂದ ಒಂದೇ ಒಂದು ಸಂತಾಪ ಸೂಚನೆ ಇಲ್ಲದಿರುವುದು ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿತ್ತು.

ವಾಸ್ತವವಾಗಿ, ಟ್ರೋಫಿ ಗೆದ್ದ ಸಂಭ್ರಮವನ್ನು ಆರ್​ಸಿಬಿ ಫ್ರಾಂಚೈಸಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿತ್ತು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಇಲ್ಲದಿರುವ ಕಾರಣ 11 ಆರ್​ಸಿಬಿ ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ನೋವಿನ ನಡುವೆಯೂ ಆರ್​ಸಿಬಿ ಫ್ರಾಂಚೈಸಿ ಸ್ಟೇಡಿಯಂ ಒಳಗೆ 15 ನಿಮಿಷಗಳ ಕಾರ್ಯಕ್ರಮ ನಡೆಸಿದೆ, ಅಲ್ಲದೆ ಈ ಅವಘಡದಿಂದ ಸಾವಿಗೀಡಾದವರ ಬಗ್ಗೆ ಆರ್​ಸಿಬಿ ಒಂದೇ ಒಂದು ಹೇಳಿಕೆಯನ್ನು ಬಿಡುಗಡೆ ಮಾಡದಿರುವುದು ಎಲ್ಲರ ಕೋಪಕ್ಕೆ ಕಾರಣವಾಗಿತ್ತು.

ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ

ಇದೀಗ ತನ್ನ ತಪ್ಪಿನಿಂದ ಎಚ್ಚೆತ್ತುಕೊಂಡಿರುವ ಆರ್​ಸಿಬಿ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ, ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿರುವ ಅವಘಡದಿಂದ ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಈ ಅವಘಡದಿಂದಾಗಿ ಆಗಿರುವ ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ.ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಅಭಿಮಾನಿಗಳ ಬಳಿ ಮನವಿ ಮಾಡುತ್ತೇವೆ ಎಂದು ಬರೆದುಕೊಂಡಿದೆ.

ಆಡಳಿತದ ನಿರ್ಲಕ್ಷ್ಯ

ಚಿನ್ನಸ್ವಾಮಿ ದುರಂತಕ್ಕೆ ಕ್ರೀಡಾಂಗಣದ ಗೇಟ್‌ಗಳನ್ನು ತೆರೆದ ತಕ್ಷಣ ಕಾಲ್ತುಳಿತ ಮತ್ತು ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಆಡಳಿತದ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕ್ರೀಡಾಂಗಣದ ಹೊರಗೆ ತುಂಬಾ ಜನಸಂದಣಿ ಇತ್ತು, ಜನರು ಒಳಗೆ ಹೋಗಲು ಗೋಡೆ ಹಾರಿ ಹೋಗುತ್ತಿದ್ದರು. ಕೆಲವರು ಮರ ಹತ್ತಿ ಒಳಗೆ ಹೋಗಲು ಪ್ರಯತ್ನಿಸಿದರು. ಈ ಇಡೀ ಘಟನೆಗೆ ಯಾರು ಕಾರಣ ಎಂದು ಕಂಡುಹಿಡಿಯಲು ಈಗ ತನಿಖೆ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದಿದ್ದರೆ, ಬಹುಶಃ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ