Ricky Ponting: ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ನಿರಾಕರಿಸಿದ್ರಾ ಪಾಂಟಿಂಗ್

| Updated By: ಝಾಹಿರ್ ಯೂಸುಫ್

Updated on: Oct 17, 2021 | 5:27 PM

Team India Coach: ಟಿ20 ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ರವಿ ಶಾಸ್ತ್ರಿ ಅವರ ಟೀಮ್ ಇಂಡಿಯಾ ಕೋಚ್ ಹುದ್ದೆಯ ಅಧಿಕಾವಧಿ ಮುಗಿಯಲಿದೆ. ಹೀಗಾಗಿ ಬಿಸಿಸಿಐ ಈಗಾಗಲೇ ಹೊಸ ಕೋಚ್ ನೇಮಕಕ್ಕೆ ಮುಂದಾಗಿದೆ.

Ricky Ponting: ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ನಿರಾಕರಿಸಿದ್ರಾ ಪಾಂಟಿಂಗ್
Ricky Ponting
Follow us on

ಟೀಮ್ ಇಂಡಿಯಾ (Team India Coach) ಕೋಚ್​ ಹುದ್ದೆಗೆ ಬಿಸಿಸಿಐ ಅರ್ಜಿಯನ್ನು ಆಹ್ವಾನಿಸಿದೆ. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗ ರಿಕಿ ಪಾಂಟಿಂಗ್ (Ricky Ponting) ಅವರನ್ನು ಟೀಮ್ ಇಂಡಿಯಾದ (Team India) ಮುಖ್ಯ ಕೋಚ್‌ ಹುದ್ದೆಗಾಗಿ ಸಂಪರ್ಕಿಸಿತ್ತು ಎಂಬ ವಿಚಾರವೊಂದು ಬಹಿರಂಗಗೊಂಡಿದೆ. ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ರಿಕಿ ಪಾಂಟಿಂಗ್ ಅವರಿಗೆ ಟೀಮ್ ಇಂಡಿಯಾ ಕೋಚ್ ಹುದ್ದೆ ನೀಡಲು ಬಿಸಿಸಿಐ ಬಯಸಿತ್ತು. ಆದರೆ ಈ ಪ್ರಸ್ತಾಪವನ್ನು ರಿಕಿ ಪಾಂಟಿಂಗ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಪಾಂಟಿಂಗ್ ಪ್ರಸ್ತುತ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮುಂದಾಳತ್ವದಲ್ಲಿ ಡೆಲ್ಲಿ ತಂಡವು ಕಳೆದ ಮೂರು ವರ್ಷಗಳಿಂದ ಪ್ಲೇಆಫ್‌ಗೆ ಪ್ರವೇಶಿಸಿದೆ. ಇದಲ್ಲದೇ, 2020 ಐಪಿಎಲ್​ನಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹೀಗಾಗಿ ಯಂಗ್ ಟೀಮ್ ಇಂಡಿಯಾಗೆ ಕೋಚ್ ಆಗಲು ಪಾಂಟಿಂಗ್​ಗೆ ಬಿಸಿಸಿಐ ಬಿಗ್ ಆಫರ್ ನೀಡಿತ್ತು. ಇದಾಗ್ಯೂ ಟೀಮ್ ಇಂಡಿಯಾ ಕೋಚ್ ಆಗಲು ಬಯಸುವುದಿಲ್ಲ ಎಂದು ಪಂಟರ್ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದಾಗ್ಯೂ, ಪಾಂಟಿಂಗ್ ಭಾರತ ತಂಡದ ಕೋಚ್ ಹುದ್ದೆ ನಿರಾಕರಿಸಿರುವ ಕಾರಣ ತಿಳಿದು ಬಂದಿಲ್ಲ. ಮತ್ತೊಂದೆಡೆ ಟೀಮ್ ಇಂಡಿಯಾ ಮುಂದಿನ ಕೋಚ್​ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಯಲ್ಲಿದೆ. ಬಿಸಿಸಿಐ ಈಗಾಗಲೇ ದ್ರಾವಿಡ್ ಅವರ ಮನವೊಲಿಸಲು ಯಶಸ್ವಿಯಾಗಿದ್ದು, ಹೀಗಾಗಿ ಅವರೇ ಮುಂದಿನ ಕೋಚ್ ಆಗಲಿದ್ದಾರೆ ಎನ್ನಲಾಗುತ್ತಿದೆ.

ಈ ಮೊದಲು ಕೋಚ್ ಹುದ್ದೆಯನ್ನು ದ್ರಾವಿಡ್ ನಯವಾಗಿ ತಿರಸ್ಕರಿಸಿದ ಕಾರಣ ಬಿಸಿಸಿಐ ರಿಕಿ ಪಾಂಟಿಂಗ್ ಅವರನ್ನು ಸಂಪರ್ಕಿಸಿತ್ತು ಎನ್ನಲಾಗಿದೆ. ಏಕೆಂದರೆ ಪಾಂಟಿಂಗ್ 1995 ರಲ್ಲಿ ಮತ್ತು ದ್ರಾವಿಡ್ 1996 ರಲ್ಲಿ ಪಾದಾರ್ಪಣೆ ಮಾಡಿದ ಆಟಗಾರರು. ಇಬ್ಬರೂ ಆಟಗಾರರು 2012 ರಲ್ಲಿ ನಿವೃತ್ತರಾಗಿದ್ದರು. ಇಬ್ಬರೂ ಅವರ ಕಾಲದ ಶ್ರೇಷ್ಠ ಕ್ರಿಕೆಟಿಗರು ಎಂಬುದರಲ್ಲಿ ಸಂದೇಹವೇ ಇಲ್ಲ. ಇನ್ನು ಈ ಇಬ್ಬರೂ ಕ್ರಿಕೆಟಿಗರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿಯೇ ಕೋಚ್ ಹುದ್ದೆಗೆ ಬಿಸಿಸಿಐನ ಮೊದಲ ಆಯ್ಕೆ ಈ ಇಬ್ಬರು ಆಟಗಾರರಾಗಿತ್ತು ಎಂದು ಹೇಳಲಾಗಿದೆ.

ಟಿ20 ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ರವಿ ಶಾಸ್ತ್ರಿ ಅವರ ಟೀಮ್ ಇಂಡಿಯಾ ಕೋಚ್ ಹುದ್ದೆಯ ಅಧಿಕಾವಧಿ ಮುಗಿಯಲಿದೆ. ಹೀಗಾಗಿ ಬಿಸಿಸಿಐ ಈಗಾಗಲೇ ಹೊಸ ಕೋಚ್ ನೇಮಕಕ್ಕೆ ಮುಂದಾಗಿದೆ. ಅದರಂತೆ ಅಕ್ಟೋಬರ್ 26 ರ ಸಂಜೆ 5 ಗಂಟೆಯೊಳಗೆ ಟೀಮ್ ಇಂಡಿಯಾ ಕೋಚ್​ ಹುದ್ದೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್​ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?

ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ

(Ricky Ponting Turned Down BCCI After Being Approached For Team India Coach Role)

Published On - 5:27 pm, Sun, 17 October 21