ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ರಿಂಕು ಸಿಂಗ್ ನಿಶ್ಚಿತಾರ್ಥ; ಕುಟುಂಬಸ್ಥರು ಹೇಳಿದ್ದೇನು?
Rinku Singh Engagement: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಎರಡೂ ಕುಟುಂಬಗಳು ಸ್ಪಷ್ಟನೆ ನೀಡಿದ್ದು, ಮದುವೆಯ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ ಆದರೆ ಇನ್ನೂ ಯಾವುದೇ ನಿಶ್ಚಿತಾರ್ಥ ಅಥವಾ ವಿವಾಹ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರು ಉತ್ತರ ಪ್ರದೇಶದ ಮಚಿಲ್‌ಶಹರ್‌ನ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಇಬ್ಬರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಎರಡು ಕುಟುಂಬದವರು ಅಲ್ಲಗಳೆದಿದ್ದಾರೆ. ಆದಾಗ್ಯೂ ಈ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಮದುವೆಯ ಬಗ್ಗೆ ಮಾತುಕತೆ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿಯಾ ಸರೋಜ್ ತಂದೆ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ತೂಫಾನಿ ಸರೋಜ್ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ ಇಲ್ಲಿಯವರೆಗೆ ಯಾವುದೇ ನಿಶ್ಚಿತಾರ್ಥ ನಡೆದಿಲ್ಲ. ಎಂಗೇಜ್ಮೆಂಟ್ ಆದರೆ ಅದನ್ನು ಎಲ್ಲರಿಗೂ ತಿಳಿಸಲಾಗುವುದು ಎಂದಿದ್ದಾರೆ.
ಮತ್ತೊಂದೆಡೆ, ಈ ವದಂತಿಯ ಬಗ್ಗೆ ಹೇಳಿಕೆ ನೀಡಿರುವ ರಿಂಕು ಸಿಂಗ್ ಅವರ ಮ್ಯಾನೇಜರ್ ಅರ್ಜುನ್ ಸಿಂಗ್ ಫಕೀರಾ, ಎರಡು ಕುಟುಂಬಗಳು ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದು, ಚರ್ಚೆಯ ನಂತರವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ಸದ್ಯ ರಿಂಕು ಸಿಂಗ್ ಕೋಲ್ಕತ್ತಾದಲ್ಲಿದ್ದು, ಪ್ರಿಯಾ ಸರೋಜ್ ತಿರುವನಂತಪುರಕ್ಕೆ ತೆರಳಿದ್ದಾರೆ.
Rinku Singh gets engaged to Samajwadi Party MP Priya Saroj. 💍
– Many congratulations to them! ❤️ pic.twitter.com/7b7Hb0D2Em
— Mufaddal Vohra (@mufaddal_vohra) January 17, 2025
ಪ್ರಿಯಾ ಸರೋಜ್ ಯಾರು?
ಇನ್ನು ರಿಂಕು ಸಿಂಗ್ರನ್ನು ವರಿಸಲಿರುವ ಪ್ರಿಯಾ ಸರೋಜ್ ಬಗ್ಗೆ ಹೇಳುವುದಾದರೆ, ಕೇವಲ 25 ನೇ ವಯಸ್ಸಿಗೆ ಸಂಸದರಾಗಿರುವ ಪ್ರಿಯಾ ಅವರು ಬಿಜೆಪಿಯ ಹಿರಿಯ ನಾಯಕಿ ಬಿಪಿ ಸರೋಜ್ ಅವರನ್ನು ಸೋಲಿಸುವ ಮೂಲಕ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಅವರು ಮಚ್ಚಿಲಿಶಹರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ. ಅವರು 1999, 2004 ಮತ್ತು 2009 ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇದರ ನಂತರ, ಅವರ ಮಗಳು ಪ್ರಿಯಾ ಸರೋಜ್ ಮಚ್ಚಿಲಿಶಹರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ದೇಶದ ಎರಡನೇ ಕಿರಿಯ ಸಂಸದರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಟಿ20 ಸ್ಟಾರ್ ರಿಕು ಸಿಂಗ್
ರಿಂಕು ಸಿಂಗ್ ಬಗ್ಗೆ ಪರಿಚಯದ ಅಗತ್ಯವಿಲ್ಲ. ಟಿ20 ಮಾದರಿಯಲ್ಲಿ ಪ್ರಸ್ತುತ ಅದ್ಭುತ ಪ್ರದರ್ಶನ ನೀಡುತ್ತಿರುವ ರಿಂಕು ಸಿಂಗ್ ಟೀಂ ಇಂಡಿಯಾ ಪರ ಇದುವರೆಗೆ 30 ಟಿ20 ಪಂದ್ಯಗಳಲ್ಲಿ 46ಕ್ಕೂ ಹೆಚ್ಚು ಸರಾಸರಿಯಲ್ಲಿ 507 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 160ಕ್ಕಿಂತ ಹೆಚ್ಚಿದೆ. ಇದಲ್ಲದೆ ರಿಂಕು ಟೀಂ ಇಂಡಿಯಾ ಪರ 2 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುವ ರಿಂಕು ಅವರನ್ನು ಹರಾಜಿಗೂ ಮುನ್ನವೇ ಬರೋಬ್ಬರಿ 13 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:02 pm, Fri, 17 January 25