IPL 2025: ಸಾವನ್ನೇ ಗೆದ್ದು ಬಂದ ರಿಷಬ್ ಪಂತ್​ಗೆ 27 ಕೋಟಿಯ ಒತ್ತಡವನ್ನು ಗೆಲ್ಲಲಾಗ್ತಿಲ್ಲ..!

Rishabh Pant's IPL 2025 Struggle: ಐಪಿಎಲ್ 2025ರಲ್ಲಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ ರಿಷಬ್ ಪಂತ್ ಅವರ ಆಟ ಕಳಪೆಯಾಗಿದೆ. ಅವರ ಬ್ಯಾಟಿಂಗ್ ಮತ್ತು ನಾಯಕತ್ವ ಎರಡೂ ನಿರಾಶಾದಾಯಕವಾಗಿದ್ದು, ಕೇವಲ 110 ರನ್ ಗಳಿಸಿದ್ದಾರೆ ಮತ್ತು ಗೆಲುವಿನ ಪ್ರಮಾಣ ಕಡಿಮೆಯಾಗಿದೆ. ಈ ವೈಫಲ್ಯಕ್ಕೆ ಅವರ ಮೇಲಿನ 27 ಕೋಟಿ ಬೆಲೆ ಒತ್ತಡ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.

IPL 2025: ಸಾವನ್ನೇ ಗೆದ್ದು ಬಂದ ರಿಷಬ್ ಪಂತ್​ಗೆ 27 ಕೋಟಿಯ ಒತ್ತಡವನ್ನು ಗೆಲ್ಲಲಾಗ್ತಿಲ್ಲ..!
Rishabh Pant

Updated on: Apr 28, 2025 | 7:09 PM

ರಿಷಬ್ ಪಂತ್ (Rishabh Pant)… ಟೀಂ ಇಂಡಿಯಾದ ಪ್ರತಿಭಾವಂತ ಕ್ರಿಕೆಟಿಗ ತನ್ನ ಅಚಾತುರ್ಯದಿಂದ ಭೀಕರ ಕಾರು ಅಪಘಾತಕ್ಕೀಡಾಗಿ ತನ್ನ ವೃತ್ತಿಜೀವನದಿಂದಲೇ ದೂರ ಹೋಗಬೇಕಾಗಿದ್ದ ಈ ಛಲಗಾರ, ಅಂತಹ ಸಾವನ್ನೇ ಗೆದ್ದುಬಂದಿದಲ್ಲದೆ, ವೃತ್ತಿಜೀವನದಲ್ಲೂ ಎರಡನೇ ಇನ್ನಿಂಗ್ಸ್ ಆರಂಭಿಸಿದ ಧೈರ್ಯವಂತ. ಆದರೆ ಆದ್ಯಾಗೂ ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃತ್ತಿಜೀವನಕ್ಕೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ವಿಲನ್ ರೀತಿ ಕಾಡುತ್ತಿದೆ. ಕೆಲವೇ ತಿಂಗಳಲ್ಲಿ ಇಂಜುರಿಯಿಂದ ಚೇತರಿಸಿಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು ಅಬ್ಬರಿಸಿದ್ದ ರಿಷಬ್​ ಪಂತ್​ಗೆ ಈ ಬಾರಿಯ ಐಪಿಎಲ್ (IPL 2025) ಮಾತ್ರ ದುಸ್ವಪ್ನವಾಗಿ ಕಾಡುತ್ತಿದೆ.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂಗಳಿಗೆ ಲಕ್ನೋ ಪಾಲಾಗಿದ್ದ ರಿಷಭ್ ಪಂತ್, ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಬೆಲೆ ಪಡೆದ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದರು. ಇದರ ಜೊತೆಗೆ ಅವರಿಗೆ ತಂಡದ ನಾಯಕತ್ವವೂ ಸಿಕ್ಕಿತ್ತು. ಹೀಗಾಗಿ ತಂಡದ ಆಡಳಿತ ಮಂಡಳಿ ಮತ್ತು ಲಕ್ನೋ ಅಭಿಮಾನಿಗಳು ಪಂತ್ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ರಿಷಭ್ ತಮ್ಮ ಅದ್ಭುತ ಬ್ಯಾಟಿಂಗ್ ಮತ್ತು ಅದ್ಭುತ ನಾಯಕತ್ವದಿಂದ ಲಕ್ನೋ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲಾ ಭರವಸೆಗಳು ಹುಸಿಯಾದಂತೆ ತೋರುತ್ತಿದೆ. ಒಂದೆಡೆ ಆಟಗಾರನಾಗಿ ವೈಫಲ್ಯ ಅನುಭವಿಸುತ್ತಿರುವ ಪಂತ್, ಇತ್ತ ನಾಯಕತ್ವದಲ್ಲಿಯೂ ಪರಿಣಾಮಕಾರಿಯಾಗಿಲ್ಲ.

ಪಂತ್​ಗೆ 27 ಕೋಟಿಯೇ ದುಬಾರಿ

ವಾಸ್ತವವಾಗಿ ಲಕ್ನೋ ಸೂಪರ್ ಜೈಂಟ್ಸ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್‌ರನ್ನು 27 ಕೋಟಿಗೆ ಖರೀದಿಸಿದ ಬಳಿಕ ಈ ಮೊತ್ತ ಪಂತ್​ರನ್ನು ಒತ್ತಡಕ್ಕೀಡುಮಾಡಬಹುದು ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದರು. ಆದರೆ ಪಂತ್ ಮಾತ್ರ ನನಗೆ ಯಾವುದೇ ಒತ್ತಡವಿಲ್ಲ ಎಂದಿದ್ದರು. ಇತ್ತ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕೂಡ ಕೆಎಲ್ ರಾಹುಲ್ ನಾಯಕನಾಗಿ ಮಾಡಲು ಸಾಧ್ಯವಾಗದ ಪವಾಡವನ್ನು ರಿಷಭ್ ಪಂತ್ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದರು. ಲಕ್ನೋ ಫ್ಯಾನ್ಸ್ ಕೂಡ ಪಂತ್ ಅವರ ಬ್ಯಾಟ್‌ನಿಂದ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯನ್ನು ನಿರೀಕ್ಷಿಸುತ್ತಿದ್ದರು.

ಆದರೆ ಐಪಿಎಲ್ 2025 ರ ಪ್ರತಿಯೊಂದು ಪಂದ್ಯದಲ್ಲೂ ಪಂತ್ ಅವರ ಫಾರ್ಮ್ ಗ್ರಾಫ್ ಕುಸಿಯುತ್ತಿದೆ. ರಿಷಭ್ ಆಡಿರುವ 10 ಪಂದ್ಯಗಳಲ್ಲಿ ಕೇವಲ 110 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 12 ರಷ್ಟಿದ್ದರೆ, ಸ್ಟ್ರೈಕ್ ರೇಟ್ 100 ದಾಟಿಲ್ಲ. ಸ್ಟ್ರೈಕ್ ರೇಟ್ ಪ್ರಕಾರ, ಪಂತ್ ಅವರ ಸೀಸನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿದೆ.

ರಿಷಬ್​ ಪಂತ್​ಗಾಗಿ ನೆಚ್ಚಿನ ತಂಡವನ್ನೇ ಬದಲಿಸಿದ ಊರ್ವಶಿ ರೌಟೇಲಾ

ನಾಯಕತ್ವದಲ್ಲಿಯೂ ಪಂತ್ ಫೇಲ್

ಒಂದೆಡೆ ಪಂತ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿದ್ದರೆ, ಇದರೊಂದಿಗೆ ರಿಷಭ್ ನಾಯಕತ್ವ ಪರೀಕ್ಷೆಯಲ್ಲಿಯೂ ವಿಫಲರಾಗುತ್ತಿದ್ದಾರೆ. ಪಂತ್ ನಾಯಕತ್ವದಲ್ಲಿ 10 ಪಂದ್ಯಗಳನ್ನು ಆಡಿರುವ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಖಾತೆಯಲ್ಲಿ ಕೇವಲ 5 ಗೆಲುವುಗಳನ್ನು ಮಾತ್ರ ಹೊಂದಿದೆ. ಈಗ ಎಲ್‌ಎಸ್‌ಜಿ ಪ್ಲೇಆಫ್ ಟಿಕೆಟ್ ಬಯಸಿದರೆ, ತಂಡವು ಯಾವುದೇ ಬೆಲೆ ತೆತ್ತಾದರೂ ಉಳಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಬೌಲಿಂಗ್ ಬದಲಾವಣೆಗಳಿಂದ ಫೀಲ್ಡಿಂಗ್ ಸೆಟಪ್‌ವರೆಗೆ, ಪಂತ್ ಅವರ ನಾಯಕತ್ವವು ದುರ್ಬಲವಾಗಿ ಕಾಣುತ್ತಿದೆ. ಪಂತ್ ಅವರ ಆಟವನ್ನು ನೋಡಿದರೆ ಅವರು 27 ಕೋಟಿಗಳ ಒತ್ತಡವನ್ನು ಅನುಭವಿಸುತ್ತಿದ್ದು, ಈ ಮೊತ್ತ ಅವರ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರಿದೆ ಎಂಬುದನ್ನು ಅರಿತಿಕೊಳ್ಳಬಹುದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ