IPL 2025: ಟ್ರೋಫಿ ಎತ್ತುವ ಮೊದಲೇ ಇತಿಹಾಸ ಸೃಷ್ಟಿಸುವ ತವಕದಲ್ಲಿ ಆರ್‌ಸಿಬಿ
RCB's Unbeaten Away Streak: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರಲ್ಲಿ ತನ್ನ ಅತಿಥಿ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ತವರಿನ ಹೊರಗೆ ಆಡಿರುವ 6 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಮೇ 9 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ, ಆರ್‌ಸಿಬಿ ತಮ್ಮ ತವರಿನ ಹೊರಗೆ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಲಿದೆ.

ಐಪಿಎಲ್ 2025 (IPL 2025) ರ 46 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಜತ್ ಪಡೆ ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಚ್ಚರಿಯ ಸಂಗತಿಯೆಂದರೆ ಆರ್‌ಸಿಬಿ ಸೋತಿರುವ ಮೂರು ಪಂದ್ಯಗಳು ಕೂಡ ಅವರ ತವರು ನೆಲದಲ್ಲೇ ನಡೆದ ಪಂದ್ಯಗಳಾಗಿವೆ. ಆದಾಗ್ಯೂ ಆರ್‌ಸಿಬಿ ಇಲ್ಲಿಯವರೆಗೆ ಗೆದ್ದಿರುವ 6 ಪಂದ್ಯಗಳು ಕೂಡ ತವರು ನೆಲದ ಹೊರಗೆ ನಡೆದಿವೆ. ಅಂದರೆ ತವರಿನಿಂದ ಹೊರಗೆ ಆಡಿದ 6 ಕ್ಕೆ 6 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಈಗ ಮೇ 9 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಗಳಿಸಿದರೆ, ವಿಶೇಷ ಮೈಲಿಗಲ್ಲು ಸಾಧಿಸಲಿದೆ.
ಒಂದು ಗೆಲುವು ಮಾತ್ರ ಬೇಕು
ಈ ಸೀಸನ್ನಲ್ಲಿ ಆರ್‌ಸಿಬಿ ತನ್ನ ಅಭಿಯಾನವನ್ನು ಕೆಕೆಆರ್ ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವ ಮೂಲಕ ಆರಂಭಿಸಿತು. ಇದರ ನಂತರ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸಹ ಅವರ ತವರು ನೆಲದಲ್ಲಿ ಸೋಲಿಸಿತು. ಬಳಿಕ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಸಹ ಅವರ ತವರು ನೆಲದಲ್ಲಿ ಸೋಲಿಸುವ ಮೂಲಕ ಸತತ 6 ಪಂದ್ಯಗಳಲ್ಲಿ 6 ಗೆಲುವುಗಳನ್ನು ದಾಖಲಿಸಿದೆ.
ಇದೀಗ ಐಪಿಎಲ್ ಇತಿಹಾಸದಲ್ಲಿ ತಮ್ಮ ತವರಿನ ಹೊರಗೆ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಲು ಆರ್‌ಸಿಬಿಗೆ ಈಗ ಒಂದೇ ಒಂದು ಗೆಲುವು ಬೇಕು. ಮೇ 9 ರಂದು ಲಕ್ನೋದಲ್ಲಿ ನಡೆಯಲ್ಲಿರುವ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಹೊಸ ಇತಿಹಾಸ ಸೃಷ್ಟಿಯಾಗಲಿದೆ.
ಕೆಎಲ್ ರಾಹುಲ್ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಿ; ಮಾಜಿ ಆರ್‌ಸಿಬಿ ನಾಯಕನ ಒತ್ತಾಯ
ಆರ್‌ಸಿಬಿಗೆ ಸುವರ್ಣಾವಕಾಶ
2012 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತವರಿನ ಹೊರಗೆ ಆಡಿದ 9 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿತ್ತು. ಅದೇ ವರ್ಷ ಮುಂಬೈ ಇಂಡಿಯನ್ಸ್ ಕೂಡ 8 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿತು. ಆದರೆ, ಈ ಎರಡೂ ತಂಡಗಳು ತವರಿನ ಹೊರಗೆ ಕ್ಲೀನ್ ಸ್ವೀಪ್ ಸಾಧಿಸಲಿಲ್ಲ. ಆದರೀಗ ಆರ್‌ಸಿಬಿಗೆ ಆ ಅವಕಾಶವಿದೆ. ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅದರ ತವರು ನೆಲದಲ್ಲಿ ಸೋಲಿಸಿದರೆ, ಐಪಿಎಲ್ ಇತಿಹಾಸದಲ್ಲಿ ತವರಿನ ಹೊರಗೆ ಎಲ್ಲಾ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 pm, Mon, 28 April 25
