ಐಪಿಎಲ್ ಮುಗಿಯುವ ಮುನ್ನವೇ ರಿಷಭ್ ತಲೆದಂಡ..! ಲಕ್ನೋ ನಾಯಕತ್ವಕ್ಕೆ ಪಂತ್ ರಾಜೀನಾಮೆ
Rishabh Pant Resigns as LSG Captain: ಐಪಿಎಲ್ 2026ರ ಕಳಪೆ ಪ್ರದರ್ಶನದ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 14 ಪಂದ್ಯಗಳಲ್ಲಿ ಕೇವಲ 4 ಗೆದ್ದ ಲಕ್ನೋ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಫ್ರಾಂಚೈಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪಂತ್ ಅವರ ನಿರ್ಧಾರವನ್ನು ದೃಢಪಡಿಸಿದೆ. ಪಂತ್ ಅವರ ನಾಯಕತ್ವ ತ್ಯಾಗವು ತಂಡಕ್ಕೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ.

ಐಪಿಎಲ್ 2026 (IPL 2026) ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ನಡೆಯಬೇಕಿದೆ. ಇದಾದ ಬಳಿಕ ಮೇ 30 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಆ ಪಂದ್ಯಕ್ಕೂ ಮುನ್ನವೇ ಲಕ್ನೋ ಸೂಪರ್ಜೈಂಟ್ಸ್ (Lucknow Super Giants) ತಂಡದಿಂದ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ.. ಕಳೆದ ಎರಡು ಆವೃತ್ತಿಗಳಿಂದ ಲಕ್ನೋ ತಂಡದ ನಾಯಕತ್ವವಹಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಾಸ್ತವವಾಗಿ ಈ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಐಪಿಎಲ್ ಮುಗಿದ ಬಳಿಕ ಪಂತ್ ತಲೆದಂಡ ಖಚಿತ ಎಂದು ಹೇಳಲಾಗುತ್ತಿತ್ತು. ಅದರಂತೆ ಈಗ ಫ್ರಾಂಚೈಸಿ ಹಂಚಿಕೊಂಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ರಿಷಭ್ ಪಂತ್ ನಾಯಕತ್ವ ತ್ಯಜಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ.
ಮೇಲೆ ಹೇಳಿದಂತೆ ಲೀಗ್ ಹಂತ ಮುಗಿಯುವುದಕ್ಕೂ ಮುನ್ನವೇ ರಿಷಭತ್ ಪಂತ್ ನಾಯಕತ್ವ ಕಳೆದುಕೊಳ್ಳುವುದು ಖಚಿತ ಎಂಬ ಮಾತು ಕೇಳಿಬಂದಿದ್ದವು. ಏಕೆಂದರೆ ಈ ಆವೃತ್ತಿಯಲ್ಲಿ ರಿಷಭ್ ಪಂತ್ ಅವರ ಪ್ರದರ್ಶನ ಕಳಪೆಯಾಗಿತ್ತು, ಇದರಿಂದ ಅವರು ನಿರಂತರ ಒತ್ತಡದಲ್ಲಿದ್ದರು. ಅದರಂತೆ ಈಗ ಪಂತ್ ನಾಯಕತ್ವವನ್ನು ತ್ಯಜಿಸಿದ್ದಾರೆ. ಆದಾಗ್ಯೂ ಪಂತ್ ಅವರೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಯೇ ಅಥವಾ ತಂಡದ ಮಾಲೀಕರು ಮತ್ತು ನಿರ್ವಹಣೆ ಇಂತಹ ಹೆಜ್ಜೆ ಇಟ್ಟಿದೆಯೇ ಎಂಬ ಪ್ರಶ್ನೆಗಳು ಈಗ ಎದ್ದಿವೆ. ಏಕೆಂದರೆ ಈ ಹಿಂದೆಯೂ ಲಕ್ನೋ ತಂಡದಲ್ಲಿ ಈ ರೀತಿಯ ಘಟನೆಗಳು ನಡೆದಿದ್ದವು. ಕನ್ನಡಿಗ ಕೆಎಲ್ ರಾಹುಲ್ರನ್ನು ಲಕ್ನೋ ಫ್ರಾಂಚೈಸಿ ಇದೇ ರೀತಿಯಾಗಿ ನಡೆಸಿಕೊಂಡಿತ್ತು.
Official announcement. pic.twitter.com/7WeOwpkDr6
— Lucknow Super Giants (@LucknowIPL) May 29, 2026
ಫ್ರಾಂಚೈಸಿ ಹೇಳಿಕೆಯಲ್ಲಿ ಏನಿದೆ?
ತಮ್ಮ ಎಕ್ಸ್ ಖಾತೆಯಲ್ಲಿ ರಿಷಭ್ ಪಂತ್ ರಾಜೀನಾಮೆಯ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಲಕ್ನೋ ಫ್ರಾಂಚೈಸಿ, ‘ ರಿಷಭ್ ಪಂತ್ ನಾಯಕತ್ವವನ್ನು ತ್ಯಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ಫ್ರಾಂಚೈಸಿ ಇದನ್ನು ಔಪಚಾರಿಕವಾಗಿ ಘೋಷಿಸಿದೆ. ಅಲ್ಲದೆ ಫ್ರಾಂಚೈಸಿಯೂ ಕೂಡ ಪಂತ್ ಅವರ ನಿರ್ಧಾರವನ್ನು ಸ್ವಾಗತಿಸಿದೆ. ರಿಷಭ್ ಪಂತ್ ಅವರೇ ಈ ನಿರ್ಧಾರವನ್ನು ಫ್ರಾಂಚೈಸಿಗೆ ತಿಳಿಸಿದ್ದರು. ಇದೀಗ ಅದನ್ನು ಗೌರವದಿಂದ ಸ್ವೀಕರಿಸಲಾಗಿದೆ. ರಿಷಭ್ ಪಂತ್ ಅವರ ಕೊಡುಗೆಗೆ ಧನ್ಯವಾದ ಅರ್ಪಿಸಿರುವ ಫ್ರಾಂಚೈಸಿ, ಮುಂದಿನ ಸೀಸನ್ ಆರಂಭಕ್ಕೂ ಮೊದಲು ತಂಡವನ್ನು ಪುನರ್ನಿರ್ಮಿಸುವ ಗುರಿ ಹೊಂದಿರುವುದಾಗಿ ತಿಳಿಸಿದೆ.
ಪಂತ್ ಪ್ರದರ್ಶನ ಹೇಗಿತ್ತು?
ರಿಷಭ್ ಪಂತ್ ಅವರನ್ನು ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಲಕ್ನೋ ಖರೀದಿಸಿತು. ಈ ಮೂಲಕ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಇದಾದ ಬಳಿಕ ಪಂತ್ ಅವರನ್ನು ತಂಡದ ನಾಯಕರನ್ನಾಗಿಯೂ ನೇಮಿಸಲಾಯಿತು. ಆದಾಗ್ಯೂ, ಅವರ ನಾಯಕತ್ವದಲ್ಲಿ, ಲಕ್ನೋ ಎರಡೂ ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾಯಿತು. ಐಪಿಎಲ್ 2025 ರಲ್ಲಿ, ಲಕ್ನೋ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಗೆದ್ದು ಏಳನೇ ಸ್ಥಾನ ಪಡೆದುಕೊಂಡರೆ, 2026 ರಲ್ಲಿ, ತಂಡವು 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು 10 ನೇ ಸ್ಥಾನದಲ್ಲಿ ಮುಗಿಸಿತು.
IPL 2026: 1 ರನ್ ಬಾರಿಸಲು ರಿಷಭ್ ಪಂತ್ ಪಡೆದ ಸಂಬಳ ಬರೋಬ್ಬರಿ 9 ಲಕ್ಷ ರೂ..!
ಈ ಅವಧಿಯಲ್ಲಿ ಪಂತ್ ಅವರ ಬ್ಯಾಟಿಂಗ್ ಪ್ರದರ್ಶನವು ಅತ್ಯಂತ ಕಳಪೆಯಾಗಿತ್ತು ಲಕ್ನೋ ನಾಯಕನಾಗಿ ಮೊದಲ ಆವೃತ್ತಿಯಲ್ಲಿ ಪಂತ್ 14 ಪಂದ್ಯಗಳಲ್ಲಿ ಕೇವಲ 269 ರನ್ ಬಾರಿಸಿದ್ದರು. ಇನ್ನೂ ಈ ಆವೃತ್ತಿಯಲ್ಲೂ ಪಂತ್ ಆಡಿದ 14 ಪಂದ್ಯಗಳಲ್ಲಿ ಕೇವಲ 312 ರನ್ ಗಳಿಸುವಲ್ಲಿ ಯಶಸ್ವಿಯಾದರು, ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. ನಾಯಕನಾಗಿ ಹಾಗೂ ಆಟಗಾರನಾಗಿ ಎರಡರಲ್ಲೂ ವೈಫಲ್ಯ ಅನುಭವಿಸಿದ ಪಂತ್ಗೆ ಇದೀಗ ನಾಯಕತ್ವ ಜವಾಬ್ದಾರಿ ಇಲ್ಲದಿರುವುದು ಅವರ ಆಟದಲ್ಲಿ ಯಾವ ರೀತಿಯ ಬದಲಾವಣೆ ತರುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Fri, 29 May 26





