
ಐಪಿಎಲ್ 2025 (IPL 2025) ರ ಕೊನೆಯ ಲೀಗ್ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯಿತು. ಈ ಪಂದ್ಯವನ್ನು ಆರ್‌ಸಿಬಿ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ, ರಿಷಭ್ ಪಂತ್ (Rishabh Pant) ಅವರ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ ಜಿತೇಶ್ ಶರ್ಮಾ (Jitesh Sharma) ಅವರ ಅದ್ಭುತ ಇನ್ನಿಂಗ್ಸ್ ನಿಂದ ಸುಲಭವಾಗಿ ಗುರಿ ತಲುಪಿತು. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಿತ್ತಾದರೂ, ಎದುರಾಳಿ ತಂಡದ ನಾಯಕ ರಿಷಬ್ ಪಂತ್ ತಮ್ಮ ಕ್ರೀಡಾ ಸ್ಫೂರ್ತಿಯಿಂದ ಇಡೀ ಕ್ರೀಡಾ ಜಗತ್ತಿನ ಹೃದಯ ಗೆದ್ದರು.
ಅಷ್ಟಕ್ಕೂ ನಡೆದಿದ್ದೇನೆಂದರೆ, ಆರ್‌ಸಿಬಿ ಬ್ಯಾಟಿಂಗ್ ಮಾಡುವ ವೇಳೆ 17ನೇ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ನಾಯಕ ಪಂತ್, ದಿಗ್ವೇಶ್ ರಾಥಿಗೆ ನೀಡಿದರು. ಈ ಓವರ್ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಎಂದು ಸಾಭೀತಾಯಿತು. ಏಕೆಂದರೆ ಈ ಓವರ್ನ ಮೊದಲ ಎಸೆತವನ್ನು ರಿವರ್ ಸ್ವೀಪ್ ಆಡುವ ಯತ್ನದಲ್ಲಿ ನಾಯಕ ಜಿತೇಶ್, ಪಾಯಿಂಟ್ನಲ್ಲಿ ನಿಂತಿದ್ದ ಆಯುಷ್ಗೆ ಸುಲಭ ಕ್ಯಾಚ್ ನೀಡಿದರು. ಇತ್ತ ಜಿತೇಶ್ ಕೂಡ ಕ್ಯಾಚ್ ನೀಡಿದಕ್ಕೆ ನಿರಾಶರಾಗಿ ಸ್ವಲ್ಪ ಸಮಯ ಕ್ರೀಸ್ನಲ್ಲಿಯೇ ಮಂಡಿಯೂರು ಕುಳಿತುಕೊಂಡರು. ಆದರೆ ಇಲ್ಲಿ ಅದೃಷ್ಟ ಜಿತೇಶ್ ಪರವಿತ್ತು. ಏಕೆಂದರೆ ಜಿತೇಶ್ ಕ್ಯಾಚ್ ನೀಡಿದ ಆ ಎಸೆತ ನೋ ಬಾಲ್ ಆಗಿತ್ತು. ಹೀಗಾಗಿ ಜಿತೇಶ್ ಔಟಾಗುವುದರಿಂದ ಪಾರಾದರು. ಆ ಬಳಿಕ ಫ್ರೀ ಹಿಟ್ನ ಲಾಭ ಪಡೆದ ಜಿತೇಶ್ ಮುಂದಿನ ಎಸೆತವನ್ನು ಸಿಕ್ಸರ್ಗಟ್ಟಿದರು.
ಇನ್ನು ಇದೇ ಓವರ್‌ನಲ್ಲಿ ಮತ್ತೊಂದು ಆಘಾತ ಆರ್ಸಿಬಿಗೆ ಎದುರಾಗಿತ್ತು. ಆದರೆ ಈ ವೇಳೆ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ದೇವರಂತೆ ಕಾಣಿಸಿಕೊಂಡ ಪಂತ್, ತನ್ನ ಕ್ರೀಡಾ ಸ್ಫೂರ್ತಿಯಿಂದ ಎಲ್ಲರ ಹೃದಯ ಗೆದ್ದರು. ವಾಸ್ತವವಾಗಿ 17ನೇ ಓವರ್ನ ಕೊನೆಯ ಎಸೆತವನ್ನು ಎದುರಿಸಲು ಮಯಾಂಕ್ ಸ್ಟ್ರೈಕ್ನಲ್ಲಿದ್ದರೆ, ಜಿತೇಶ್ ನಾನ್ ಸ್ಟ್ರೈಕ್ನಲ್ಲಿದ್ದರು. ಈ ವೇಳೆ ಚಾಣಾಕ್ಷತನ ತೋರಿದ ದಿಗ್ವೇಶ್ ಮಂಕಡಿಗ್ ಮೂಲಕ ಜಿತೇಶ್ರನ್ನು ರನೌಟ್ ಮಾಡಿದರು. ಅಂದರೆ ಜಿತೇಶ್ ಬೌಲ್ ಮಾಡುವುದಕ್ಕೂ ಮುನ್ನವೇ ಜಿತೇಶ್ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದಿಗ್ವೇಶ್ ಕೂಡಲೇ ಬೆಲ್ಸ್ ಹಾರಿಸಿದರು.
#RCBvsLSG #ViratKohli #Rishabpant #Jiteshsharma pic.twitter.com/iZ4Cjnrxal
— Aditi🏵️🌼 (@GlamAditi_X) May 27, 2025
ಬೌಲರ್ನ ಅನುಮತಿಯ ಮೇರೆಗೆ ಅಂಪೈರ್ ಕೂಡ ಮೂರನೇ ಅಂಪೈರ್ಗೆ ಮನವಿ ಮಾಡಿದರು. ರಿವ್ಯೂವ್ ಪರಿಶೀಲಿಸಿದ ಮೂರನೇ ಅಂಪೈರ್ಗೆ ಜಿತೇಶ್ ಕ್ರೀಸ್ ಬಿಟ್ಟಿದ್ದು ಸ್ಪಷ್ಟವಾಗಿ ಗೋಚರಿಸಿತ್ತು. ಹೀಗಾಗಿ ಜಿತೇಶ್ ಔಟಾಗುವುದು ಖಚಿತವಾಗಿತ್ತು. ಆದರೆ ಮೂರನೇ ಅಂಪೈರ್ ನಿರ್ಧಾರ ನಾಟೌಟ್ ಎಂದು ದೊಡ್ಡ ಪರದೆಯ ಮೇಲೆ ಭಿತ್ತರವಾಯಿತು. ಇದನ್ನು ಗಮನಿಸಿದ ಎಲ್ಲರೂ ಕ್ಷಣ ಹೊತ್ತು ಆಶ್ಚರ್ಯಚಕಿತರಾದರು. ವಾಸ್ತವವಾಗಿ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಲು ಲಕ್ನೋ ನಾಯಕ ರಿಷಬ್ ಪಂತ್ ಕಾರಣರಾಗಿದ್ದರು. ಜಿತೇಶ್ ವಿಕೆಟ್ ಮನವಿಯನ್ನು ಪಂತ್ ವಾಪಸ್ ಪಡೆದರು. ನಿರ್ಣಾಯಕ ಹಂತದಲ್ಲಿ ಕ್ರೀಡಾ ಸ್ಫೂರ್ತಿ ತೋರಿದ ಪಂತ್ಗೆ ನಾಯಕ ಜಿತೇಶ್ ಕೂಡ ಪ್ರೀತಿಯ ಅಪ್ಪುಗೆ ನೀಡದರು. ಕೊನೆಯಲ್ಲಿ ಜಿತೇಶ್ ಔಟಾಗುವುದರಿಂದ ಪಾರಾಗಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 am, Wed, 28 May 25