ನಮಗೆ ಅರ್ಹತೆಯೇ ಇಲ್ಲ… ರಿಯಾನ್ ಪರಾಗ್ ಬೇಸರ..!

IPL 2026 DC vs RR: ಐಪಿಎಲ್​ನ 62ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 193 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.2 ಓವರ್​ಗಳಲ್ಲಿ 197 ರನ್ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನಮಗೆ ಅರ್ಹತೆಯೇ ಇಲ್ಲ... ರಿಯಾನ್ ಪರಾಗ್ ಬೇಸರ..!
Riyan Parag
Edited By:

Updated on: May 18, 2026 | 12:09 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್​ಗಳಲ್ಲಿ 197 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ತಮ್ಮ ತಂಡದ ಕಳಪೆ ಪ್ರದರ್ಶನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಸೋಲಿಗೆ ತಂಡದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕಾರಣ ಎಂದಿದ್ದಾರೆ.

ನಾವು ಅರ್ಹರಲ್ಲ!

ಪಂದ್ಯದ ಬಳಿಕ ಮಾತನಾಡಿದ ರಿಯಾನ್ ಪರಾಗ್,  “ನಾವು ಇದೇ ರೀತಿ ಆಟ ಮುಂದುವರಿಸಿದರೆ, ಟೂರ್ನಿಯ ಟಾಪ್-4 ಹಂತ ತಲುಪಲು ಖಂಡಿತ ಅರ್ಹರಲ್ಲ, ಪ್ಲೇಆಫ್​ ಆಡಲು ನಮಗೆ ಅರ್ಹತೆಯೇ ಇರಲ್ಲ” ಎಂದು ಪರಾಗ್ ನೇರವಾಗಿಯೇ ಹೇಳಿದ್ದಾರೆ.

ಏಕೆಂದರೆ ರಾಜಸ್ಥಾನ್ ರಾಯಲ್ಸ್​ ತಂಡವು 14 ಓವರ್‌ಗಳ ಮುಕ್ತಾಯಕ್ಕೆ  3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಆದರೆ 26 ಎಸೆತಗಳಲ್ಲಿ 51 ರನ್ ಗಳಿಸಿದ್ದ ರಿಯಾನ್ ಪರಾಗ್ ಔಟಾದ ಬಳಿಕ ಕೆಳ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಕೊನೆಯ 7 ಓವರ್‌ಗಳಲ್ಲಿ ತಂಡ ಕೇವಲ 41 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು.

220 ಅಥವಾ 230 ರನ್​ಗಳ ಗುರಿ ನೀಡುವ ಸೂಚನೆ ನೀಡಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ದಿಢೀರ್ ಕುಸಿತಕ್ಕೊಳಗಾಗಿ ಕೇವಲ 193 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಈ ಕಳಪೆ ಬ್ಯಾಟಿಂಗ್ ಅನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ರಿಯಾನ್ ಪರಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಫೀಲ್ಡಿಂಗ್​ ವೇಳೆ ಕೆ.ಎಲ್. ರಾಹುಲ್ ಶೂನ್ಯ ರನ್ ಗಳಿಸಿದ್ದಾಗ ಯಶ್ ರಾಜ್ ಪುಂಜಾ ಕ್ಯಾಚ್ ಕೈಬಿಟ್ಟಿದ್ದು ದುಬಾರಿಯಾಗಿ ಪರಿಣಮಿಸಿತು. “ನಾವು ಟ್ರೋಫಿ ಗೆಲ್ಲಬೇಕು ಎಂದರೆ ಇಂತಹ ಕಳಪೆ ಫೀಲ್ಡಿಂಗ್‌ ಬದಲಾಗಬೇಕು” ಎಂದು ರಿಯಾನ್ ಪರಾಗ್ ನೇರವಾಗಿ ಹೇಳಿದ್ದಾರೆ.

ಇದೇ ವೇಳೆ ಪಂದ್ಯದ ಕೊನೆಯಲ್ಲಿ 18 ಎಸೆತಗಳಲ್ಲಿ 35 ರನ್ ಬೇಕಾಗಿದ್ದಾಗ, ಅನುಭವಿ ದಸುನ್ ಶಾನಕ ಬದಲಿಗೆ ಪಾರ್ಟ್-ಟೈಮ್ ಆಫ್-ಸ್ಪಿನ್ನರ್ ಡೊನೊವನ್ ಫೆರೇರಾಗೆ ಓವರ್ ನೀಡಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಪರಾಗ್, ಕ್ರೀಸ್‌ನಲ್ಲಿ ಇಬ್ಬರು ಎಡಗೈ ಬ್ಯಾಟರ್‌ಗಳಿದ್ದ ಕಾರಣ ಈ ರಿಸ್ಕ್ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ: IPL 2026: CSK ಗೆದ್ದರೆ RCB ಗೆ ಪ್ಲಸ್ ಪಾಯಿಂಟ್..!

ಒಟ್ಟಾರೆಯಾಗಿ ಹೇಳುವುದಾದರೆ, ರಿಯಾನ್ ಪರಾಗ್ ಅವರ ಈ ನೇರ ನುಡಿಗಳು ತಂಡದಲ್ಲಿನ ಆಂತರಿಕ ಅಸಮಾಧಾನ ಮತ್ತು ಒತ್ತಡವನ್ನು ಎತ್ತಿ ತೋರಿಸುತ್ತವೆ. ಟೂರ್ನಿಯ ಮೊದಲಾರ್ಧದಲ್ಲಿ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್, ಲೀಗ್ ಹಂತದ ನಿರ್ಣಾಯಕ ಹಂತದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಈಗ ರಾಜಸ್ಥಾನ್ ತಂಡದ ಪ್ಲೇ-ಆಫ್ ಭವಿಷ್ಯ ಅವರದ್ದೇ ಕೈಯಲ್ಲಿದೆ. ಮುಂದಿನ ಪಂದ್ಯಗಳಲ್ಲಿ ತಂಡವು ತಪ್ಪುಗಳನ್ನು ತಿದ್ದಿಕೊಂಡು, ನಾಯಕ ನಿರೀಕ್ಷಿಸಿದ ಆಟವನ್ನು ಪ್ರದರ್ಶಿಸಿ ಅಗ್ರ ನಾಲ್ಕರ ಸ್ಥಾನ ಗಿಟ್ಟಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಹಾದಿ ಕಠಿಣ:

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇನ್ನು ಕೇವಲ 2 ಲೀಗ್ ಪಂದ್ಯಗಳು ಬಾಕಿ ಇವೆ. ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗದೆ ಪ್ಲೇ-ಆಫ್ ತಲುಪಬೇಕಾದರೆ ಆರ್​ಆರ್​ ಮುಂದಿನ ಎರಡೂ ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಿದೆ. ಮೇ 19 ರಂದು ಜೈಪುರದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದು, ಈ ಮ್ಯಾಚ್​ನಲ್ಲಿ ಸೋತರೆ ರಾಜಸ್ಥಾನ್ ರಾಯಲ್ಸ್ ತಂಡ ಹೊರಬೀಳುವುದು ಖಚಿತವಾಗಲಿದೆ.

 

 

Follow Us