ಜೊತೆ ಜೊತೆಯಾಗಿ ಅಭ್ಯಾಸ ಶುರು ಮಾಡಿದ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ
Rohit Sharma And Hardik Pandya: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಗಾಗಿ ಭರ್ಜರಿ ತಯಾರಿಯಲಿದ್ದಾರೆ. ಈ ತಯಾರಿಯ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಇದಕ್ಕೆ ಮುಖ್ಯ ಕಾರಣ ಐಪಿಎಲ್ 2024 ರಲ್ಲಿ ನಾಯಕರಾಗಿ ಕಾಣಿಸಿಕೊಂಡ ಪಾಂಡ್ಯ ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಐಪಿಎಲ್ 2024ರ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ನೀಡಿತ್ತು. ಹೀಗೆ ನಾಯಕತ್ವದೊಂದಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ರಿಎಂಟ್ರಿ ಕೊಟ್ಟಿದ್ದ ಪಾಂಡ್ಯ, ಮಾಜಿ ನಾಯಕನ ಮಾತುಗಳಿಗೆ ಬೆಲೆ ನೀಡಿರಲಿಲ್ಲ. ಅದರಲ್ಲೂ ರೋಹಿತ್ ಶರ್ಮಾ ಅವರನ್ನು ಹಲವು ಬಾರಿ ಗೌರವವಿಲ್ಲದೆ ನಡೆಸಿಕೊಂಡಿದ್ದರು.
ಈ ಘಟನೆಗಳ ಬಳಿಕ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೆ ಇದೀಗ ಎಲ್ಲವೂ ಸರಿಯಾಗಿದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ನಡುವೆ ಇದ್ದಂತಹ ಕಂದಕ ದೂರವಾಗಿದೆ. ಅಲ್ಲದೆ ಇದೀಗ ಇಬ್ಬರು ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಜೊತೆಯಾಗಿ ಅಭ್ಯಾಸವನ್ನು ಆರಂಭಿಸಿದ್ದಾರೆ.
ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಾಂಡ್ಯ ಹಾಗೂ ಹಿಟ್ಮ್ಯಾನ್ ಅಭ್ಯಾಸ ನಡೆಸಿದ್ದು, ಈ ಮೂಲಕ ಚಾಂಪಿಯನ್ಸ್ ಟ್ರೋಫಿಗಾಗಿ ಭರ್ಜರಿ ತಯಾರಿಯಲಿದ್ದಾರೆ.
ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ ಅಭ್ಯಾಸದ ವಿಡಿಯೋ:
Rohit Sharma and Hardik Pandya preparing for the Champions Trophy. 🏆pic.twitter.com/tHZAn91Sn3
— Mufaddal Vohra (@mufaddal_vohra) January 17, 2025
ಇದೀಗ ಇಬ್ಬರ ನಡುವಣ ವೈಮನಸ್ಯ ದೂರವಾಗಿರುವುದರಿಂದ ಈ ಬಾರಿಯ ಐಪಿಎಲ್ನಲ್ಲೂ ಮುಂಬೈ ಇಂಡಿಯನ್ಸ್ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಅದರಲ್ಲೂ ಹಾರ್ದಿಕ್ ಪಾಂಡ್ಯ ಗರಡಿಯಲ್ಲಿ ಹಿಟ್ಮ್ಯಾನ್ ಅವರ ಸಿಡಿಲಬ್ಬರವನ್ನು ಎದುರು ನೋಡಬಹುದಾಗಿದೆ.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ತಿಲಕ್ ವರ್ಮಾ, ಟ್ರೆಂಟ್ ಬೌಲ್ಟ್, ನಮನ್ ಧೀರ್, ರಾಬಿನ್ ಮಿಂಝ್, ಕರ್ಣ್ ಶರ್ಮಾ, ರಿಯಾನ್ ರಿಕೆಲ್ಟನ್, ದೀಪಕ್ ಚಹರ್, ಅಲ್ಲಾ ಗಜನ್ಫರ್, ವಿಲ್ ಜ್ಯಾಕ್ಸ್, ಅಶ್ವನಿ ಕುಮಾರ್, ಮಿಚೆಲ್ ಸ್ಯಾಂಟ್ನರ್, ರೀಸ್ ಟೋಪ್ಲಿ, ಕೃಷ್ಣನ್ ಶ್ರೀಜಿತ್, ರಾಜ್ ಅಂಗದ್ ಬಾವಾ, ಸತ್ಯನಾರಾಯಣ ರಾಜು, ಬೆವನ್ ಜೇಕಬ್ಸ್, ಅರ್ಜುನ್ ತೆಂಡೂಲ್ಕರ್, ಲಿಝಾದ್ ವಿಲಿಯಮ್ಸ್, ವಿಘ್ನೇಶ್ ಪುತ್ತೂರ್.