ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರೋಹಿತ್ ಶರ್ಮಾ
Rohit Sharma Retirement: ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೀಗ 50 ಓವರ್ಗಳ ಸ್ವರೂಪದಲ್ಲಿ ಹಿಟ್ಮ್ಯಾನ್ ಮತ್ತೊಂದಷ್ಟು ವರ್ಷಗಳ ಕಾಲ ಆಡುವ ಇರಾದೆಯಲ್ಲಿದ್ದಾರೆ. ಹೀಗಾಗಿ ಸದ್ಯ ನಿವೃತ್ತಿ ಘೋಷಿಸುತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 251 ರನ್ ಕಲೆಹಾಕಿದರೆ, ಭಾರತ ತಂಡ ಈ ಗುರಿಯನ್ನು ಕೇವಲ 49 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ಹಿಂದೆ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಅದರಂತೆ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ 37 ವರ್ಷದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇವೆಲ್ಲವೂ ಕೇವಲ ವದಂತಿ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಟ್ಮ್ಯಾನ್ “ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಹೊಂದುತ್ತಿಲ್ಲ. ದಯವಿಟ್ಟು ಇಂತಹ ವದಂತಿಗಳನ್ನು ಹರಡಬೇಡಿ” ಎಂದು ಮನವಿ ಮಾಡಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದು ಕನ್ಫರ್ಮ್ ಆಗಿದೆ.
ಅಲ್ಲದೆ ಭವಿಷ್ಯದ ಬಗ್ಗೆ ಯಾವುದೇ ಯೋಜನೆಗಳಿಲ್ಲ ಎಂದು ತಿಳಿಸಿರುವ ರೋಹಿತ್ ಶರ್ಮಾ, ಏನು ಆಗುತ್ತಿದೆಯೋ ಅದು ಮುಂದುವರಿಯುತ್ತದೆ ಎಂದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಮತ್ತಷ್ಟು ಕಾಲ ಆಡುವ ಇರಾದೆಯಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯೊಂದಿಗೆ ರೋಹಿತ್ ಶರ್ಮಾ:
Goosebumps Moment..!!#ChampionsTrophy2025 #RohitSharma𓃵pic.twitter.com/fdvkc5ejap
— Binod (@wittybinod) March 10, 2025
ಸದ್ಯ ನಿವೃತ್ತಿ ನೀಡುತ್ತಿಲ್ಲ ಎಂದಿರುವ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಮುಂದಿನ ಎರಡು ವರ್ಷಗಳಲ್ಲಿ ಅವರ ವಯಸ್ಸು 39 ಆಗಿರಲಿದೆ. ಅತ್ತ ಏಕದಿನ ವಿಶ್ವಕಪ್ ಗೆಲ್ಲದಿರುವ ಕೊರಗು ಹೊಂದಿರುವ ಹಿಟ್ಮ್ಯಾನ್ ಅವರ ಮುಂದಿನ ಟಾರ್ಗೆಟ್ ಕೂಡ 50 ಓವರ್ಗಳ ವಿಶ್ವಕಪ್.
ಇದನ್ನೂ ಓದಿ: ಶರವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ಮಿಲ್ಲರ್
ಹೀಗಾಗಿ ಪ್ರಸ್ತುತ ಫಾರ್ಮ್ ಅನ್ನು ಮುಂದಿನ ಎರಡು ವರ್ಷಗಳ ಕಾಲ ಮುಂದುವರೆಸಿ ಏಕದಿನ ವಿಶ್ವಕಪ್ನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳಲು ಪ್ಲ್ಯಾನ್ ರೂಪಿಸಿದ್ದಾರೆ. ಇದಾಗ್ಯೂ 37 ವರ್ಷದ ರೋಹಿತ್ ಶರ್ಮಾ ಮುಂದಿನ ಎರಡು ವರ್ಷಗಳ ಕಾಲ ತಂಡದಲ್ಲಿ ಇರಲಿದ್ದಾರಾ ಎಂಬುದೇ ಪ್ರಶ್ನೆ.
Published On - 7:31 am, Mon, 10 March 25