
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಡುವೆ ಬಿಸಿಸಿಐ (BCCI) ತೆಗೆದುಕೊಂಡಿರುವ ಅದೊಂದು ನಿರ್ಧಾರ ಭಾರತ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಏಕದಿನ ವಿಶ್ವಕಪ್‌ಗೆ ಇನ್ನೊಂದು ವರ್ಷ ಬಾಕಿ ಇರುವಾಗ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಟೀಂ ಇಂಡಿಯಾವನ್ನು ನಾಯಕನಾಗಿ ಮುನ್ನಡಸುವುದರ ಜೊತೆಗೆ ತಂಡವನ್ನು ಹಲವು ಸ್ಮರಣೀಯ ಗೆಲುವಿನತ್ತ ಕೊಂಡೊಯ್ದಿದ್ದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾರನ್ನು (Rohit Sharma) ಏಕದಿನ ತಂಡದಿಂದಲೂ ಕೈಬಿಡುವುದಕ್ಕೆ ಬಿಸಿಸಿಐ ಮುಂದಾಗಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಭಿಮಾನಿಗಳ ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರರು ಕೂಡ ಬಿಸಿಸಿಐನ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಜುಲೈ 19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯದ ನಂತರ ಅವರನ್ನು ಏಕದಿನ ತಂಡದಿಂದ ಕೈಬಿಡುವುದರ ಜೊತೆಗೆ 2027 ರ ವಿಶ್ವಕಪ್‌ಗೆ ರೋಹಿತ್ ಅವರನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದು ಆಯ್ಕೆದಾರರು ತಿಳಿಸಿದ್ದಾರೆ ಎಂದು ವರದಿಗಳಾಗಿವೆ. ಇದೀಗ ಈ ಬಿಸಿಸಿಐನ ಈ ನಿರ್ಧಾರವನ್ನು ಪ್ರಶ್ನಿಸಿರುವ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್, ಟೀಂ ಇಂಡಿಯಾದ ಚಿಂತನೆಯನ್ನು ಪ್ರಶ್ನಿಸಿದ್ದು, ವಿಶ್ವಕಪ್‌ಗೆ ಕೇವಲ ಒಂದು ವರ್ಷ ಬಾಕಿ ಇರುವಾಗ ಇಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ. ಹಾಗೊಂದು ವೇಳೆ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ, ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣವೇ ತೆಗೆದುಕೊಳ್ಳಬೇಕಾಗಿತ್ತು ಎಂದಿದ್ದಾರೆ.
‘ರೋಹಿತ್ ಮತ್ತು ವಿರಾಟ್‌ರಂತಹ ಆಟಗಾರರು ಗೌರವಕ್ಕೆ ಅರ್ಹರು. ಆಯ್ಕೆದಾರರು ಆಟಗಾರರೊಂದಿಗೆ ನೇರವಾಗಿ ಮಾತನಾಡಬೇಕು ಏಕೆಂದರೆ ಆಟಗಾರರು ಎಂದಿಗೂ ನಿವೃತ್ತರಾಗಬೇಕು ಎಂದು ಭಾವಿಸುವುದಿಲ್ಲ. ಬದಲಿಗೆ ಅವರು ಯಾವಾಗಲೂ ಆಡಲು ಬಯಸುತ್ತಾರೆ. ಹೀಗಾಗಿ ಬಿಸಿಸಿಐ, ರೋಹಿತ್ರನ್ನು 2027 ರ ಏಕದಿನ ವಿಶ್ವಕಪ್‌ಗೆ ಆಯ್ಕೆ ಮಾಡದಿರಲು ಚಿಂತಿಸಿದ್ದರೆ, ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈಗ, ವಿಶ್ವಕಪ್‌ಗೆ ಕೇವಲ 12-15 ತಿಂಗಳುಗಳು ಉಳಿದಿರುವಾಗ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದು ತುಂಬಾ ತಡವಾಗಿದೆ’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
IND vs ENG: ಹಿಟ್ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ?
ಬಿಸಿಸಿಐನ ಈ ನಿರ್ಧಾರದ ಹಿಂದೆ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಫಿಟ್ನೆಸ್ ಕೂಡ ಕಾರಣವಾಗಿದೆ. ಐಪಿಎಲ್ ಸಮಯದಲ್ಲಿ ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು, ಇದರಿಂದಾಗಿ ಅವರು ಐದು ಪಂದ್ಯಗಳಿಂದ ಹೊರಗುಳಿದಿದ್ದರು. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಸಮಯದಲ್ಲಿಯೂ ರೋಹಿತ್ ಲಯದಲ್ಲಿ ಕಂಡುಬರಲಿಲ್ಲ. ಈಗ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ವಿಶೇಷವಾಗಿರಲಿಲ್ಲ. ಪವರ್‌ಪ್ಲೇನಲ್ಲಿ ಅವರ ಸ್ಟ್ರೈಕ್ ರೇಟ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಒಟ್ಟಾರೆಯಾಗಿ, ರೋಹಿತ್ ಅವರ ಫಾರ್ಮ್ ಮತ್ತು ಫಿಟ್ನೆಸ್ ಕೂಡ ಅವರಿಗೆ ವಿರುದ್ಧವಾಗಿದೆ. ಅದಕ್ಕಾಗಿಯೇ ಅವರ ವೃತ್ತಿಜೀವನವು ಈಗ ಅಂತ್ಯದ ಸಮೀಪದಲ್ಲಿದೆ.