‘ಯಾವುದೇ ಕಾರಣವಿಲ್ಲ’; ರೋಹಿತ್ ನಿವೃತ್ತಿಯ ಬಗ್ಗೆ ಎಬಿ ಡಿವಿಲಿಯರ್ಸ್ ಏನಂದ್ರು?
AB de Villiers on Rohit Sharma Retirement Rumors: ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ನಿವೃತ್ತಿಯಾಗುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಆದರೆ, ರೋಹಿತ್ ತಾನು ನಿವೃತ್ತಿಯಾಗುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ. ಇದೀಗ ರೋಹಿತ್ ಬೆನ್ನಿಗೆ ನಿಂತಿರುವ ಎಬಿ ಡಿವಿಲಿಯರ್ಸ್, ರೋಹಿತ್ ಅವರ ಗೆಲುವಿನ ಶೇಕಡಾವಾರು ಹಾಗೂ ಅವರ ಬ್ಯಾಟಿಂಗ್ ದಾಖಲೆಯನ್ನು ಶ್ಲಾಘಿಸುತ್ತಾ, ನಿವೃತ್ತಿ ಹೊಂದಲು ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ. ರೋಹಿತ್ ಭವಿಷ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ನೆನಪಾಗುವರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ (Champions Trophy) ಗೆದ್ದಿರುವ ಟೀಂ ಇಂಡಿಯಾ ಪ್ರಸ್ತುತ ವಿಶ್ರಾಂತಿಯಲ್ಲಿದೆ. ಆದಾಗ್ಯೂ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿ ಬಗ್ಗೆಗಿನ ಚರ್ಚೆಗಳಿಗೆ ಕೊನೆ ಸಿಕ್ಕಿಲ್ಲ. ವಾಸ್ತವವಾಗಿ ಫೈನಲ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ರೋಹಿತ್, ನಾನು ಸದ್ಯಕ್ಕೆ ನಿವೃತ್ತಿಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ರೋಹಿತ್ ಬೆನ್ನಿಗೆ ನಿಂತಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್ಸಿಬಿಯ ಆಪತ್ಬಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ (AB de Villiers), ‘ರೋಹಿತ್ ಶರ್ಮಾ ನಿವೃತ್ತಿ ಹೊಂದಲು ಯಾವುದೇ ಕಾರಣವಿಲ್ಲ. ಭವಿಷ್ಯದಲ್ಲಿ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಏಕದಿನ ನಾಯಕರಲ್ಲಿ ಒಬ್ಬರೆಂದು ನೆನಪಿಸಿಕೊಳ್ಳಲಾಗುತ್ತದೆ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ದಾಖಲೆಯೇ ಸಾಕ್ಷಿ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರೋಹಿತ್ ನಿವೃತ್ತಿಯ ಬಗ್ಗೆ ಮಾತನಾಡಿರುವ ಡಿವಿಲಿಯರ್ಸ್, ‘ಇತರ ನಾಯಕರಿಗೆ ಹೋಲಿಸಿದರೆ ರೋಹಿತ್ ಅವರ ಗೆಲುವಿನ ಶೇಕಡಾವಾರು ಪ್ರಮಾಣವನ್ನು ನೋಡಿದರೆ, ಅದು ಸುಮಾರು 74 ಪ್ರತಿಶತದಷ್ಟಿದೆ, ಇದು ಹಿಂದಿನ ಯಾವುದೇ ನಾಯಕನಿಗೆ ಹೋಲಿಸಿದರು ಅತ್ಯುತ್ತಮವಾಗಿದೆ. ರೋಹಿತ್ ಹೀಗೆಯೇ ಮುಂದುವರಿದರೆ, ಅವರು ಸಾರ್ವಕಾಲಿಕ ಶ್ರೇಷ್ಠ ಏಕದಿನ ನಾಯಕರಲ್ಲಿ ಒಬ್ಬರಾಗಿ ಸ್ಮರಣೀಯರಾಗುತ್ತಾರೆ. ಈಗಾಗಲೇ ರೋಹಿತ್ ಕೂಡ ನಿವೃತ್ತಿ ಹೊಂದುತ್ತಿಲ್ಲ ಎಂದು ಹೇಳಿರುವುದರಿಂದ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಡಿವಿಲಿಯರ್ಸ್ ವಿನಂತಿಸಿದ್ದಾರೆ.
ಫೈನಲ್‌ನಲ್ಲಿ ರೋಹಿತ್ ಅದ್ಭುತ ಪ್ರದರ್ಶನ
ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 252 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ರೋಹಿತ್ ಶರ್ಮಾ 83 ಎಸೆತಗಳಲ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಹೀಗಿರುವಾಗ ಅವರು ಏಕೆ ನಿವೃತ್ತರಾಗಬೇಕು?’ ನಾಯಕನಾಗಿ ಮಾತ್ರವಲ್ಲ, ಬ್ಯಾಟ್ಸ್‌ಮನ್ ಆಗಿಯೂ ಅವರ ದಾಖಲೆ ಅತ್ಯುತ್ತಮವಾಗಿದೆ. ಫೈನಲ್‌ನಲ್ಲಿ ಅವರು 76 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು ಮತ್ತು ಯಶಸ್ಸಿಗೆ ಅಡಿಪಾಯ ಹಾಕಿದರು. ಒತ್ತಡವಿದ್ದರೂ, ನಾಯಕನಾಗಿ ರೋಹಿತ್ ಮುನ್ನಡೆಸಿದರು.
ನಿವೃತ್ತಿ ಹೊಂದಲು ಯಾವುದೇ ಕಾರಣವಿಲ್ಲ
ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಮತ್ತು ನಾಯಕತ್ವದ ದಾಖಲೆಯನ್ನು ಶ್ಲಾಘಿಸಿದ ಡಿವಿಲಿಯರ್ಸ್, ‘ಕಳೆದ ಮೂರು ವರ್ಷಗಳಲ್ಲಿ ರೋಹಿತ್ ಏಕದಿನ ಮಾದರಿಯಲ್ಲಿ ತಮ್ಮ ಆಟವನ್ನು ಬದಲಾಯಿಸುವ ಮೂಲಕ ಹೊಸ ಎತ್ತರವನ್ನು ತಲುಪಿದ್ದಾರೆ. ಅವರು ಒಂಬತ್ತು ತಿಂಗಳೊಳಗೆ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ನಿವೃತ್ತಿ ಹೊಂದಲು ಯಾವುದೇ ಕಾರಣವಿಲ್ಲ.
ಇದನ್ನೂ ಓದಿ: ಡುಮ್ಮ ಎಂದು ಜರೀದಿದ್ದ ರೋಹಿತ್ಗೆ ಇಂದು ಸಲ್ಯೂಟ್ ಹೊಡೆದ ಕಾಂಗ್ರೆಸ್ ನಾಯಕಿ ಶಮಾ! ಹೇಳಿದ್ದೇನು?
ಪವರ್‌ಪ್ಲೇನಲ್ಲಿ ರೋಹಿತ್ ಉತ್ತಮ ಆಟ
‘ಪವರ್‌ಪ್ಲೇನಲ್ಲಿ ಅವರ ಸ್ಟ್ರೈಕ್ ರೇಟ್ ನೋಡಿದರೆ, 2022 ರ ಮೊದಲು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆಯಾಗಿತ್ತು. ಆದರೆ 2022 ರಿಂದ, ಅವರ ಸ್ಟ್ರೈಕ್ ರೇಟ್ ಮೊದಲ ಪವರ್‌ಪ್ಲೇನಲ್ಲಿ 115 ತಲುಪಿದೆ. ಇದು ಒಬ್ಬ ಒಳ್ಳೆಯ ಆಟಗಾರ ಮತ್ತು ಶ್ರೇಷ್ಠ ಆಟಗಾರನ ನಡುವಿನ ವ್ಯತ್ಯಾಸ. ನಿಮ್ಮ ಆಟವನ್ನು ಬದಲಾಯಿಸುವುದು ಮತ್ತು ಅದನ್ನು ಸುಧಾರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನೀವು ಯಾವಾಗಲೂ ಕಲಿಯಲು ಮತ್ತು ಸುಧಾರಿಸಲು ಏನಾದರೂ ಹೊಸದನ್ನು ಹೊಂದಿರುತ್ತೀರಿ. ಇದೀಗ ರೋಹಿತ್ ಶರ್ಮಾ ತಮ್ಮ ಫಿಟ್ನೆಸ್ ಬಗ್ಗೆ ಕೆಲಸ ಮಾಡುತ್ತಿದ್ದು, ಅವರ ಮುಂದಿನ ಗುರಿ 2027 ರ ವಿಶ್ವಕಪ್ ಗೆಲ್ಲುವುದು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Thu, 13 March 25