
ಕೆರಿಬಿಯನ್ ದ್ವೀಪದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ (West Indies vs Bangladesh) ನಡುವಣ ಮೊದಲ ಟಿ20 ಪಂದ್ಯದಲ್ಲಿ ರೋವ್ಮನ್ ಪೊವೆಲ್ (Rovman Powell) ಸ್ಪೋಟಕ ಆಟವಾಡುವ ಮೂಲಕ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ನಿಕೋಲಸ್ ಪೂರನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ 2ನೇ ಓವರ್ನಲ್ಲೇ ಕೈಲ್ ಮೇಯರ್ಸ್ (17) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬ್ರೂಕ್ಸ್ ಶೂನ್ಯಕ್ಕೆ ಶಕೀಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಅದರಂತೆ 43 ಎಸೆತಗಳಲ್ಲಿ 57 ರನ್ ಬಾರಿಸಿದರು. ಒಂದು ಹಂತದಲ್ಲಿ ತಂಡದ ಮೊತ್ತವು 130-140 ರ ಅಸುಪಾಸಿನಲ್ಲಿ ಇರಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ರನ್ ಗತಿ ಹೆಚ್ಚಿಸಲು ಶ್ರಮಿಸಿದ ಪೂರನ್ 30 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋವ್ಮನ್ ಪೊವೆಲ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅಂತಿಮ ಐದು ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪೊವೆಲ್ ಸಿಕ್ಸ್ -ಫೋರ್ಗಳ ಸುರಿಮಳೆಗೈದರು. 16ನೇ ಓವರ್ನಲ್ಲಿ ಶಕೀಬ್ ಅಲ್ ಹಸನ್ ಎಸೆತಗಳಲ್ಲಿ ಮೂರು ಸಿಕ್ಸರ್ಗಳ ಉತ್ತರ ನೀಡಿದ ವಿಂಡೀಸ್ ದಾಂಡಿಗನ್ನು ನಿಯಂತ್ರಿಸಲು ಬಾಂಗ್ಲಾ ಬೌಲರ್ಗಳು ಹರಸಾಹಸ ಪಡಬೇಕಾಯಿತು. ಅದರಂತೆ ಕೇವಲ 28 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಅಜೇಯ 61 ರನ್ ಬಾರಿಸಿ 20 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 193 ಕ್ಕೆ ತಂದು ನಿಲ್ಲಿಸಿದರು.
ಈ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು 23 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಅನಾಮುಲ್ ಹಕ್ 3, ಲಿಟನ್ ದಾಸ್ 5 ಮತ್ತು ನಾಯಕ ಮಹಮ್ಮದುಲ್ಲಾ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ ಶಕೀಬ್ ಮತ್ತು ಅಫೀಫ್ ಹುಸೇನ್ ಅರ್ಧಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಆಸರೆಯಾದರು. ಇನ್ನು ಅಫೀಫ್ 27 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರೆ, ಇತ್ತ ಶಕೀಬ್ ಅಲ್ ಹಸನ್ 52 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರೂ ತಂಡವನ್ನು ಗುರಿಮುಟ್ಟಿಸಲು ಸಾಧ್ಯವಾಗಿರಲಿಲ್ಲ. ಅದರಂತೆ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡವು 35 ರನ್ಗಳ ಭರ್ಜರಿ ಜಯ ಸಾಧಿಸಿತು.
ವೆಸ್ಟ್ ಇಂಡೀಸ್ ಪರ ರೋವ್ಮನ್ ಪೊವೆಲ್ ಅಂತಿಮ 28 ಎಸೆತಗಳಲ್ಲಿ 61 ರನ್ ಬಾರಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು. ಅದರಂತೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪೊವೆಲ್ ಭಾಜನರಾದರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ರೋವ್ಮನ್ ಪೊವೆಲ್ ಸ್ಪೋಟಕ ಇನಿಂಗ್ಸ್ ಮೂಲಕ ಗಮನ ಸೆಳೆದಿದ್ದರು. ಡೆಲ್ಲಿ ಪರ 12 ಇನಿಂಗ್ಸ್ ಆಡಿದ್ದ ವೆಸ್ಟ್ ಇಂಡೀಸ್ ದಾಂಡಿಗ 22 ಸಿಕ್ಸ್ ಹಾಗೂ 10 ಫೋರ್ನೊಂದಿಗೆ 250 ರನ್ ಕಲೆಹಾಕಿದ್ದರು.