ENG vs IND: ಕೊನೆಯ ದಿನ ಚೇಸ್ ಮಾಡಿ ಗೆಲ್ಲಲಿದೆಯಾ ಇಂಗ್ಲೆಂಡ್? ಟೀಮ್ ಇಂಡಿಯಾಗೆ ಭಯ ಶುರು

IND vs ENG: ಇಂಗ್ಲೆಂಡ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದುಕೊಂಡಿದೆ.

ENG vs IND: ಕೊನೆಯ ದಿನ ಚೇಸ್ ಮಾಡಿ ಗೆಲ್ಲಲಿದೆಯಾ ಇಂಗ್ಲೆಂಡ್? ಟೀಮ್ ಇಂಡಿಯಾಗೆ ಭಯ ಶುರು
IND vs ENG
TV9kannada Web Team

| Edited By: Zahir PY

Jul 04, 2022 | 6:58 PM

ಭಾರತ-ಇಂಗ್ಲೆಂಡ್ (India vs England) ನಡುವೆ ಎಡ್ಜ್​ಬಾಸ್ಟನ್​ನಲ್ಲಿರುವ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯವು ಇದೀಗ ಕುತೂಹಲಘಟ್ಟದತ್ತ ಸಾಗುತ್ತಿದೆ. ಏಕೆಂದರೆ ಮೊದಲ ಇನಿಂಗ್ಸ್​ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 2ನೇ ಇನಿಂಗ್ಸ್​ನಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸಿಲ್ಲ. ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ 416 ರನ್​ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವು 284 ರನ್​ಗಳಿಗೆ ಆಲೌಟ್ ಆಗಿತ್ತು. ಇದೀಗ ಮೊದಲ ಇನಿಂಗ್ಸ್​ನ 132 ರನ್​ಗಳ ಮುನ್ನಡೆಯೊಂದಿಗೆ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ 245 ರನ್​ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ತಂಡವು ಇಂಗ್ಲೆಂಡ್​ಗೆ 378 ರನ್​ಗಳ ಟಾರ್ಗೆಟ್ ನೀಡಿದೆ. ವಿಶೇಷ ಎಂದರೆ ನಾಲ್ಕನೇ ದಿನದಾಟ ಮೂರನೇ ಸೆಷನ್ ಇನ್ನಷ್ಟೇ ಮುಗಿಯಬೇಕಿದೆ. ಇನ್ನು ಐದನೇ ದಿನದಾಟದ ಕೂಡ ಉಳಿದಿದ್ದು, ಹೀಗಾಗಿ ಇಂಗ್ಲೆಂಡ್ ತಂಡವು ಈ ಬೃಹತ್ ಮೊತ್ತವನ್ನು ಚೇಸ್ ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಇಂಗ್ಲೆಂಡ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದುಕೊಂಡಿದೆ. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ 277 ರನ್​ಗಳನ್ನು ಚೇಸ್ ಮಾಡಿತ್ತು. ಇನ್ನು ಟ್ರೆಂಟ್ ಬ್ರಿಡ್ಜ್​ನಲ್ಲಿ ನಡೆದ 2ನೇ ಪಂದ್ಯವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿತ್ತು. ಕೊನೆಯ ದಿನದಾಟದಲ್ಲಿ 299 ರನ್​ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ 22 ಓವರ್​ಗಳು ಬಾಕಿಯಿರುವಂತೆ ಬೆನ್ನತ್ತಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಹಾಗೆಯೇ ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಪಂದ್ಯವನ್ನೂ ಕೂಡ ಇಂಗ್ಲೆಂಡ್​ 296 ರನ್​ಗಳ ಗುರಿ ಬೆನ್ನತ್ತಿ ಗೆದ್ದುಕೊಂಡಿತ್ತು.

ಈ ಮೂರು ಪಂದ್ಯಗಳ ಗೆಲುವಿನ ರೂವಾರಿಗಳೆಂದರೆ ಜೋ ರೂಟ್, ಜಾನಿ ಬೈರ್​ಸ್ಟೋವ್ ಹಾಗೂ ಬೆನ್​ ಸ್ಟೋಕ್ಸ್. ಇಲ್ಲಿ ಮೊದಲ ಇನಿಂಗ್ಸ್​ನಲ್ಲಿ ಭರ್ಜರಿ ಶತಕ ಸಿಡಿಸಿ ಬೈರ್​ಸ್ಟೋವ್ ಟೀಮ್ ಇಂಡಿಯಾ ಬೌಲರ್​ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದೀಗ 2ನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ 378 ರನ್​ಗಳ ಟಾರ್ಗೆಟ್ ನೀಡಿದೆ. ಇಲ್ಲಿ ಒಂದು ದಿನದಾಟ ಸಂಪೂರ್ಣ ಬಾಕಿಯಿರುವ ಕಾರಣ ಪಂದ್ಯದ ಚಿತ್ರಣ ಬದಲಾಗಲಿದೆಯಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದೆ.

ಏಕೆಂದರೆ ಈ ಹಿಂದೆ ಕೂಡ ಇಂಗ್ಲೆಂಡ್ ತಂಡವು ನಾಲ್ಕನೇ ಇನಿಂಗ್ಸ್​ನಲ್ಲಿ 2 ಬಾರಿ 300ಕ್ಕೂ ಅಧಿಕ ರನ್​ಗಳನ್ನು ಬೆನ್ನತ್ತಿ ಗೆದ್ದ ಇತಿಹಾಸ ಹೊಂದಿದೆ. 1977 ರಲ್ಲಿ ಭಾರತದ ವಿರುದ್ದ ಇಂಗ್ಲೆಂಡ್ 339 ರನ್​ಗಳ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಮತ್ತೊಮ್ಮೆ ಐತಿಹಾಸಿಕ ಚೇಸಿಂಗ್ ಗೆಲುವು ದಾಖಲಿಸಿದ್ದು ಆಸ್ಟ್ರೇಲಿಯಾ ವಿರುದ್ದ ಎಂಬುದು ವಿಶೇಷ. ಹೌದು, 2019 ರಲ್ಲಿ ಇಂಗ್ಲೆಂಡ್ ತಂಡವು ಲೀಡ್ಸ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಇನಿಂಗ್ಸ್​ನಲ್ಲಿ ಬರೋಬ್ಬರಿ 359 ರನ್​ ಬೆನ್ನತ್ತುವ ಮೂಲಕ ದಾಖಲೆ ಬರೆದಿತ್ತು.

ಇದೀಗ 378 ರನ್​ಗಳ ಟಾರ್ಗೆಟ್ ಇಂಗ್ಲೆಂಡ್ ಮುಂದಿದೆ. ಇಲ್ಲಿ ಇಂಗ್ಲೆಂಡ್​ ಮುಂದಿರುವುದು ಗೆಲುವಿನ ಆಯ್ಕೆ ಮಾತ್ರ. ಏಕೆಂದರೆ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ. ಹೀಗಾಗಿ ಸರಣಿಯನ್ನು ಸಮಬಲಗೊಳಿಸಲು ಇಂಗ್ಲೆಂಡ್​ ಗೆಲ್ಲಲೇಬೇಕು. ಏಕೆಂದರೆ ಈ ಸರಣಿಯು ಕಳೆದ ವರ್ಷ ನಡೆದ ಭಾರತ-ಇಂಗ್ಲೆಂಡ್ ನಡುವಣ ಸರಣಿಯ ಕೊನೆಯ ಪಂದ್ಯವಾಗಿದೆ. ಅಂದರೆ 5 ಪಂದ್ಯಗಳ ಸರಣಿಯ ಮೊದಲ 4 ಪಂದ್ಯಗಳು ಈಗಾಗಲೇ ಮುಗಿದಿದೆ. ಇನ್ನು ಐದನೇ ಪಂದ್ಯವನ್ನು ಕೊರೋನಾ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿತ್ತು. ಅದರಂತೆ ಇದೀಗ ಐದನೇ ಟೆಸ್ಟ್ ಪಂದ್ಯವನ್ನು ಆಡಲಾಗುತ್ತಿದೆ.

ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನು ಗೆದ್ದಿದ್ರೆ, ಇಂಗ್ಲೆಂಡ್ ಒಂದು ಜಯ ಸಾಧಿಸಿದೆ. ಇನ್ನು ಇಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಸದ್ಯ ಸರಣಿಯು 2-1 ಅಂತರದಲ್ಲಿದ್ದು, ಹೀಗಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್​ ಗೆದ್ದರೆ ಮಾತ್ರ ಸರಣಿ ಸಮಬಲಗೊಳ್ಳಲಿದೆ. ಹಾಗಾಗಿ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವ ಸಾಧ್ಯತೆ ಹೆಚ್ಚು. ಅದರಂತೆ ಮತ್ತೊಮ್ಮೆ ಜೋ ರೂಟ್, ಜಾನಿ ಬೈರ್​ಸ್ಟೋವ್, ಬೆನ್ ಸ್ಟೋಕ್ಸ್ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada