WTC Final: 69 vs 8: ಯಾರಿಗೆ ಸಿಗಲಿದೆ ಚಾಂಪಿಯನ್ ಪಟ್ಟ

South Africa vs Australia, Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ಜೂನ್ 11 ರಿಂದ ಶುರುವಾಗಿದ್ದು, ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ಇದಕ್ಕೂ ಮುನ್ನ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ (2021) ಹಾಗೂ ಆಸ್ಟ್ರೇಲಿಯಾ (2023) ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದವು.

WTC Final: 69 vs 8: ಯಾರಿಗೆ ಸಿಗಲಿದೆ ಚಾಂಪಿಯನ್ ಪಟ್ಟ
Wtc Final

Updated on: Jun 14, 2025 | 7:35 AM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final) ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಇಂದು ನಡೆಯಲಿರುವ ನಾಲ್ಕನೇ ದಿನದಾಟವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಚಾಂಪಿಯನ್ ಪಟ್ಟಕ್ಕೇರಲು ಸೌತ್ ಆಫ್ರಿಕಾಗೆ ಬೇಕಿರುವುದು ಕೇವಲ 69 ರನ್ ಗಳು ಮಾತ್ರ. ಅತ್ತ ಈ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್ ಗಳ ಅವಶ್ಯಕತೆ ಇದೆ. ಹೀಗಾಗಿ ಇಂದಿನ ದಿನದಾಟದಲ್ಲಿ ಫಲಿತಾಂಶ ಹೊರಬರುವುದು ಖಚಿತ.

ಅದರಂತೆ ಸೌತ್ ಆಫ್ರಿಕಾ ತಂಡವು ಗುರಿ ಮುಟ್ಟುವ ಮುನ್ನ 8 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಅಥವಾ ಆಫ್ರಿಕನ್ ಪಡೆ ಇದೇ ಮೊದಲ ಬಾರಿಗೆ ಟೆಸ್ಟ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

3 ದಿನದಾಟಗಳ ವಿವರ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್​ಗಳು 67 ರನ್​ಗಳಿಗೆ 4 ವಿಕೆಟ್ ಉರುಳಿಸಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಬ್ಯೂ ವೆಬ್​ಸ್ಟರ್ 5ನೇ ವಿಕೆಟ್​​ಗೆ 79 ರನ್​ಗಳನ್ನು ಪೇರಿಸಿದರು. ಆದರೆ ತಂಡದ ಮೊತ್ತ 147 ಆಗಿದ್ದ ವೇಳೆ ಸ್ಟೀವ್ ಸ್ಮಿತ್ (66) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ವೆಬ್​ಸ್ಟರ್ 92 ಎಸೆತಗಳಲ್ಲಿ 11 ಫೋರ್​ಗಳೊಂದಿಗೆ 72 ರನ್​ಗಳ ಕೊಡುಗೆ ನೀಡಿದರು. ಆದರೆ ಆ ಬಳಿಕ ಬಂದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 212 ರನ್​ಗಳಿಗೆ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.

ಸೌತ್ ಆಫ್ರಿಕಾ ಪರ 15.4 ಓವರ್​ಗಳನ್ನು ಎಸೆದ ಕಗಿಸೊ ರಬಾಡ 51 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮಾರ್ಕೊ ಯಾನ್ಸೆನ್ 3 ವಿಕೆಟ್ ಪಡೆದು ಮಿಂಚಿದರು.

ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಪೇರಿಸಿದ 212 ರನ್​ಗಳಿಗೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಮೊದಲ ಓವರ್​ನಲ್ಲೇ ಐಡೆನ್ ಮಾರ್ಕ್ರಾಮ್ (0) ವಿಕೆಟ್ ಕಬಳಿಸಿ ಮಿಚೆಲ್ ಸ್ಟಾರ್ಕ್​ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಇದರ ಬೆನ್ನಲ್ಲೇ ರಯಾನ್ ರಿಕೆಲ್ಟನ್ (16) ಕೂಡ ಸ್ಟಾರ್ಕ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಯಾನ್ ಮುಲ್ಡರ್​ (11) ಗೆ ಪ್ಯಾಟ್ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರೆ, ಜೋಶ್ ಹೇಝಲ್​ವುಡ್ ಎಸೆತದಲ್ಲಿ ಟ್ರಿಸ್ಟನ್ ಸ್ಟಬ್ಸ್ (1) ಔಟಾದರು. ಈ ಮೂಲಕ ಮೊದಲ ದಿನದಾಟ ಮುಕ್ತಾಯದ ವೇಳೆ ಸೌತ್ ಆಫ್ರಿಕಾ ತಂಡವು 4 ವಿಕೆಟ್ ಕಳೆದುಕೊಂಡು ಕೇವಲ 43 ರನ್​ ಮಾತ್ರ ಕಲೆಹಾಕಿತು.

ದ್ವಿತೀಯ ದಿನದಾಟದಲ್ಲೂ ಪೆವಿಲಿಯನ್ ಪರೇಡ್ ನಡೆಸಿದ ಸೌತ್ ಆಫ್ರಿಕಾ ಕೇವಲ 138 ರನ್ ಗಳಿಸಿ ಆಲೌಟ್ ಆಯಿತು.

74 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಲೆಕ್ಸ್ ಕ್ಯಾರಿ 43 ರನ್ ಗಳ ಕೊಡುಗೆ ನೀಡಿದರು.

ಇನ್ನು 10ನೇ ಕ್ರಮಾಂಕದಲ್ಲಿ ಆಡಿದ ಮಿಚೆಲ್ ಸ್ಟಾರ್ಕ್ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಅಜೇಯ 58 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 207 ರನ್​ಗಳಿಸಿ ಆಲೌಟ್ ಆಯಿತು.

ಮೊದಲ ಇನಿಂಗ್ಸ್​ನಲ್ಲಿನ 74 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 282 ರನ್​ಗಳ ಗುರಿ ಪಡೆದ ಸೌತ್ ಆಫ್ರಿಕಾ ತಂಡಕ್ಕೆ ಐಡೆನ್ ಮಾರ್ಕ್ರಾಮ್ ಭರ್ಜರಿ ಆರಂಭ ಒದಗಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಕ್ರಾಮ್ 159 ಎಸೆತಗಳಲ್ಲಿ 11 ಫೋರ್​ಗಳೊಂದಿಗೆ ಅಜೇಯ 102 ರನ್ ಬಾರಿಸಿದರೆ, ನಾಯಕ ಟೆಂಬಾ ಬವುಮಾ ಅಜೇಯ 65 ರನ್​ಗಳಿಸಿದರು. ಈ ಮೂಲಕ ಮೂರನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ ತಂಡವು 2 ವಿಕೆಟ್ ಕಳೆದುಕೊಂಡು 213 ರನ್​ ಕಲೆಹಾಕಿದೆ. ಇನ್ನು ನಾಲ್ಕನೇ ದಿನದಾಟದಲ್ಲಿ ಸೌತ್ ಆಫ್ರಿಕಾ 69 ರನ್​ಗಳಿಸಬೇಕಿದ್ದು, ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 8 ವಿಕೆಟ್​ಗಳ ಅವಶ್ಯಕತೆಯಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕೆಲ್ಟನ್ , ಟ್ರಿಸ್ಟನ್ ಸ್ಟಬ್ಸ್ , ಟೆಂಬಾ ಬವುಮಾ (ನಾಯಕ) , ಡೇವಿಡ್ ಬೆಡಿಂಗ್ಹ್ಯಾಮ್ , ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್) , ವಿಯಾನ್ ಮುಲ್ಡರ್ , ಮಾರ್ಕೊ ಯಾನ್ಸೆನ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಲುಂಗಿ ಎನ್ಗಿಡಿ.

ಇದನ್ನೂ ಓದಿ: ಐಪಿಎಲ್​ನ 3 ತಂಡಗಳು ಬ್ಯಾನ್, 2 ಟೀಮ್​​ಗಳು ಕ್ಯಾನ್ಸಲ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್ , ಕ್ಯಾಮರೋನ್ ಗ್ರೀನ್ , ಸ್ಟೀವನ್ ಸ್ಮಿತ್ , ಟ್ರಾವಿಸ್ ಹೆಡ್ , ಬ್ಯೂ ವೆಬ್‌ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್.

 

Published On - 7:34 am, Sat, 14 June 25