South Africa vs India: ಇಂದೇ ನಿರ್ಧಾರವಾಗಲಿದೆ 2ನೇ ಟೆಸ್ಟ್ ಭವಿಷ್ಯ: ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ

IND vs SA, 2nd Test Day 4: ಆಫ್ರಿಕಾನ್ನರ ಗೆಲುವಿಗೆ ಇನ್ನು ಬೇಕಿರುವುದು 122 ರನ್‌ ಮಾತ್ರ. ಈ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾದ ಕೈ ಮೇಲಾಗಿದೆ. ವಾಂಡರರ್ಸ್ ಟ್ರ್ಯಾಕ್‌ ಬೌಲರ್‌ಗಳಿಗೆ ನೆರವು ನೀಡುತ್ತಿರುವುದರಿಂದ ಹಾಗೂ ಅಂತಿಮ ಇನ್ನಿಂಗ್ಸ್‌ ನಲ್ಲಿ ಬ್ಯಾಟಿಂಗ್‌ ಕಠಿನವಾಗಿ ಪರಿಣಮಿಸುವುದರಿಂದ ಭಾರತವಿಲ್ಲಿ ಮೇಲುಗೈ ಸಾಧಿಸಬೇಕಿತ್ತು. ಆದರೆ ಪರಿಸ್ಥಿತಿ ಭಿನ್ನವಾಗಿ ಗೋಚರಿಸುತ್ತಿದೆ.

South Africa vs India: ಇಂದೇ ನಿರ್ಧಾರವಾಗಲಿದೆ 2ನೇ ಟೆಸ್ಟ್ ಭವಿಷ್ಯ: ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ
IND vs SA Day 4
Follow us
TV9 Web
| Updated By: Vinay Bhat

Updated on: Jan 06, 2022 | 7:32 AM

ಜೋಹಾನ್ಸ್​ಬರ್ಗ್​ನ ವಾಂಡರರ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಎರಡನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟಕ್ಕೆ ಬಂದುನಿಂತಿದೆ. ಇಂದಿನ ನಾಲ್ಕನೇ ದಿನದಾಟದಲ್ಲೇ ಗೆಲುವು ಯಾರಿಗೆ ಎಂಬುದು ನಿರ್ಧಾರವಾಗಲಿದೆ. ಮೂರನೇ ದಿನದಾಟಕ್ಕೆ ಹರಿಣಗಳು ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದು, ಗೆಲುವಿಗೆ 122 ರನ್​ಗಳ ಅವಶ್ಯಕತೆಯಿದೆ. ಇತ್ತ ಟೀಮ್ ಇಂಡಿಯಾ (Team India) ಗೆಲ್ಲಬೇಕಾದರೆ ಆಫ್ರಿಕಾದ 8 ವಿಕೆಟ್ ಕಬಳಿಸಬೇಕಿದೆ. ಹೀಗಾಗಿ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ರಾಹುಲ್ (KL Rahul) ಪಡೆ ಗೆದ್ದರೆ ಸರಣಿ ವಶಪಡಿಸಿಕೊಂಡ ಐತಿಹಾಸಿಕ ಸಾಧನೆ ಮಾಡಲಿದೆ. ಆಫ್ರಿಕಾ ಗೆದ್ದರೆ ಸರಣಿ ಸಮಬಲವಾಗಲಿದೆ. ಭಾರತ ಸದ್ಯ ವೇಗಿಗಳನ್ನೇ ನೆಚ್ಚಿಕೊಂಡಿದ್ದು, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಥಾಕೂರ್ ಮತ್ತು ಸಿರಾಜ್ ಮೇಲೆ ಸಾಕಷ್ಟು ಒತ್ತಡಗಳಿವೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ನಾಯಕ ಕೆಎಲ್ ರಾಹುಲ್ ಅವರ ಅರ್ಧಶತಕ ಹಾಗೂ ಆರ್. ಅಶ್ವಿನ್ ಅವರ 46 ರನ್​ಗಳ ನೆರವಿನಿಂದ 202 ರನ್ ಬಾರಿಸಿತಷ್ಟೆ. ಇದಕ್ಕೆ ಪ್ರತಿಯಾಗಿ ಸೌತ್ ಆಫ್ರಿಕಾ ಅಲ್ಪ ಮುನ್ನಡೆ ಪಡೆದುಕೊಂಡು 229 ರನ್​ಗೆ ಆಲೌಟ್ ಆಯಿತು. ತನ್ನ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದ ಭಾರತ ಮತ್ತೆ ಕಳಪೆ ಬ್ಯಾಟಿಂಗ್ ಮುಂದುವರೆಸಿತು. ಆದರೆ, ಕಳಪೆ ಫಾರ್ಮ್​ನಲ್ಲಿದ್ದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾದರು.

ಹೌದು, 2 ವಿಕೆಟ್ ನಷ್ಟಕ್ಕೆ 85 ರನ್‌ ಮಾಡಿದ್ದ ಭಾರತಕ್ಕೆ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಆಧಾರವಾದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. 3ನೇ ವಿಕೆಟಿಗೆ 144 ಎಸೆತಗಳಿಂದ 111 ರನ್‌ ಪೇರಿಸಿದರು. ಇದು ಏಶ್ಯದ ಆಚೆ ಪೂಜಾರ-ರಹಾನೆ ಜೋಡಿ ದಾಖಲಿಸಿದ ಅತ್ಯುತ್ತಮ ಜತೆಯಾಟವಾಗಿದೆ. ಸ್ಕೋರ್‌ ಎರಡೇ ವಿಕೆಟಿಗೆ 155ರ ತನಕ ಏರಿತು. ಭಾರತ ಬೃಹತ್‌ ಮುನ್ನಡೆ ಸಾಧಿಸುವ ಸಾಧ್ಯತೆ ದಟ್ಟವಾಗಿತ್ತು. ಆದರೆ 10 ರನ್‌ ಅಂತರದಲ್ಲಿ ಇವರಿಬ್ಬರೂ ಬೇರ್ಪಡುವುದರೊಂದಿಗೆ ದಕ್ಷಿಣ ಆಫ್ರಿಕಾ ತಿರುಗಿ ಬಿತ್ತು. 78 ಎಸೆತಗಳಿಂದ 58 ರನ್‌ ಬಾರಿಸಿದ ರಹಾನೆ ಭಾರತದ ಟಾಪ್‌ ಸ್ಕೋರರ್‌. ಸಿಡಿಸಿದ್ದು 8 ಬೌಂಡರಿ, ಒಂದು ಸಿಕ್ಸರ್‌. ಪೂಜಾರ ಗಳಿಕೆ 86 ಎಸೆತಗಳಿಂದ 53 ರನ್‌ (10 ಬೌಂಡರಿ).

ಬಳಿಕ ಬಂದ ರಿಷಭ್ ಪಂತ್ ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ ಹೋದರು. ಅನಗತ್ಯ ಶಾಟ್​ಗೆ ಕೈ ಹಾಕಿ ಕ್ಯಾಚಿತ್ತರು. ಮೂರು ಬಾಲ್ ಎದುರಿಸಿ ಶೂನ್ಯ ಸಂಪಾದನೆ ಮಾಡಿದರು. ಹನುಮ ವಿಹಾರಿ ಅವರು ಆಕರ್ಷಕ ಬ್ಯಾಟಿಂಗ್ ಮಾಡಿದರು. ಆರ್ ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್ (28) ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ವಿಹಾರಿ 40 ರನ್ ಗಳಿಸಿ ಔಟಾಗದೆ ಉಳಿದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ, ಲುಂಗಿ ಗಿಡಿ ಹಾಗೂ ಮಾರ್ಕೊ ಜ್ಯಾನ್ಸನ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.

ಗೆಲ್ಲಲು 240 ರನ್ ಗುರಿ ಪಡೆದ ಸೌತ್ ಆಫ್ರಿಕಾ ಉತ್ತಮ ಆರಂಭ ಪಡೆಯಿತು. ನಾಯಕ ಡೀನ್ ಎಲ್ಗರ್ ಮತ್ತು ಏಡನ್ ಮರ್ಕ್ರಮ್ ಮೊದಲ ವಿಕೆಟ್​ಗೆ 47 ರನ್ ಜೊತೆಯಾಟ ಆಡಿದರು. ಮರ್ಕ್ರಂ ಔಟಾದ ಬಳಿಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ 2ನೇ ವಿಕೆಟ್​ಗೆ 46 ರನ್ ಜೊತೆಯಾಟ ಆಡಿದರು. ಈಗ ಡೀನ್ ಎಲ್ಗಾರ್ ಮತ್ತು ರಾಸಿ ವಾನ್ ಡರ್ ಡುಸೆನ್ ಕ್ರೀಸ್​ನಲ್ಲಿದ್ಧಾರೆ.

ಆಫ್ರಿಕಾನ್ನರ ಗೆಲುವಿಗೆ ಇನ್ನು ಬೇಕಿರುವುದು 122 ರನ್‌ ಮಾತ್ರ. ಈ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾದ ಕೈ ಮೇಲಾಗಿದೆ. ವಾಂಡರರ್ಸ್ ಟ್ರ್ಯಾಕ್‌ ಬೌಲರ್‌ಗಳಿಗೆ ನೆರವು ನೀಡುತ್ತಿರುವುದರಿಂದ ಹಾಗೂ ಅಂತಿಮ ಇನ್ನಿಂಗ್ಸ್‌ ನಲ್ಲಿ ಬ್ಯಾಟಿಂಗ್‌ ಕಠಿನವಾಗಿ ಪರಿಣಮಿಸುವುದರಿಂದ ಭಾರತವಿಲ್ಲಿ ಮೇಲುಗೈ ಸಾಧಿಸಬೇಕಿತ್ತು. ಆದರೆ ಪರಿಸ್ಥಿತಿ ಭಿನ್ನವಾಗಿ ಗೋಚರಿಸುತ್ತಿದೆ.

IPL 2022: ಐಪಿಎಲ್​ಗೆ ಕೊರೋನಾತಂಕ ಶುರು..!