
ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ 2026ರ ಸೀಸನ್‌ನ ಮೊದಲ ಪಂದ್ಯದ ಪ್ರದರ್ಶನವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಸಂದೇಶವೊಂದು ಸದ್ಯ ಭಾರಿ ವೈರಲ್ ಆಗಿದೆ. ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಅರ್ಜುನ್ ತೆಂಡೂಲ್ಕರ್ ಈ ಸೀಸನ್‌ನ ತಮ್ಮ ಮೊದಲ ಪಂದ್ಯವನ್ನು ಆಡಿದರು.
ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ತಂಡಕ್ಕೆ ಟ್ರೇಡ್ ಆಗಿದ್ದ ಅರ್ಜುನ್, ಇಡೀ ಸೀಸನ್ ಬೆಂಚ್ ಕಾಯ್ದ ನಂತರ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದರು. ಈ ಸುದೀರ್ಘ ಕಾಯುವಿಕೆ ಮತ್ತು ಅವರ ಶ್ರಮವನ್ನು ಕಂಡು ತಂದೆಯಾಗಿ ಸಚಿನ್ ಭಾವುಕರಾಗಿದ್ದಾರೆ.
ಪಂದ್ಯ ಮುಗಿದ ತಕ್ಷಣ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ಮಗನನ್ನು ಬೆನ್ನುತಟ್ಟಿ ಸುದೀರ್ಘ ಸಂದೇಶ ಬರೆದಿದ್ದಾರೆ:
“ಅರ್ಜುನ್, ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಇಡೀ ಸೀಸನ್‌ನಲ್ಲಿ ನಿನ್ನನ್ನು ನೀನು ಮುನ್ನಡೆಸಿಕೊಂಡ ರೀತಿ ಅದ್ಭುತ. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅತ್ಯಂತ ತಾಳ್ಮೆಯಿಂದ, ಸದ್ದಿಲ್ಲದೆ ಕಠಿಣ ಪರಿಶ್ರಮ ಪಡುತ್ತಾ ಪಾಸಿಟಿವ್ ಆಗಿದ್ದೆ. ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ನೀನು ಧೃತಿಗೆಡಲಿಲ್ಲ. ಕ್ರಿಕೆಟ್ ಕೌಶಲ್ಯದಷ್ಟೇ ಮನುಷ್ಯನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಇಂದು ನೀನು ಇವೆರಡನ್ನೂ ಅತ್ಯಂತ ಸುಂದರವಾಗಿ ನಿಭಾಯಿಸಿದ್ದೀಯಾ. ಸದಾ ನೆಲದ ಮೇಲೆಯೇ ನಿನ್ನ ಕಾಲುಗಳಿರಲಿ, ಆಟದ ಮೇಲಿನ ನಿನ್ನ ಪ್ರೀತಿ ಹೀಗೆಯೇ ಮುಂದುವರಿಯಲಿ.” ಎಂದು ಸಚಿನ್ ತೆಂಡೂಲ್ಕರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ?
ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರೂ, ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದರು.
ಸ್ಟಾರ್ ಕ್ರಿಕೆಟರ್ ಮಗನಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ, ತಂಡದಲ್ಲಿ ಅವಕಾಶ ಸಿಗದಿದ್ದರೂ ಸದ್ದಿಲ್ಲದೆ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದ ಅರ್ಜುನ್ ತೆಂಡೂಲ್ಕರ್ ಅವರ ಶಿಸ್ತು ಹಾಗೂ ಅದಕ್ಕೆ ತಕ್ಕಂತೆ ಸಚಿನ್ ನೀಡಿರುವ ಮಾರ್ಗದರ್ಶನಕ್ಕೆ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಂದೆಯಾಗಿ ಸಚಿನ್ ನೀಡಿರುವ ಈ ಕಿವಿಮಾತು ಕೇವಲ ಅರ್ಜುನ್ ಗೆ ಮಾತ್ರವಲ್ಲ, ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೂ ಪ್ರೇರಣೆಯಾಗಿದೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.