ಇಂಗ್ಲೆಂಡ್ ಲಯನ್ಸ್ ವಿರುದ್ಧ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿ ಗೆದ್ದ ಭಾರತ ‘ಎ’
India A vs England Lions: ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವನ್ನು 2-0 ಅಂತರದಲ್ಲಿ ಮಣಿಸಿರುವ ಭಾರತ ಎ ತಂಡ ಸರಣಿ ವಿಜೇತ ಎನಿಸಿಕೊಂಡಿದೆ.
ಒಂದೆಡೆ ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ (India A vs England Lions) ತಂಡಗಳು ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಈ ಸರಣಿಯಲ್ಲಿ 2-0 ಅಂತರದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಮಣಿಸಿರುವ ಭಾರತ ಎ ತಂಡ ಸರಣಿ ವಿಜೇತ ಎನಿಸಿಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಅನಧಿಕೃತ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ತಂಡವನ್ನು 134 ರನ್‌ಗಳಿಂದ ಸೋಲಿಸಿ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
403 ರನ್‌ಗಳ ಗೆಲುವಿನ ಗುರಿ
ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಎ ತಂಡ 192 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಲಯನ್ಸ್ ಪಡೆ 199 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಆರಂಭಿಕ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದರೆ, ಉಳಿದವರಿಂದ ಅಲ್ಪ ಮೊತ್ತದ ಕಾಣಿಕೆ ಬಂತು. ಅಂತಿಮವಾಗಿ ತಂಡ 409 ರನ್‌ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿ ಇಂಗ್ಲೆಂಡ್ಗೆ 403 ರನ್‌ಗಳ ಗೆಲುವಿನ ಗುರಿ ನೀಡಿತು.
ಭಾರತ ಎ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಬಿಸಿಸಿಐ
Congratulations to India A on winning the series 2⃣-0⃣ 👏👏
The England Lions Tour of India Multiday Series comes to an end with India A registering a 134-run win today in Ahmedabad 🙌
Scorecard ▶️ https://t.co/ijC3MZdRid#TeamIndia | #INDvENG pic.twitter.com/Ghoo9fu90T
— BCCI (@BCCI) February 4, 2024
268 ರನ್‌ಗಳಿಗೆ ಆಲೌಟ್
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಲಯನ್ಸ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 268 ರನ್‌ಗಳಿಗೆ ಆಲೌಟ್ ಆಗುವ ಮೂಲಕ 134 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಇದರೊಂದಿಗೆ ಭಾರತ ಎ ತಂಡ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಭಾರತ ಎ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಲಯನ್ಸ್ ತಂಡವನ್ನು ಇನಿಂಗ್ಸ್ ಮತ್ತು 16 ರನ್‌ಗಳಿಂದ ಸೋಲಿಸಿತ್ತು. ಅದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಮೂರನೇ ಟೆಸ್ಟ್‌ನಲ್ಲಿ ಭಾರತ ಎ ಪರ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಸ್ಪಿನ್ನರ್ ಶಾಮ್ಸ್ ಮುಲಾನಿ (60 ರನ್‌ಗಳಿಗೆ ಐದು ವಿಕೆಟ್) ಮತ್ತು ಮಧ್ಯಪ್ರದೇಶದ ಆಫ್ ಸ್ಪಿನ್ನರ್ ಸರನ್ಶ್ ಜೈನ್ (50 ರನ್‌ಗೆ ಮೂರು ವಿಕೆಟ್) ಒಟ್ಟಿಗೆ ಎಂಟು ವಿಕೆಟ್ ಪಡೆದರು.
ಓಲಿ ರಾಬಿನ್ಸನ್ ಅರ್ಧಶತಕ
ಇಂಗ್ಲೆಂಡ್ ಲಯನ್ಸ್ ಪರ ಆರಂಭಿಕ ಆಟಗಾರ ಅಲೆಕ್ಸ್ ಲೀಸ್ 55 ರನ್‌ಗಳ ಇನ್ನಿಂಗ್ಸ್ ಆಡಿದರೆ, ಕೆಳಕ್ರಮಾಂಕದಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಓಲಿ ರಾಬಿನ್ಸನ್ (80 ರನ್) ಮತ್ತು ಜೇಮ್ಸ್ ಕೋಲ್ಸ್ (31 ರನ್) ಎಂಟನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಸುಲಭವಾಗಿ 200 ರನ್‌ಗಳ ಗಡಿ ದಾಟಿಸಿದರು. ಆದರೆ ತಂಡದ ಉಳಿದ ಆಟಗಾರರಿಂದ ಯಾವುದೇ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಹೊರಬರಲಿಲ್ಲ. ಅಂತಿಮವಾಗಿ ತಂಡ ಪಂದ್ಯದಲ್ಲಿ ಸೋಲುವುದರೊಂದಿಗೆ ಸರಣಿಯನ್ನು ಕಳೆದುಕೊಂಡಿತು.
ಸಾಯಿ ಸುದರ್ಶನ್ ಶತಕ
ಭಾರತ-ಎ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ 117 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಇವರ ಹೊರತಾಗಿ ಸರನ್ಶ್ ಜೈನ್ 63 ರನ್ ಹಾಗೂ ರಿಂಕು ಸಿಂಗ್ 38 ರನ್‌ಗಳ ಕೊಡುಗೆ ನೀಡಿದರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ತಿಲಕ್ ವರ್ಮಾ ಕೂಡ 46 ರನ್ ಸಿಡಿಸಿದರು. ಈ ಆಟಗಾರರಿಂದ ಭಾರತ ಎ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 409 ರನ್ ಗಳಿಸಲು ಸಾಧ್ಯವಾಯಿತು. ಪಂದ್ಯದಲ್ಲಿ ಭಾರತ ಎ ಪರ ಶತಕ ಸಿಡಿಸಿದ ಸಾಯಿ ಸುದರ್ಶನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Sun, 4 February 24