IND vs ENG: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; ಬೇಡದ ದಾಖಲೆ ಬರೆದ ಸಾಯಿ ಸುದರ್ಶನ್
Sai Sudharsan's Test Debut: ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯ ಆಡಿದ ಸಾಯಿ ಸುದರ್ಶನ್ ನಿರಾಶಾದಾಯಕ ಪ್ರದರ್ಶನ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದು ಕೇವಲ 4 ಎಸೆತಗಳಲ್ಲಿ 0 ರನ್ ಗಳಿಗೆ ಔಟಾದರು. ಇದು ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ 5ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಮುಜುಗರದ ದಾಖಲೆಗೆ ಕಾರಣವಾಯಿತು.

ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಅವಕಾಶ ಪಡೆದವನೇ ಅದೃಷ್ಟವಂತ. ಈ ಮಾದರಿಯಲ್ಲಿ ಯಶಸ್ವಿಯಾದವನಿಗೆ ಅಥವಾ ಉತ್ತಮ ಆರಂಭ ಪಡೆದುಕೊಂಡವನಿಗೆ ತಂಡದಲ್ಲಿ ಖಾಯಂ ಸ್ಥಾನ ಸಿಗುವುದು ಖಚಿತವೆನ್ನಬಹುದು. ಅದರಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಅವಕಾಶ ಪಡೆದಿದ್ದ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudharsan) ಕೂಡ ತನ್ನ ಮೊದಲ ಪಂದ್ಯವನ್ನು ಸ್ಮರಣೀಯಗೊಳಿಸಲು ಬಯಸಿದ್ದರು. ಆದರೆ ಅವರಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಅಂದುಕೊಂಡಂತಹ ಆರಂಭ ಸಿಗಲಿಲ್ಲ.
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಸಾಯಿ ಸುದರ್ಶನ್ ಖಾತೆ ತೆರೆಯದೆಯೇ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 4 ಎಸೆತಗಳನ್ನು ಎದುರಿಸಿದ ಸುದರ್ಶನ್, ಬೆನ್ ಸ್ಟೋಕ್ಸ್‌ಗೆ ಬಲಿಯಾದರು. ಇದರೊಂದಿಗೆ, ಅವರು ತಮ್ಮ ಖಾತೆಗೆ ಮುಜುಗರದ ದಾಖಲೆಯನ್ನು ಹಾಕಿಕೊಂಡರು.
ಸಾಯಿ ಸುದರ್ಶನ್ ಬೇಡದ ದಾಖಲೆ
ಲೀಡ್ಸ್ ಟೆಸ್ಟ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಸೊನ್ನೆ ಸುತ್ತಿದ ಸುದರ್ಶನ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 0 ರನ್‌ಗಳಿಗೆ ಔಟಾದ ಭಾರತೀಯ ಟೆಸ್ಟ್ ಇತಿಹಾಸದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಆಯ್ಕೆದಾರರ ಗಮನ ಸೆಳೆದಿದ್ದ ಸುದರ್ಶನ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಉತ್ತಮವಾಗಿ ಆರಂಭಿಸುವಲ್ಲಿ ವಿಫಲರಾದರು.
ಹೆಡಿಂಗ್ಲಿಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 91 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ರಾಹುಲ್ ಔಟಾದ ನಂತರ ಕ್ರೀಸ್‌ಗೆ ಬಂದ ಸುದರ್ಶನ್ ಅವರ ಇನ್ನಿಂಗ್ಸ್ ಕೇವಲ ನಾಲ್ಕು ಎಸೆತಗಳಿಗೆ ಸೀಮಿತವಾಯಿತು. ಬೆನ್ ಸ್ಟೋಕ್ಸ್ ಎಸೆದ ಚೆಂಡು ಸುದರ್ಶನ್ ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್ ಕೀಪರ್ ಜೇಮೀ ಸ್ಮಿತ್ ಅವರ ಕೈ ಸೇರಿತು.
IND vs ENG: 1 ರನ್ಗೆ 2 ವಿಕೆಟ್; ಪಾದಾರ್ಪಣೆ ಪಂದ್ಯದಲ್ಲಿ ಸೊನ್ನೆ ಸುತ್ತಿದ ಸುದರ್ಶನ್
5ನೇ ಭಾರತೀಯ ಬ್ಯಾಟ್ಸ್‌ಮನ್
ಇಂಗ್ಲೆಂಡ್ ವಿರುದ್ಧ ಸೊನ್ನೆ ಸುತ್ತಿದ ಸುದರ್ಶನ್ ಚೊಚ್ಚಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆಯೇ ಔಟಾದ 5 ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು ಗುಂಡಪ್ಪ ವಿಶ್ವನಾಥ್, ಕೃಷ್ಣಮಾಚಾರಿ ಶ್ರೀಕಾಂತ್, ದೇವಾಂಗ್ ಗಾಂಧಿ ಮತ್ತು ವಿಜಯ್ ಭಾರದ್ವಾಜ್ ಈ ಅನಗತ್ಯ ದಾಖಲೆ ಬರೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
