
T20 World Cup 2026: ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಸೋಲಿನ ಸಂಖ್ಯೆಯನ್ನು ಪಾಕಿಸ್ತಾನ್ ತಂಡ ಎಂಟಕ್ಕೇರಿಸಿದೆ. ಈ ಹಿಂದೆ ಏಳು ಬಾರಿ ಸೋತಿದ್ದ ಪಾಕ್ ಪಡೆ ಇದೀಗ ಕೊಲಂಬೊದಲ್ಲೂ ಮುಗ್ಗರಿಸಿದೆ. ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಹಿಂದೆ ಮುಂದೆ ನೋಡದೇ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ದಾಂಡಿಗರ ಆರ್ಭಟದ ಮುಂದೆ ಪಾಕ್ ತಂಡ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 18 ಓವರ್ಗಳಲ್ಲಿ 114 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ 61 ರನ್ಗಳ ಸೋಲನುಭವಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಈ ಪಂದ್ಯದಲ್ಲಿ ನಮ್ಮ ಸ್ಪಿನ್ನರ್ಗಳ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದೆವು. ಆದರೆ ಅವರ ಪಾಲಿಗೆ ಇಂದು ಅತ್ಯಂತ ಕೆಟ್ಟ ದಿನವಾಗಿತ್ತು. ಅಲ್ಲದೆ ಪಂದ್ಯದ ನಡುವೆ ನಮ್ಮ ಯೋಜನೆಗಳೇ ಕಾಣೆಯಾಗಿತ್ತು.
ಕಳೆದ ಆರು ತಿಂಗಳಲ್ಲಿ ನಮ್ಮ ಸ್ಪಿನ್ನರ್ಗಳು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ನಾವು ಯಾವಾಗಲೂ ನಮ್ಮ ಸ್ಪಿನ್ನರ್‌ಗಳನ್ನು ನಂಬುತ್ತೇವೆ. ಅದರಂತೆ ಈ ಪಂದ್ಯದಲ್ಲೂ ನಂಬಿಕೆಯಿಟ್ಟಿದ್ದೆ. ಆದರೆ ಎಲ್ಲರೂ ಆಫ್ ಡೇನಲ್ಲಿದ್ದರು.
ಇದಾಗ್ಯೂ ನಾವು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು ಎಂಬುದು ನನ್ನ ಭಾವನೆ. ಟಿ20 ಪಂದ್ಯಗಳಲ್ಲಿ ನಾವು ಪವರ್‌ಪ್ಲೇನಲ್ಲಿ 3 ಅಥವಾ 4 ವಿಕೆಟ್‌ಗಳನ್ನು ಕಳೆದುಕೊಂಡರೆ, ಚೇಸಿಂಗ್ ಮಾಡುವುದು ಕಷ್ಟ. ಇವೆಲ್ಲವೂ ನಮ್ಮ ಸೋಲಿಗೆ ಕಾರಣ ಎನ್ನಬಹುದು ಎಂದು ಪಾಕ್ ನಾಯಕ ಹೇಳಿದ್ದಾರೆ.
ಇನ್ನು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ ಸಲ್ಮಾನ್ ಅಲಿ ಅಘಾ. ಮೊದಲ ಇನ್ನಿಂಗ್ಸ್ ವೇಳೆ ಪಿಚ್ ಸ್ವಲ್ಪ ಜಿಗುಟಾಗಿತ್ತು ಎಂದು ನಾನು ಭಾವಿಸುತ್ತೇನೆ. ಚೆಂಡು ಕೂಡ ಹಿಡಿತದಲ್ಲಿತ್ತು. ಇದಾಗ್ಯೂ ನಮ್ಮ ಬೌಲರ್ಗಳಲ್ಲಿ ಯಾವುದೇ ಯೋಜನೆ ಕಾಣಿಸಿರಲಿಲ್ಲ.
ನಮ್ಮ ಬೌಲರ್‌ಗಳು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡಲಿಲ್ಲ. ಇದರಿಂದ ಎದುರಾಳಿ ತಂಡ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಈ ಸೋಲಿನ ಹೊರತಾಗಿಯೂ ನಾವು ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳಬೇಕಿದೆ. ಎರಡು ದಿನಗಳಲ್ಲೇ ನಮಗೆ ಮತ್ತೊಂದು ಮ್ಯಾಚ್ ಇದೆ. ಈ ಪಂದ್ಯವನ್ನು ಗೆದ್ದು ಸೂಪರ್ 8ಗೆ ಅರ್ಹತೆ ಪಡೆಯಬೇಕು ಎಂಬುದೇ ನಮ್ಮ ಸದ್ಯದ ಗುರಿ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.