ಭಾರತೀಯ ಆಟಗಾರರು ನಿಜವಾಗಿಯೂ ದೇಶಭಕ್ತರಾಗಿದ್ದರೆ, ಹೀಗೆ ಮಾಡಿ: ಪಾಕ್ ಕ್ರಿಕೆಟಿಗನ ಸವಾಲು
India vs Pakistan: ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 4ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ಮುಖಾಮುಖಿಯಾಗಬೇಕಿತ್ತು. ಆದರೆ ಪಾಕ್ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಪಾಕ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದರು.

ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ಧ ಆಡದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಿಂದ ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ಹಿಂದೆ ಸರಿದಿದ್ದರು. ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಯಿತು. ಹೀಗೆ ಪಂದ್ಯವನ್ನು ರದ್ದುಗೊಳಿಸಲು ಮುಖ್ಯ ಕಾರಣ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿರುವುದು. ಪಾಕಿಸ್ತಾನ್ ಬೆಂಬಲಿತ ಭಯೋತ್ಪಾದಕರು ಭಾರತದ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಇಂಡಿಯಾ ಚಾಂಪಿಯನ್ಸ್ ತಂಡದ ಕೆಲ ಆಟಗಾರರು ಪಾಕ್ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದ್ದರು. ಹೀಗಾಗಿ ಮ್ಯಾಚ್ ಅನ್ನು ಕ್ಯಾನ್ಸಲ್ ಮಾಡಲಾಯಿತು. ಇದೀಗ ಇಂಡಿಯಾ ಚಾಂಪಿಯನ್ಸ್ ಆಟಗಾರರ ನಡೆಯನ್ನು ಪಾಕ್ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್ ಟೀಕಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಲ್ಮಾನ್ ಬಟ್, ಭಾರತೀಯ ಕ್ರಿಕೆಟಿಗರು ನಿಜವಾಗಿಯೂ ದೇಶಭಕ್ತರಾಗಿದ್ದರೆ ಯಾವುದೇ ಮಟ್ಟದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದಿಲ್ಲ. ಕ್ರಿಕೆಟ್ ಮಾತ್ರವಲ್ಲ.. ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ರೀಡೆಯಲ್ಲಿ ಪಾಕಿಸ್ತಾನದೊಂದಿಗೆ ಸ್ಪರ್ಧಿಸುವುದಿಲ್ಲ ಎಂದು ಶಪಥ ಮಾಡಿ. ಅದು ಒಲಿಂಪಿಕ್ಸ್‌ನಲ್ಲಿಯೂ ಸಹ. ನೀವು ಹಾಗೆ ಮಾಡಲು ತಯಾರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಭಾರತ ತಂಡವು ಇನ್ಮುಂದೆ ಪಾಕಿಸ್ತಾನ್ ವಿರುದ್ಧ ವಿಶ್ವಕಪ್ನಲ್ಲಿ ಆಡುವುದಿಲ್ಲ. ಒಲಿಂಪಿಕ್ಸ್ನಲ್ಲೂ ಮುಖಾಮುಖಿಯಾಗಲ್ಲ ಎಂದು ಭರವಸೆ ನೀಡಿ. ಇದರ ಹೊರತಾಗಿ ಪ್ರತಿ ಬಾರಿ ಕ್ರಿಕೆಟ್ ಮ್ಯಾಚ್ ಬಂದಾಗ ಮಾತ್ರ ಈ ವಿಷಯ ಚರ್ಚೆಯಾಗುವುದಲ್ಲ. ಇತರ ಕ್ರೀಡೆಗಳಲ್ಲಿ ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ. ಯಾವಾಗಲೂ ಕ್ರಿಕೆಟ್ ಮ್ಯಾಚ್ ಬಂದಾಗ ಮಾತ್ರ ಆಡಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ನೀವು ಪಾಕಿಸ್ತಾನ್ ವಿರುದ್ಧ ಯಾವುದೇ ಕ್ರೀಡೆಯಲ್ಲೂ ಸ್ಪರ್ಧಿಸಲ್ಲ ಎಂಬುದನ್ನು ಖಚಿತಪಡಿಸಿ ಎಂದು ಸಲ್ಮಾನ್ ಬಟ್ ಆಗ್ರಹಿಸಿದ್ದಾರೆ.
ಇಡೀ ಜಗತ್ತು ಭಾರತ ತಂಡದ ನಡೆಯ ಬಗ್ಗೆ ಮಾತನಾಡುತ್ತಿದೆ. ಅವರು ಒಟ್ಟಾರೆಯಾಗಿ ಕ್ರಿಕೆಟ್‌ಗೆ ಮತ್ತು ಅಭಿಮಾನಿಗಳಿಗೆ ಏನು ಸಂದೇಶವನ್ನು ಕಳುಹಿಸಿದ್ದಾರೆ? ನೀವು ಏನು ತೋರಿಸಲು ಪ್ರಯತ್ನಿಸುತ್ತಿದ್ದೀರಿ? ನೀವು ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೀರಿ?. ಇಲ್ಲಿಗೆ ಒಂದು ತೀರ್ಮಾನವಾಗಲಿ ಬಿಡಿ. ನೀವು ಇನ್ಯಾವತ್ತೂ ಐಸಿಸಿ ಟೂರ್ನಮೆಂಟ್‌ನಲ್ಲಿ ನಮ್ಮ ವಿರುದ್ಧ ಆಡಬೇಡಿ. ಈ ಒಂದು ಭರವಸೆಯನ್ನು ಮುಂದಿಡಿ. ನಿಮ್ಮಿಂದ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯನಾ? ಆ ಬಳಿಕ ನಿಮ್ಮ ದೇಶಭಕ್ತಿ ಹೇಗಿದೆ ಎಂದು ನೋಡುತ್ತೇನೆ ಎಂದು ಸಲ್ಮಾನ್ ಬಟ್ ಸವಾಲು ಹಾಕಿದ್ದಾರೆ.
ಪರಿಸ್ಥಿತಿ ಇಲ್ಲೀತನಕ ತಲುಪಿರುವ ಕಾರಣ, ಇನ್ಮುಂದೆ ಯಾವುದೇ ಮಟ್ಟದಲ್ಲಿ ಅಥವಾ ಪಂದ್ಯಾವಳಿಯಲ್ಲಿ ನಮ್ಮ ವಿರುದ್ಧ ಆಡಬೇಡಿ. ಒಲಿಂಪಿಕ್ಸ್‌ನಲ್ಲಿಯೂ ಮುಖಾಮುಖಿಯಾಗುವುದು ಬೇಡ. ದಯವಿಟ್ಟು ಅದನ್ನು ಮಾಡಿ. ಭಾರತದಿಂದ ಅಂತಹದೊಂದು ನಡೆಯನ್ನು ನಾನು ಎದುರು ನೋಡುತ್ತೇನೆ. ಈ ಮೂಲಕ ಭಾರತೀಯ ಕ್ರಿಕೆಟಿಗರು ತಮ್ಮ ದೇಶ ಭಕ್ತಿಯನ್ನು ಪ್ರದರ್ಶಿಸಲಿ ಎಂದು ಸಲ್ಮಾನ್ ಬಟ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 34,504 ಎಸೆತಗಳು… ಗೆರೆ ದಾಟದೇ ವಿಶ್ವ ದಾಖಲೆ ನಿರ್ಮಿಸಿದ ನಾಥನ್ ಲಿಯಾನ್
ಒಟ್ಟಿನಲ್ಲಿ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಇಂಡಿಯಾ-ಪಾಕಿಸ್ತಾನ್ ನಡುವಣ ಪಂದ್ಯ ರದ್ದತಿಯು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಈ ಚರ್ಚೆಯು ಮುಂದಿನ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ವೇಳೆಯೂ ಪ್ರತಿಧ್ವನಿಸುವುದು ಖಚಿತ. ಅದರಲ್ಲೂ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬುದೇ ಸದ್ಯದ ಪ್ರಶ್ನೆ.
