ಸ್ಯಾಂಡ್‌ಪೇಪರ್ ಗೇಟ್ ವಿವಾದ: ಖ್ವಾಜಾ ಆರೋಪಕ್ಕೆ ಲೆಹ್ಮನ್ ತಿರುಗೇಟು!

2018ರ ಕೇಪ್ ಟೌನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರು ಸೌತ್ ಆಫ್ರಿಕಾ ವಿರುದ್ಧ ಸ್ಯಾಂಡ್‌ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಈ ಕೃತ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದು ದೊಡ್ಡ ವಿವಾದವಾಗಿತ್ತು. ಇದೀಗ "ತಂಡದಲ್ಲಿದ್ದ ಎಲ್ಲರಿಗೂ ಈ ಸಂಚು ಗೊತ್ತಿತ್ತು" ಎಂಬ ಉಸ್ಮಾನ್ ಖ್ವಾಜಾ ಆರೋಪಕ್ಕೆ ಅಂದಿನ ಕೋಚ್ ಲೆಹ್ಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಯಾಂಡ್‌ಪೇಪರ್ ಗೇಟ್ ವಿವಾದ: ಖ್ವಾಜಾ ಆರೋಪಕ್ಕೆ ಲೆಹ್ಮನ್ ತಿರುಗೇಟು!
Usman - Lehmann
Image Credit source: GettyImages

Updated on: Nov 08, 2026 | 11:19 AM

ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ್ದ 2018ರ ಕೇಪ್ ಟೌನ್ ‘ಸ್ಯಾಂಡ್‌ಪೇಪರ್ ಗೇಟ್’ ಚೆಂಡು ವಿರೂಪಗೊಳಿಸಿದ ವಿವಾದವು ಈಗ ಮತ್ತೆ ಮುಂಚೂಣಿಗೆ ಬಂದಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ತಮ್ಮ ಮುಂಬರುವ ಆತ್ಮಕಥೆ ‘ಸಬ್ರ್’ ನಲ್ಲಿ ಮಾಡಿರುವ ಸ್ಫೋಟಕ ಆರೋಪಗಳಿಗೆ ಆಸ್ಟ್ರೇಲಿಯಾ ತಂಡದ ಅಂದಿನ ಮುಖ್ಯ ಕೋಚ್ ಆಗಿದ್ದ ಡ್ಯಾರೆನ್ ಲೆಹ್ಮನ್ ತಿರುಗೇಟು ನೀಡಿದ್ದಾರೆ.

ಲೆಹ್ಮನ್ ತಿರುಗೇಟು:

“ಘಟನೆ ನಡೆದು ಎಂಟು ವರ್ಷಗಳಾಗಿವೆ. ಈಗ ಕೇವಲ ಒಂದು ಪುಸ್ತಕವನ್ನು ಮಾರಾಟ ಮಾಡಲು ಇಂತಹ ಹಳೆಯ ಮತ್ತು ಕಹಿ ಘಟನೆಯನ್ನು ಮತ್ತೆ ಮುನ್ನೆಲೆಗೆ ತರುತ್ತಿರುವುದು ಸರಿಯಲ್ಲ” ಎಂದು ಲೆಹ್ಮನ್ ನೇರವಾಗಿ ಖ್ವಾಜಾ ಅವರ ಉದ್ದೇಶವನ್ನು ಪ್ರಶ್ನಿಸಿದ್ದಾರೆ.

Loading...

“ಕ್ರಿಕೆಟ್ ಆಟದ ಮತ್ತು ಅದರಲ್ಲಿ ಭಾಗಿಯಾಗಿರುವ ಜನರ ಒಳಿತಿಗಾಗಿ ಕೆಲವು ವಿಷಯಗಳನ್ನು ಹಾಗೆಯೇ ಬಿಟ್ಟುಬಿಡುವುದು ಸೂಕ್ತ  ಎಂದು ಹೇಳುವ ಮೂಲಕ ಖ್ವಾಜಾ ಅವರ ಬಹಿರಂಗಪಡಿಸುವಿಕೆಯ ಸಮಯ ಮತ್ತು ಅಗತ್ಯವನ್ನು ಲೆಹ್ಮನ್ ಟೀಕಿಸಿದ್ದಾರೆ.

ಈ ವಿವಾದವನ್ನು ಮತ್ತೆ ಕೆದಕುವುದರಿಂದ ಅಂದು ಶಿಕ್ಷೆಗೆ ಒಳಗಾದ ಆಟಗಾರರು ಮತ್ತು ಅವರ ಕುಟುಂಬಗಳು ಮತ್ತೆ ಮಾನಸಿಕವಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಲಾಗುತ್ತಿದೆ ಎಂದು ಲೆಹ್ಮನ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಡೀ ತಂಡಕ್ಕೆ ಇದರ ಅರಿವಿತ್ತು ಎಂಬ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿರುವ ಅವರು, “ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಸ್ಯಾಂಡ್‌ಪೇಪರ್ ಬಳಸುವ ನಿರ್ದಿಷ್ಟ ಯೋಜನೆ ಗೊತ್ತಿರಲು ಸಾಧ್ಯವೇ ಇಲ್ಲ, ಇದೆಲ್ಲವೂ ಪುಸ್ತಕ ಮಾರಾಟ ಮಾಡಲು ಮುನ್ನಲೆಗೆ ತರುತ್ತಿರುವ ವಿಷಯ ಅಷ್ಟೇ” ಎಂದು ಆಸ್ಟ್ರೇಲಿಯಾ ತಂಡದ ಅಂದಿನ ಮುಖ್ಯ ಕೋಚ್ ಡ್ಯಾರೆನ್ ಲೆಹ್ಮನ್ ತಿರುಗೇಟು ನೀಡಿದ್ದಾರೆ.

ಡ್ಯಾರೆನ್ ಲೆಹ್ಮನ್ ನೀಡಿದ ಸ್ಪಷ್ಟನೆಗಳು:

ಎಬಿಸಿ ಸ್ಪೋರ್ಟ್ಸ್‌ನ ಗ್ರಾಂಡ್‌ಸ್ಟ್ಯಾಂಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಲೆಹ್ಮನ್, “ತಂಡದಲ್ಲಿದ್ದ ಪ್ರತಿಯೊಬ್ಬರಿಗೂ ಈ ಬಗ್ಗೆ ತಿಳಿದಿತ್ತು ಎಂದು ನಾನು ನಂಬುವುದಿಲ್ಲ” ಎಂದಿದ್ದಾರೆ. ಪ್ರಮುಖ ಬೌಲರ್‌ಗಳು ಸೇರಿದಂತೆ ಇಡೀ ತಂಡಕ್ಕೆ ಇದರ ಸಂಪೂರ್ಣ ಮಾಹಿತಿ ಇರಲಿಲ್ಲ ಎಂದು ಅವರು ವಾದಿಸಿದ್ದಾರೆ.

ಕಳೆದ 150 ವರ್ಷಗಳಿಂದ ಕ್ರಿಕೆಟ್‌ನಲ್ಲಿ ಚೆಂಡಿನ ಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದಕ್ಕಾಗಿ ಸ್ಯಾಂಡ್‌ಪೇಪರ್ ಬಳಸುವ ನಿರ್ದಿಷ್ಟ ಸಂಚು ಎಲ್ಲರಿಗೂ ತಿಳಿದಿರಲಿಲ್ಲ.  ಇದಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ದೊಡ್ಡ ಬೆಲೆ ತೆತ್ತಿದೆ ಎಂದು ಡ್ಯಾರೆನ್ ಲೆಹ್ಮನ್ ಒಪ್ಪಿಕೊಂಡಿದ್ದಾರೆ.

ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಸ್ಯಾಂಡ್‌ಪೇಪರ್ ಬಳಸುವ ಬಗ್ಗೆ ಮುಕ್ತ ಚರ್ಚೆಗಳು ಆರಂಭವಾಗಿದ್ದವು ಎಂದು ಖ್ವಾಜಾ ಬರೆದುಕೊಂಡಿದ್ದಾರೆ. ಆದರೆ, ಇಂತಹ ಯಾವುದೇ ಚರ್ಚೆಗಳು ತನ್ನ ಗಮನಕ್ಕೆ ಬಂದಿಲ್ಲ ಮತ್ತು ಈ ಬಗ್ಗೆ ತನಗೆ ನೆನಪಿಲ್ಲ ಎಂದು ಅಂದಿನ ಆಸ್ಟ್ರೇಲಿಯಾ ತಂಡ ಕೋಚ್ ಲೆಹ್ಮನ್ ಹೇಳಿದ್ದಾರೆ.

ತನಿಖೆಯಲ್ಲಿ ಕ್ಲೀನ್ ಚಿಟ್:

2018 ರಲ್ಲಿ ನಡೆದ ಕ್ರಿಕೆಟ್ ಆಸ್ಟ್ರೇಲಿಯಾದ ಆಂತರಿಕ ತನಿಖೆಯಲ್ಲಿ ಡ್ಯಾರೆನ್ ಲೆಹ್ಮನ್ ಅವರಿಗೆ ಯಾವುದೇ ಮುಂಚಿನ ಮಾಹಿತಿ ಇರಲಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿತ್ತು. ಆದಾಗ್ಯೂ, ಘಟನೆಯ ನೈತಿಕ ಜವಾಬ್ದಾರಿ ಹೊತ್ತು ಅವರು ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಉಸ್ಮಾನ್ ಖ್ವಾಜಾ ಅವರ ಪುಸ್ತಕ ಬಿಡುಗಡೆಗೂ ಮುನ್ನವೇ ಈ ಹಳೆಯ ವಿವಾದದ ಪುಟಗಳು ಮತ್ತೆ ತೆರೆದುಕೊಂಡಿರುವುದು ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ತಲ್ಲಣ ಮೂಡಿಸಿದೆ. ಹಳೆಯ ಕಹಿ ನೆನಪುಗಳು ಮತ್ತೆ ಮರುಕಳಿಸುತ್ತಿರುವುದಕ್ಕೆ ಲೆಹ್ಮನ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ಯಾಟ್ ಎಸೆದ ಫ್ಯಾನ್: ಗುರಾಯಿಸಿ ಎಚ್ಚರಿಕೆ ನೀಡಿದ ವಿರಾಟ್ ಕೊಹ್ಲಿ!

ಒಟ್ಟಾರೆಯಾಗಿ ಹೇಳುವುದಾದರೆ, ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ಕಪ್ಪು ಚುಕ್ಕೆ ಎನಿಸಿಕೊಂಡಿರುವ ‘ಸ್ಯಾಂಡ್‌ಪೇಪರ್ ಗೇಟ್’ ವಿವಾದವು ಉಸ್ಮಾನ್ ಖ್ವಾಜಾ ಅವರ ಪುಸ್ತಕದ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಅಂದಿನ ಕೋಚ್ ಡ್ಯಾರೆನ್ ಲೆಹ್ಮನ್ ಈ ಆರೋಪಗಳನ್ನು ತಳ್ಳಿಹಾಕಿದ್ದರೂ, ಈ ವಿವಾದದ ಸತ್ಯಾಸತ್ಯತೆಗಳ ಬಗ್ಗೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಸೇರಿದಂತೆ ಇತರ ಆಟಗಾರರು ಖ್ವಾಜಾ ಅವರ ಈ ಸ್ಫೋಟಕ ಹೇಳಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Published On - 11:19 am, Sun, 8 November 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us