20 ಸಿಕ್ಸ್, 21 ಫೋರ್: ದಾಖಲೆಯ ಮೊತ್ತ ಕಲೆಹಾಕಿದ ಸೌರಾಷ್ಟ್ರ

|

Updated on: Dec 02, 2024 | 8:33 AM

Syed Mushtaq Ali Trophy 2024: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟರ್​​​ಗಳು 20 ಸಿಕ್ಸ್ ಹಾಗೂ 21 ಫೋರ್​​ಗಳನ್ನು ಬಾರಿಸಿ ಬೃಹತ್ ಮೊತ್ತ ಕಲೆಹಾಕಿದ್ದಾರೆ. ಈ ಮೊತ್ತದೊಂದಿಗೆ ದೇಶೀಯ ಅಂಗಳದಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ತಂಡವೆಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

20 ಸಿಕ್ಸ್, 21 ಫೋರ್: ದಾಖಲೆಯ ಮೊತ್ತ ಕಲೆಹಾಕಿದ ಸೌರಾಷ್ಟ್ರ
Saurashtra
Follow us on

ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಬರೋಬ್ಬರಿ 266 ರನ್ ಬಾರಿಸಿ ಸೌರಾಷ್ಟ್ರ ತಂಡವು ಭರ್ಜರಿ ದಾಖಲೆ ನಿರ್ಮಿಸಿದೆ. ಅದು ಕೂಡ ಬಲಿಷ್ಠ ಬರೋಡಾ ತಂಡದ ವಿರುದ್ಧ ಎಂಬುದು ವಿಶೇಷ. ಇಂದೋರ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಸೌರಾಷ್ಟ್ರ ಮತ್ತು ಬರೋಡಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನಾದ್ಕಟ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸೌರಾಷ್ಟ್ರ ತಂಡದ ಆರಂಭಿಕ ದಾಂಡಿಗ ಹಾರ್ವಿಕ್ ದೇಸಾಯಿ ಕೇವಲ 39 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್​​​ಗಳೊಂದಿಗೆ 76 ರನ್ ಚಚ್ಚಿದರು.

ಮತ್ತೊಂದೆಡೆ ತಾರಂಗ್ ಗೋಯೆಲ್ 15 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್​​​ಗಳೊಂದಿಗೆ 40 ರನ್ ಸಿಡಿಸಿದರು. ಇನ್ನು ರುಚಿತ್ ಅತಿರ್ 30 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್​​​ಗಳೊಂದಿಗೆ 57 ರನ್ ಬಾರಿಸಿದರೆ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜಯ್ ಗೋಯಿಲ್ ಕೇವಲ 18 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್​​ಗಳೊಂದಿಗೆ 53 ರನ್​ ಚಚ್ಚಿದರು. ಈ ಮೂಲಕ ಸೌರಾಷ್ಟ್ರ ತಂಡವು 20 ಓವರ್​​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು.

267 ರನ್​​​ಗಳ ಕಠಿಣ ಗುರಿ:

ಸೌರಾಷ್ಟ್ರ ನೀಡಿದ ಕಠಿಣ ಗುರಿ ಬೆನ್ನತ್ತಿದ ಬರೋಡಾ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೇವಲ 29 ರನ್​​​ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಬರೋಡಾ ತಂಡಕ್ಕೆ ಶಶ್ವಂತ್ ರಾವತ್ (38) ಆಸರೆಯಾದರು. ಇದಾಗ್ಯೂ ಉಳಿದ ಬ್ಯಾಟರ್​​​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಇನ್ನು ಅಂತಿಮ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 25 ಎಸೆತಗಳಲ್ಲಿ 34 ರನ್ ಬಾರಿಸಿದರು. ಇದಾಗ್ಯೂ ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಬರೋಡಾ ತಂಡವು 20 ಓವರ್​​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 188 ರನ್​​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸೌರಾಷ್ಟ್ರ ತಂಡ 78 ರನ್​​ಗಳ ಭರ್ಜರಿ ಜಯ ಸಾಧಿಸಿದೆ.

ದಾಖಲೆಯ ಮೊತ್ತ:

ದೇಶೀಯ ಅಂಗಳದ ಟಿ20 ಟೂರ್ನಿಯಲ್ಲಿ ಇದು ಎರಡನೇ ಗರಿಷ್ಠ ಸ್ಕೋರ್. 2023 ರಲ್ಲಿ ಪಂಜಾಬ್ ತಂಡವು ಆಂಧ್ರಪ್ರದೇಶ ವಿರುದ್ಧ 20 ಓವರ್​​ಗಳಲ್ಲಿ 275/6 ರನ್ ಬಾರಿಸಿರುವುದು ದಾಖಲೆಯ ಮೊತ್ತವಾಗಿದೆ. ಇದೀಗ 266 ರನ್​​​ಗಳೊಂದಿಗೆ ಈ ಪಟ್ಟಿಯಲ್ಲಿ ಸೌರಾಷ್ಟ್ರ ತಂಡವು ದ್ವಿತೀಯ ಸ್ಥಾನ ಅಲಂಕರಿಸಿದೆ.

ಹಾಗೆಯೇ ಪಂಜಾಬ್ ಬಳಿಕ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 260+ ಸ್ಕೋರ್​ ಗಳಿಸಿದ 2ನೇ ತಂಡ ಎಂಬ ದಾಖಲೆಯನ್ನು ಸೌರಾಷ್ಟ್ರ ತನ್ನದಾಗಿಸಿಕೊಂಡಿದೆ.

ಬರೋಡಾ ಪ್ಲೇಯಿಂಗ್ 11: ಮಿತೇಶ್ ಪಟೇಲ್ , ನಿನಾದ್ ಅಶ್ವಿನ್‌ಕುಮಾರ್ ರಥ್ವಾ , ಶಿವಾಲಿಕ್ ಶರ್ಮಾ , ಕೃನಾಲ್ ಪಾಂಡ್ಯ (ನಾಯಕ) , ವಿಷ್ಣು ಸೋಲಂಕಿ (ವಿಕೆಟ್ ಕೀಪರ್) , ಭಾನು ಪಾನಿಯಾ , ಅತಿತ್ ಶೇಠ್ , ಅಭಿಮನ್ಯು ಸಿಂಗ್ ರಜಪೂತ್ , ಲುಕ್ಮಾನ್ ಮೇರಿವಾಲಾ , ಶಾಶ್ವತ್ ರಾವತ್ , ಆಕಾಶ್ ಮಹಾರಾಜ್ ಸಿಂಗ್.

ಇದನ್ನೂ ಓದಿ: 1642 ಎಸೆತಗಳಲ್ಲಿ ಭರ್ಜರಿ ದಾಖಲೆ ಬರೆದ ಹ್ಯಾರಿಸ್ ರೌಫ್

ಸೌರಾಷ್ಟ್ರ ಪ್ಲೇಯಿಂಗ್ 11: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ತರಂಗ್ ಗೊಯೆಲ್ , ಸಮ್ಮರ್ ಗಜ್ಜರ್ , ರುಚಿತ್ ಅಹಿರ್ , ಅಂಕುರ್ ಪನ್ವರ್ , ಚಿರಾಗ್ ಜಾನಿ , ಧರ್ಮೇಂದ್ರಸಿನ್ಹ್ ಜಡೇಜಾ , ಪ್ರೇರಕ್ ಮಂಕಡ್ , ಜಯದೇವ್ ಉನಾದ್ಕಟ್ (ನಾಯಕ) , ವಿಶ್ವರಾಜ್ ಜಡೇಜಾ , ಜಯ್ ಗೋಯಿಲ್ .