ಭಾರತ ಆಡಲ್ಲಾಂದ್ರೆ ಮೊದಲೇ ಹೇಳಬೇಕಿತ್ತು… ಶಾಹಿದ್ ಅಫ್ರಿದಿ ಆಕ್ರೋಶ
World Championship of Legends: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ಮಾಜಿ ಕ್ರಿಕೆಟಿಗರ ಟಿ20 ಟೂರ್ನಿ. ಈ ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ಸ್, ಪಾಕಿಸ್ತಾನ್ ಚಾಂಪಿಯನ್ಸ್, ಇಂಗ್ಲೆಂಡ್ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್, ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಹಾಗೂ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡಗಳು ಕಣಕ್ಕಿಳಿಯುತ್ತಿವೆ.

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ (World Championship of Legends) ಭಾನುವಾರ (ಜುಲೈ 20) ನಡೆಯಬೇಕಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಿಂದ ಭಾರತೀಯ ಆಟಗಾರರು ಹಿಂದೆ ಸರಿದ ಹಿನ್ನಲೆಯಲ್ಲಿ ಮ್ಯಾಚ್ ಕ್ಯಾನ್ಸಲ್ ಮಾಡಲಾಗಿದೆ. ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರಾದ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಪಾಕ್ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ ಬೆನ್ನಲ್ಲೇ, ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಹೀಗೆ ದಿಢೀರ್ ಮ್ಯಾಚ್ ಕ್ಯಾನ್ಸಲ್ ಮಾಡಿರುವುದಕ್ಕೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಶಾಹಿದ್ ಅಫ್ರಿದಿ, ನಾವು ಕ್ರಿಕೆಟ್ ಆಡಲು ಇಲ್ಲಿದ್ದೇವೆ. ಅಲ್ಲದೆ ನಾನು ಯಾವಾಗಲೂ ಕ್ರಿಕೆಟ್ ಅನ್ನು ರಾಜಕೀಯದಿಂದ ದೂರವಿಡಲು ಬಯಸುತ್ತೇನೆ. ಏಕೆಂದರೆ ಒಬ್ಬ ಆಟಗಾರನು ಉತ್ತಮ ರಾಯಭಾರಿಯಾಗಿರಬೇಕು. ಆದರೆ ಈಗ ಭಾರತೀಯ ಆಟಗಾರರು ಮಾಡಿದ್ದೇನು?
ಭಾರತೀಯ ಆಟಗಾರರು ಪಾಕಿಸ್ತಾನ್ ವಿರುದ್ಧ ಕ್ರಿಕೆಟ್ ಆಡಲು ಬಯಸದಿದ್ದರೆ, ತಂಡ ಬರುವ ಮೊದಲೇ ಅವರು ಅದನ್ನು ನಿರಾಕರಿಸಬೇಕಿತ್ತು. ಆದರೆ ನೀವು ಇಲ್ಲಿಗೆ ಬಂದಿದ್ದೀರಿ, ಅಭ್ಯಾಸಗಳನ್ನು ಸಹ ನಡೆಸಿದ್ದೀರಿ. ನಂತರ ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಎಲ್ಲವನ್ನೂ ಬದಲಾಯಿಸಿದ್ದೀರಿ. ನಿಮಗೆ ನಮ್ಮೊಂದಿಗೆ ಆಡಲು ಇಷ್ಟವಿಲ್ಲದಿದ್ದರೆ ಮೊದಲೇ ತಿಳಿಸಬಹುದಿತ್ತು. ಅದರ ಬದಲಾಗಿ ಅಭ್ಯಾಸಗಳನ್ನು ನಡೆಸಿ, ಎಲ್ಲಾ ತಯಾರಿಗಳನ್ನು ಮಾಡಿ ದಿಢೀರನೇ ಪಂದ್ಯದಿಂದ ಹಿಂದೆ ಸರಿದಿದ್ದೀರಿ. ಇದು ಸರಿಯಾದ ನಡೆಯಲ್ಲ ಎಂದು ಶಾಹಿದ್ ಅಫ್ರಿದಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ಮಾಲೀಕ ಕಾಮಿಲ್ ಖಾನ್, WCL ಪಂದ್ಯಗಳು ನಿಗದಿಯಂತೆ ಮುಂದುವರಿಯಲಿದೆ. ಮುಂದೆ ಯಾವುದೇ ಬದಲಾವಣೆಗಳಿಲ್ಲ. ಎರಡೂ ತಂಡಗಳು ನಾಕೌಟ್ ಸುತ್ತಿನಲ್ಲಿ ಮುಖಾಮುಖಿಯಾದರೆ, ಆಯೋಜಕರು ಹೊಸ ಯೋಜನೆ ರೂಪಿಸಲಿದ್ದಾರೆ ಎಂದರು.
ಅಲ್ಲದೆ ಉಳಿದ ಎಲ್ಲಾ ಪಂದ್ಯಗಳು ವೇಳಾಪಟ್ಟಿಯ ಪ್ರಕಾರ ನಡೆಯಲಿವೆ ಮತ್ತು ಯಾವುದೇ ಬದಲಾವಣೆಗಳಿಲ್ಲ. ಸೆಮಿಫೈನಲ್ ಮತ್ತು ಫೈನಲ್‌ಗೆ ಸಂಬಂಧಿಸಿದಂತೆ, ನಾವು ಸೆಮಿಫೈನಲ್‌ಗೆ ಹೋದರೆ, ನಾಲ್ಕು ತಂಡಗಳು ಇರುತ್ತವೆ. ಅಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಮುಖಾಮುಖಿಯನ್ನು ತಪ್ಪಿಸಬಹುದು. ಆದರೆ ಫೈನಲ್‌ಗೆ ಉಭಯ ತಂಡಗಳು ಬಂದರೆ ಮತ್ತೆ ಸಮಸ್ಯೆಗಳು ಎದುರಾಗುತ್ತವೆ ಎಂದು ಕಾಮಿಲ್ ಖಾನ್ ಹೇಳಿದ್ದಾರೆ.
ಕಾಮಿಲ್ ಖಾನ್ ಅವರ ಈ ಹೇಳಿಕೆಯ ಬೆನ್ನಲ್ಲೇ ಇದೀಗ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಆಯೋಜಕರಿಗೆ ಹೊಸ ಚಿಂತೆಯೊಂದು ಶುರುವಾಗಿದೆ. ಏಕೆಂದರೆ ಕಳೆದ ಸೀಸನ್ನ ಫೈನಲ್ನಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಬಾರಿ ಉಭಯ ತಂಡಗಳು ಫೈನಲ್‌ಗೆ ತಲುಪಿದರೆ ಮ್ಯಾಚ್ ಆಯೋಜಿಸುವುದು ಹೇಗೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಪಂದ್ಯ ರದ್ದುಪಡಿಸಿದ್ದೇಕೆ?
ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಅನೇಕರು ಪಾಕಿಸ್ತಾನ್ ವಿರುದ್ಧ ಭಾರತೀಯರು ಯಾವುದೇ ಪಂದ್ಯವಾಡಬಾರದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು. ಅದರಲ್ಲೂ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧ ಕಣಕ್ಕಿಳಿಯಲು ಮುಂದಾಗಿರುವ ಇಂಡಿಯಾ ಚಾಂಪಿಯನ್ಸ್ ಆಟಗಾರರ ದೇಶಪ್ರೇಮವನ್ನು ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: ಬರೋಬ್ಬರಿ 13 ಸಿಕ್ಸ್: ಟಿ10 ಪಂದ್ಯದಲ್ಲಿ ತೂಫಾನ್ ಸೆಂಚುರಿ ಸಿಡಿಸಿದ ಜೋಶ್
ಈ ಬಗ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುರೇಶ್ ರೈನಾ, ಶಿಖರ್ ಧವನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲು ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿರುವ ಆಟಗಾರರು ಕೂಡ ಪಾಕ್ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪಾಕಿಸ್ತಾನ್ ಚಾಂಪಿಯನ್ಸ್ ಹಾಗೂ ಇಂಡಿಯಾ ಚಾಂಪಿಯನ್ಸ್ ನಡುವಣ ಪಂದ್ಯವನ್ನು WCL ಆಯೋಜಕರು ರದ್ದುಗೊಳಿಸಿದರು.
