ಕಾಮ ಉದ್ದೀಪನ ಮದ್ದಿನ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ರಾ ಶೇನ್ ವಾರ್ನ್? ತನಿಖಾಧಿಕಾರಿಯ ಸ್ಫೋಟಕ ಹೇಳಿಕೆ
Shane Warne's Death Mystery: ಶೇನ್ ವಾರ್ನ್ ಅವರ 2022ರಲ್ಲಿ ಹಠಾತ್ ಸಾವಿಗೀಡಾಗಿದ್ದರು. ಆದರೀಗ ಅವರ ಸಾವಿನ ಬಗ್ಗೆ ಸ್ಫೋಟಕ ವರದಿ ಹೊರಬಿದ್ದಿದೆ. ಥೈಲ್ಯಾಂಡ್‌ನ ವಿಲ್ಲಾದಲ್ಲಿ "ಕಾಮಗ್ರ" ಎಂಬ ಲೈಂಗಿಕ ಔಷಧ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳಿಗೆ ತೆಗೆದುಹಾಕಲು ಆದೇಶಿಸಲಾಗಿತ್ತು ಎಂದು ವರದಿಯಾಗಿದೆ. ಈ ಔಷಧದ ಅತಿಯಾದ ಸೇವನೆಯಿಂದ ವಾರ್ನ್ ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್-ಸ್ಪಿನ್ನರ್ ಶೇನ್ ವಾರ್ನ್ (Shane Warne) ಮಾರ್ಚ್ 4, 2022 ರಂದು ಥೈಲ್ಯಾಂಡ್‌ನಲ್ಲಿ ಹಠಾತ್ ಸಾವಿಗೀಡಾಗಿದ್ದರು. ಮರಣೋತ್ತರ ಪರೀಕ್ಷೆಯ ನಂತರ, ವಾರ್ನ್ ಅವರ ಸಾವಿಗೆ ಹೃದಯಾಘಾತ (Heart Attack) ಕಾರಣ ಎಂದು ಹೇಳಲಾಗಿತ್ತು. ಆದರೀಗ, ವಾರ್ನ್ ಅವರ ಹಠಾತ್ ಮರಣದ ಮೂರು ವರ್ಷಗಳ ನಂತರ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವರದಿಯೊಂದು ಹೊರಬಿದ್ದಿದೆ. ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ವಾರ್ನ್ ಅವರ ಮೃತದೇಹ ಪತ್ತೆಯಾದ ಥೈಲ್ಯಾಂಡ್‌ನ ಅದೇ ಐಷಾರಾಮಿ ವಿಲ್ಲಾದಲ್ಲಿ ಲೈಂಗಿಕ ಮಾದಕವಸ್ತು ಕೂಡ ಪತ್ತೆಯಾಗಿತ್ತು. ಆದರೆ ಇದನ್ನು ಎಲ್ಲಿಯೂ ಬಹಿರಂಗಪಡಿಸದಂತೆ ತನಿಖೆ ಮಾಡುತ್ತಿದ್ದ ಅಧಿಕಾರಿಗಳಿಗೆ ಒತ್ತಡ ತಂದು ಆ ಮಾದಕ ವಸ್ತುವನ್ನು ಕೊಠಡಿಯಿಂದ ಹೊರಕ್ಕೆ ಎಸೆಯಲಾಯಿತು ಎಂದು ವರದಿಯಾಗಿದೆ.
ಹಾಗಾದರೆ ವಾರ್ನ್ ಸಾವಿಗೆ ಇದೇ ಕಾರಣವಾ?
ಡೈಲಿ ಮೇಲ್ ವರದಿಯ ಪ್ರಕಾರ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು, ‘ವಾರ್ನ್ ಅವರು ತಂಗಿದ್ದ ಕೊಠಡಿಯಲ್ಲಿ ‘ಕಾಮಗ್ರ’ ಎಂಬ ಅತ್ಯಂತ ಶಕ್ತಿಶಾಲಿ ಲೈಂಗಿಕ ಮಾದಕ ದ್ರವ್ಯ ಪತ್ತೆಯಾಗಿತ್ತು. ವರದಿಯ ಪ್ರಕಾರ, ‘ಕಾಮಗ್ರ’ ಭಾರತದಲ್ಲಿ ತಯಾರಾಗುವ ಲೈಂಗಿಕ ಔಷಧವಾಗಿದ್ದು, ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಥೈಲ್ಯಾಂಡ್‌ನಲ್ಲಿಯೂ ಇದನ್ನು ಮಾರಾಟ ಮಾಡಲಾಗುತ್ತದೆ. ಆ ಔಷಧಿಯ ಮಿತಿಮೀರಿದ ಸೇವನೆಯು ಶೇನ್ ವಾರ್ನ್ ಸಾವಿಗೆ ಕಾರಣವಾಗಬಹುದು. ವಾರ್ನ್ ಅವರು ಸಾವಿನಪ್ಪಿದ ಕೋಣೆಯಿಂದ ಔಷಧಿಯನ್ನು ತೆಗೆದುಹಾಕಲು ನನಗೆ ಆದೇಶಿಸಲಾಯಿತು.
‘ವಾರ್ನ್ ಸಾವನ್ನಪ್ಪಿದ ಕೋಣೆಯಿಂದ ಲೈಂಗಿಕ ಮಾದಕ ದ್ರವ್ಯಗಳನ್ನು ತೆಗೆದುಹಾಕುವ ಆದೇಶಗಳು ಮೇಲಿನಿಂದ ಬರುತ್ತಿದ್ದವು. ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿರುವಂತೆ ತೋರುತ್ತಿದೆ. ಅಧಿಕೃತವಾಗಿ ವಾರ್ನ್ ಸಾವಿಗೆ ಹೃದಯಾಘಾತ ಕಾರಣ ಎಂದು ವರದಿ ನೀಡಲಾಗಿದೆ. ಆದರೆ, ಕಾಮಗ್ರದ ಮಿತಿಮೀರಿದ ಸೇವನೆಯೂ ವಾರ್ನ್ ಸಾವಿನ ಹಿಂದಿನ ಕಾರಣವಾಗಿರಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದನ್ನು ಡೈಲಿ ಮೇಲ್ ಉಲ್ಲೇಖಿಸಿದೆ.
Shane Warne: ಅಗಲಿದ ಕ್ರಿಕೆಟ್ ‘ಲೆಜೆಂಡ್’ ಶೇನ್ ವಾರ್ನ್ಗೆ ಸ್ಪೋರ್ಟ್ ಆಸ್ಟ್ರೇಲಿಯಾದಿಂದ ವಿಶೇಷ ಗೌರವ..!
ವಾರ್ನ್ ಸಾವಿಗೆ ಭಾರತದ ಸಂಪರ್ಕ?
ಕಾಮಗ್ರ ಒಂದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಔಷಧವಾಗಿದೆ. ಭಾರತದಲ್ಲಿ ತಯಾರಾಗುವ ಈ ಲೈಂಗಿಕ ಔಷಧವನ್ನು ಬ್ರಿಟನ್‌ನಲ್ಲಿ ನಿಷೇಧಿಸಲಾಗಿದೆ. ಆದರೆ ಕಾನೂನುಬಾಹಿರವಾಗಿ, ರಾಷ್ಟ್ರೀಯ ಔಷಧ ಸಂಸ್ಥೆಯಿಂದ ಅನುಮೋದಿಸದಿದ್ದರೂ, ಈ ಔಷಧವು ಥೈಲ್ಯಾಂಡ್‌ನಲ್ಲಿ ಸಾಮಾನ್ಯವಾಗಿ ಖರೀದಿಗೆ ಸಿಗುತ್ತದೆ. ಆದಾಗ್ಯೂ, ವಾರ್ನ್ ಈ ಔಷಧಿಯ ಎಷ್ಟು ಪ್ರಮಾಣವನ್ನು ಸೇವಿಸಿದ್ದರು ಎಂಬುದು ತಿಳಿದಿಲ್ಲ. ಪೊಲೀಸ್ ಅಧಿಕಾರಿಯ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ವಾಂತಿ ಮತ್ತು ರಕ್ತದ ಕುರುಹುಗಳು ಸಹ ಇದ್ದವು ಎಂದು ಡೈಲಿ ಮೇಲ್ ವರದಿಯಲ್ಲಿ ಬರೆದಿದೆ. ಆದರೆ, ನಮಗೆ ಆಜ್ಞಾಪಿಸಿದ್ದನ್ನೇ ನಾವು ಮಾಡಿದೆವು. ನಾವು ಅಲ್ಲಿಂದ ಕಾಮಗ್ರಾದ ಎಲ್ಲಾ ಕುರುಹುಗಳನ್ನು ತೆಗೆದುಹಾಕಿದೆವು ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Tue, 1 April 25