ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬೌಲರ್ ಎಂಬ ಕೆಟ್ಟ ದಾಖಲೆಯೊಂದು ಶಾರ್ದೂಲ್ ಠಾಕೂರ್ ಪಾಲಾಗಿದೆ. ಅದು ಕೂಡ ಬರೋಬ್ಬರಿ 69 ರನ್ ನೀಡುವ ಮೂಲಕ ಶಾರ್ದೂಲ್ ಈ ಹೀನಾಯ ದಾಖಲೆಯನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೇರಳ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇರಳ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಇನಿಂಗ್ಸ್ ಶುರು ಮಾಡಿದ ಕೇರಳ ರೋಹನ್ ಕುನ್ನುಮ್ಮಲ್ (87) ಸ್ಪೋಟಕ ಆರಂಭ ಒದಗಿಸಿದ್ದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ನಿಝಾರ್ 49 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 99 ರನ್ ಚಚ್ಚಿದ್ದರು. ರೋಹನ್ ಹಾಗೂ ಸಲ್ಮಾನ್ರ ಸಿಡಿಲಬ್ಬರದಿಂದ ನಲುಗಿದ್ದು ಅನುಭವಿ ವೇಗಿ ಶಾರ್ದೂಲ್ ಠಾಕೂರ್.
ಏಕೆಂದರೆ ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಶಾರ್ದೂಲ್ ಠಾಕೂರ್ ಬರೋಬ್ಬರಿ 69 ರನ್ ನೀಡಿದರು. ಈ ಮೂಲಕ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತ್ಯಂತ ದುಬಾರಿ ಸ್ಪೆಲ್ ಎಸೆದ ಬೌಲರ್ ಎನಿಸಿಕೊಂಡರು. ಅಲ್ಲದೆ ರಮೇಶ್ ರಾಹುಲ್ ಹೆಸರಿನಲ್ಲಿದ್ದ ಕಳಪೆ ದಾಖಲೆಯನ್ನು ಸರಿಗಟ್ಟಿದರು.
ನವೆಂಬರ್ 25, 2024 ರಂದು ನಡೆದ ಹರ್ಯಾಣ ವಿರುದ್ದದ ಪಂದ್ಯದಲ್ಲಿ ರಮೇಶ್ ರಾಹುಲ್ 4 ಓವರ್ಗಳಲ್ಲಿ 69 ರನ್ ಬಿಟ್ಟುಕೊಟ್ಟಿದ್ದರು. ಇದೀಗ ಶಾರ್ದೂಲ್ ಠಾಕೂರ್ ಕೂಡ ಪ್ರತಿ ಓವರ್ಗೆ 17.20 ಸರಾಸರಿಯಲ್ಲಿ ರನ್ ನೀಡುವ ಮೂಲಕ ಈ ಕೆಟ್ಟ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೇರಳ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಪರ ಅಜಿಂಕ್ಯ ರಹಾನೆ 35 ಎಸೆತಗಳಲ್ಲಿ 68 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿ 43 ರನ್ಗಳಿಂದ ಸೋಲೊಪ್ಪಿಕೊಂಡಿತು.
ಕೇರಳ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ) , ರೋಹನ್ ಕುನ್ನುಮ್ಮಲ್ , ಮೊಹಮ್ಮದ್ ಅಝರುದ್ದೀನ್ , ಸಚಿನ್ ಬೇಬಿ , ವಿಷ್ಣು ವಿನೋದ್ , ಸಲ್ಮಾನ್ ನಿಝಾರ್ , ಅಬ್ದುಲ್ ಬಾಸಿತ್ , ಎಂಡಿ ನಿಧೀಶ್ , ವಿನೋದ್ ಕುಮಾರ್ , ಸುಧೇಶನ್ ಮಿಧುನ್ , ನೆಡುಮಂಕುಝಿ ಬಾಸಿಲ್.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ್ ಹೊರಬಿದ್ದರೆ, ಯಾವ ತಂಡಕ್ಕೆ ಚಾನ್ಸ್?
ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಆಂಗ್ಕ್ರಿಶ್ ರಘುವಂಶಿ , ಶ್ರೇಯಸ್ ಅಯ್ಯರ್ (ನಾಯಕ) , ಅಜಿಂಕ್ಯ ರಹಾನೆ , ಸೂರ್ಯಾಂಶ್ ಶೆಡ್ಗೆ , ಶಮ್ಸ್ ಮುಲಾನಿ , ಹಾರ್ದಿಕ್ ತಮೋರೆ ( ವಿಕೆಟ್ ಕೀಪರ್ ) , ತನುಷ್ ಕೋಟ್ಯಾನ್ , ಶಾರ್ದೂಲ್ ಠಾಕೂರ್ , ಮೋಹಿತ್ ಅವಸ್ತಿ , ರಾಯ್ಸ್ಟನ್ ಡಯಾಸ್.