Shikhar Dhawan: ತಂಡದ ಸೋಲಿಗೆ ಏನೂ ಕಾರಣ ನೀಡಿಲ್ಲ ಧವನ್: ಪಂದ್ಯದ ಬಳಿಕ ಏನಂದ್ರು ನೋಡಿ

India vs New Zealand 1st ODI: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ ವೇಳೆ ಮಾತನಾಡಿದ ಭಾರತ ತಂಡದ ನಾಯಕ ಶಿಖರ್ ಧವನ್, ತಂಡದ ಸೋಲಿಗೆ ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಿಲ್ಲ.

Shikhar Dhawan: ತಂಡದ ಸೋಲಿಗೆ ಏನೂ ಕಾರಣ ನೀಡಿಲ್ಲ ಧವನ್: ಪಂದ್ಯದ ಬಳಿಕ ಏನಂದ್ರು ನೋಡಿ
Shikhar Dhawan post-match IND vs NZ
TV9kannada Web Team

| Edited By: Vinay Bhat

Nov 25, 2022 | 4:28 PM

ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ಸರಣಿ ವಶಪಡಿಸಿಕೊಂಡಿದ್ದ ಭಾರತ (India vs New Zealand) ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶುಭ್​ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಸವಾಲಿನ ಮೊತ್ತ ಕಲೆಹಾಕಿತು. ಆದರೆ, ಬೌಲರ್​ಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಧವನ್ ಪಡೆಯ ಫೀಲ್ಡಿಂಗ್ ಕೂಡ ಹೇಳಿಕೊಳ್ಳವ ಮಟ್ಟಕ್ಕೆ ಕಠಿಣವಾಗಿ ಇರಲಿಲ್ಲ. ಟಾಮ್​ ಲಾಥಮ್ (Tom Latham) ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ದ್ವಿಶತಕದ ಅಮೋಘ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್​ಗಳ ಭರ್ಜರಿ ಜಯ ಕಂಡಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ಶಿಖರ್​ ಧವನ್ (Shikhar Dhawan) ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ ವೇಳೆ ಮಾತನಾಡಿದ ಧವನ್, ತಂಡದ ಸೋಲಿಗೆ ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಿಲ್ಲ. ”ನಾವು ಬ್ಯಾಟಿಂಗ್​ನಲ್ಲಿ ಅತ್ಯುತ್ತಮ ರನ್ ಕಲೆಹಾಕಿದ್ದೆವು. ಮೊದಲ 10-15 ಓವರ್​ಗಳಲ್ಲಿ ಚೆಂಡು ಉತ್ತಮವಾಗಿ ಬರುತ್ತಿದ್ದ ಕಾರಣ ಹೆಚ್ಚಿನ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಇತರೆ ಗ್ರೌಂಡ್​ಗಳಿಗೆ ಹೋಲಿಸಿದರೆ ಈ ಮೈದಾನದಲ್ಲಿ ಕೊಂಚ ಬದಲಾವಣೆ ಇತ್ತು. ನಾವು ಬೌಲಿಂಗ್​ನಲ್ಲಿ ಶಾರ್ಟ್ ಲೆಂತ್ ಹಾಕಲು ಪ್ರಯತ್ನಿಸಿದೆವು. ಆದರೆ, ಇದನ್ನು ಅರಿತ ಟಾಮ್ ಲಾಥಮ್ ಚೆನ್ನಾಗಿ ಆಡಿದ್ದಾರೆ. ಈ ಪಂದ್ಯವನ್ನು ನಮ್ಮ ಕೈಯಿಂದ ಕಸಿದುಕೊಂಡಿದ್ದೇ ಅವರು, ಮುಖ್ಯವಾಗಿ 40ನೇ ಓವರ್. ಅಲ್ಲಿ ಪಂದ್ಯದ ಗತಿಯೇ ಬದಲಾಯಿತು,” ಎಂದು ಧವನ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು, ”ನ್ಯೂಜಿಲೆಂಡ್​ನಲ್ಲಿ ಆಡಲು ತುಂಬಾ ಸಂತಸ ಆಗುತ್ತದೆ. ಈ ಪಂದ್ಯದಲ್ಲಿ ಗೆದ್ದರೆ ಖುಷಿ ಆಗುತ್ತಿತ್ತು. ಆದರೆ, ಇದು ಪಂದ್ಯದ ಒಂದು ಭಾಗ. ಸೋಲು-ಗೆಲುವು ಇದ್ದೇ ಇರುತ್ತದೆ. ಇವರೆಲ್ಲ ಯುವ ಆಟಗಾರರು, ಬೌಲಿಂಗ್ ವಿಭಾಗದಲ್ಲಿ ಮತ್ತು ಫೀಲ್ಡಿಂಗ್​ನಲ್ಲಿ ಇವರು ಸಾಕಷ್ಟು ವಿಚಾರಗಳನ್ನು ಕಲಿಯುತ್ತಿದ್ದಾರೆ. ನಾವು ನಮ್ಮ ಯೋಜನೆಗಳನ್ನು ಇನ್ನಷ್ಟು ಯೋಚಿಸಿ ಕಾರ್ಯರೂಪಕ್ಕೆ ತರಬೇಕಿದೆ. ಮುಂದಿನ ಪಂದ್ಯದಲ್ಲಿ ಇನ್ನಷ್ಟು ಶ್ರಮ ವಹಿಸಿ ಉತ್ತಮ ಆಟವಾಡುತ್ತೇವೆ,” ಎಂಬುದು ಧವನ್ ಮಾತು.

ಇನ್ನು ಗೆದ್ದ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, ”ಆರಂಭದಲ್ಲಿ ಚೆಂಡು ತಿರುಗುತ್ತಿತ್ತು. ಆದರೆ, ಈ ಮೈದಾನದಲ್ಲಿ ಜೊತೆಯಾಟದ ಮೂಲಕ ಇನ್ನಿಂಗ್ಸ್ ಕಟ್ಟಿದರೆ ಯಾವುದೇ ಮೊತ್ತವನ್ನು ಚೇಸ್ ಮಾಡಲಾಗುತ್ತದೆ ಎಂಬುದು ತಿಳಿದಿತ್ತು. ಟಾಮ್ ಲಾಥಮ್ ಅವರ ಶತಕ ಅದ್ಭುತವಾಗಿತ್ತು. ನಾವು ಯಾವ ಓವರ್ ಅನ್ನು ಟಾರ್ಗೆಟ್ ಮಾಡಬೇಕು ಎಂದು ಪಂದ್ಯದ ಮಧ್ಯೆ ಚರ್ಚೆ ನಡೆಸುತ್ತಿದ್ದೆವು.”

”ಲಾಥಮ್ ಹೊಡೆದ ಒಂದೊಂದು ಏಟು ಅತ್ಯುತ್ತಮವಾಗಿದೆ. ಈ ಪಿಚ್​ನಲ್ಲಿ ನೇರವಾಗಿ ಬೌಲಿಂಗ್ ಮಾಡಿದರೆ ಚೆಂಡು ನಯವಾಗಿ ಬರುತ್ತದೆ, ಆ ಚೆಂಡಿಗೆ ರನ್ ಕಲೆಹಾಕುವುದು ಕಷ್ಟ. ಆದರೆ, ಲಾಥಮ್ ಇದನ್ನು ಲೆಕ್ಕಿಸದೆ ರನ್ ಗಳಿಸುತ್ತಲೇ ಸಾಗಿದರು. ಇದು ನಾನು ನೋಡಿದ ಲಾಥಮ್ ಅವರ ವಿಶೇಷವಾದ ಏಕದಿನ ಶತಕ,” ಎಂದು ಸಹ ಆಟಗಾರನನ್ನು ಹಾಡಿಹೊಗಳಿದ್ದಾರೆ.

ಸದ್ಯ ಮೊದಲ ಏಕದಿನ ಪಂದ್ಯ ಸೋತಿರುವುದರಿಂದ ಭಾರತಕ್ಕೆ ಸರಣಿ ವಶಪಡಿಸಿಕೊಳ್ಳ ಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ದ್ವಿತೀಯ ಏಕದಿನ ನವೆಂಬರ್ 27 ರಂದು ಭಾನುವಾರ ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯಲಿದೆ. ಅಂತಿಮ ಮೂರನೇ ಏಕದಿನ ನವೆಂಬರ್ 30 ರಂದು ಕ್ರಿಸ್ಟ್​ಚರ್ಚ್​ನ ಹೇಗ್ಲೆ ಓವಲ್​ನಲ್ಲಿ ಆಯೋಜಿಸಲಾಗಿದೆ. ಈ ಎರಡೂ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ.

ಇದನ್ನೂ ಓದಿ

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada