ಪಾಂಡ್ಯ ಬ್ರದರ್ಸ್ ಗೋಲ್ಡನ್ ಡಕ್: ಕನ್ನಡಿಗನ ಹ್ಯಾಟ್ರಿಕ್ ವಿಕೆಟ್ ದಾಖಲೆ

Syed Mushtaq Ali Trophy 2024: ಬರೋಡಾ ವಿರುದ್ಧದ ಪಂದ್ಯದಲ್ಲಿ 4 ಓವರ್​​ಗಳನ್ನು ಎಸೆದ ಶ್ರೇಯಸ್ ಗೋಪಾಲ್ 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಈ ನಾಲ್ಕು ವಿಕೆಟ್​​ಗಳಲ್ಲಿ ಮೂರು ವಿಕೆಟ್​ಗಳು ಸತತವಾಗಿ ಸಿಕ್ಕಿದ್ದವು ಎಂಬುದು ವಿಶೇಷ. ಈ ಮೂಲಕ ಶ್ರೇಯಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

ಪಾಂಡ್ಯ ಬ್ರದರ್ಸ್ ಗೋಲ್ಡನ್ ಡಕ್: ಕನ್ನಡಿಗನ ಹ್ಯಾಟ್ರಿಕ್ ವಿಕೆಟ್ ದಾಖಲೆ
Shreyas Gopal
Follow us
ಝಾಹಿರ್ ಯೂಸುಫ್
|

Updated on: Dec 04, 2024 | 7:30 AM

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಮಧ್ಯಪ್ರದೇಶದ ಎಮ್ರಾಲ್ಡ್ ಸ್ಕೂಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ಮತ್ತು ಬರೋಡಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​​ನಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಸ್ಮರಣ್ 38 ರನ್ ಬಾರಿಸಿದರೆ, ಅಭಿನವ್ ಮನೋಹರ್ 34 ಎಸೆತಗಳಲ್ಲಿ 6 ಸಿಕ್ಸ್ ಗಳೊಂದಿಗೆ 56 ರನ್ ಚಚ್ಚಿದರು. ಈ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು.

170 ರನ್ ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬರೋಡಾ ತಂಡಕ್ಕೆ ಶಾಶ್ವತ್ ರಾವತ್ (63) ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಭಾನು ಪನಿಯಾ 42 ರನ್ ಗಳ ಕೊಡುಗೆ ನೀಡಿದರು.

ಈ ಹಂತದಲ್ಲಿ ದಾಳಿಗಿಳಿದ ಶ್ರೇಯಸ್ ಗೋಪಾಲ್ 11ನೇ ಓವರ್‌ನ 4ನೇ ಎಸೆತದಲ್ಲಿ ಭಾನು ಪನಿಯಾ ವಿಕೆಟ್ ಪಡೆದರು. ಮರು ಎಸೆತದಲ್ಲೇ ಹಾರ್ದಿಕ್ ಪಾಂಡ್ಯ (0) ವಿಕೆಟ್ ಕಬಳಿಸಿದರು‌. ಇನ್ನು ಕೊನೆಯ ಎಸೆತದಲ್ಲಿ ಕೃನಾಲ್ ಪಾಂಡ್ಯ (0) ರನ್ನು ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು.

  • ಈ ಹ್ಯಾಟ್ರಿಕ್ ವಿಕೆಟ್‌ಗಳೊಂದಿಗೆ ಶ್ರೇಯಸ್ ಗೋಪಾಲ್ ಟಿ20 ಕ್ರಿಕೆಟ್ ‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಟೀಮ್ ಇಂಡಿಯಾ ಆಟಗಾರ ಅಮಿತ್ ಮಿಶ್ರಾ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
  • ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆ ಅಮಿತ್ ಮಿಶ್ರಾ ಹೆಸರಿನಲ್ಲಿದೆ. ಐಪಿಎಲ್ ನಲ್ಲಿ ಮೂರು ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಅಮಿತ್ ಮಿಶ್ರಾ ಈ ದಾಖಲೆ ನಿರ್ಮಿಸಿದ್ದಾರೆ.
  • ಇದೀಗ ದೇಶೀಯ ಅಂಗಳದಲ್ಲಿ ಮೂರನೇ ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಶ್ರೇಯಸ್ ಗೋಪಾಲ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತೀಯ ಬೌಲರ್ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಇನ್ನು ಶ್ರೇಯಸ್ ಗೋಪಾಲ್ ಅವರ ಈ ಹ್ಯಾಟ್ರಿಕ್ ಸಾಧನೆಯ ಹೊರತಾಗಿಯೂ ಈ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲನುಭವಿಸಿದೆ. ಬರೋಡಾ ತಂಡವು 18.5 ಓವರ್‌ಗಳಲ್ಲಿ 172 ರನ್ ಬಾರಿಸಿ 4 ವಿಕೆಟ್ ಗಳ ಜಯ ಸಾಧಿಸಿದೆ.

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ಮನೀಶ್ ಪಾಂಡೆ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಸ್ಮರಣ್ ರವಿಚಂದ್ರನ್ , ಅಭಿನವ್ ಮನೋಹರ್ , ಶ್ರೇಯಸ್ ಗೋಪಾಲ್ , ಶುಭಾಂಗ್ ಹೆಗ್ಡೆ , ಮನೋಜ್ ಭಾಂಡಗೆ , ವಾಸುಕಿ ಕೌಶಿಕ್ , ವಿಜಯ್ ಕುಮಾರ್ ವೈಶಾಕ್ , ವಿದ್ಯಾಧರ್ ಪಾಟೀಲ್.

ಇದನ್ನೂ ಓದಿ: 15.5 ಓವರ್​​ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ

ಬರೋಡಾ ಪ್ಲೇಯಿಂಗ್ 11: ಮಹೇಶ್ ಪಿಥಿಯಾ , ಶಾಶ್ವತ್ ರಾವತ್ , ಅಭಿಮನ್ಯು ಸಿಂಗ್ ರಜಪೂತ್ , ಶಿವಾಲಿಕ್ ಶರ್ಮಾ , ಭಾನು ಪಾನಿಯಾ , ಕೃನಾಲ್ ಪಾಂಡ್ಯ (ನಾಯಕ) , ಹಾರ್ದಿಕ್ ಪಾಂಡ್ಯ , ವಿಷ್ಣು ಸೋಲಂಕಿ (ವಿಕೆಟ್ ಕೀಪರ್) , ಅತಿತ್ ಶೇಠ್ , ಆಕಾಶ್ ಮಹಾರಾಜ್ ಸಿಂಗ್ , ಲುಕ್ಮಾನ್ ಮೇರಿವಾಲಾ.

ಐಪಿಎಲ್​​ನಲ್ಲಿ ಯಾವ ತಂಡ?

ಮುಂಬರುವ ಐಪಿಎಲ್​​ನಲ್ಲಿ ಶ್ರೇಯಸ್ ಗೋಪಾಲ್ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಮೆಗಾ ಹರಾಜಿನ ಮೂಲಕ ಕನ್ನಡಿಗನನ್ನು ಸಿಎಸ್​ಕೆ ಫ್ರಾಂಚೈಸಿ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದೆ. ಇದೀಗ ಭರ್ಜರಿ ಪ್ರದರ್ಶನ ನೀಡುವ ಮೂಲಕ ಶ್ರೇಯಸ್ ಗೋಪಾಲ್ ಸಂಚಲನ ಸೃಷ್ಟಿಸುತ್ತಿದ್ದಾರೆ.