ಸದ್ಯಕ್ಕಂತು ಕಣಕ್ಕಿಳಿಯಲ್ಲ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್: ಟಿ20 ವಿಶ್ವಕಪ್ಗೂ ಡೌಟ್..!
Shreyas Iyer: ಇದಾಗ್ಯೂ ಯುಎಇನಲ್ಲಿ ನಡೆಯಲಿರುವ ಐಪಿಎಲ್ನ ಎರಡನೇ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವಿಶ್ವಾಸದಲ್ಲಿದ್ದಾರೆ ಶ್ರೇಯಸ್ ಅಯ್ಯರ್. ಐಪಿಎಲ್ 2ನೇ ಭಾಗವು ಸೆಪ್ಟೆಂಬರ್ 19 ರಿಂದ ಶುರುವಾಗಲಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ವೇಳೆಗೆ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಅಯ್ಯರ್ ತಿಳಿಸಿದ್ದಾರೆ. ಒಂದು ವೇಳೆ ಐಪಿಎಲ್ ವೇಳೆ ಕಣಕ್ಕಿಳಿಯದಿದ್ದರೆ ಟಿ20 ವಿಶ್ವಕಪ್ ತಂಡದಲ್ಲಿ ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಗೋದು ಬಹುತೇಕ ಅನುಮಾನ ಎನ್ನಬಹುದು.
ಒಂದೆಡೆ ಟೀಮ್ ಇಂಡಿಯಾ ಹಿರಿಯರ ತಂಡ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಟೀಮ್ ಇಂಡಿಯಾ ಯುವ ಪಡೆ ಶ್ರೀಲಂಕಾ ವಿರುದ್ದ ಗೆಲುವಿನೊಂದಿಗೆ ಏಕದಿನ ಸರಣಿ ಅಭಿಯಾನ ಆರಂಭಿಸಿದೆ. ಆದರೆ ಈ ಎರಡೂ ತಂಡಗಳಲ್ಲೂ ಭಾರತದ ಭವಿಷ್ಯದ ನಾಯಕ ಎಂದು ಬಿಂಬಿತವಾಗಿರುವ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಇಲ್ಲ ಎಂಬುದೇ ಸತ್ಯ.
ಹೌದು, 26 ವರ್ಷ ಅಯ್ಯರ್ ಕ್ರಿಕೆಟ್ ಅಂಗಳ ತೊರೆದು 4 ತಿಂಗಳುಗಳಾಗಿವೆ. ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯ ಮೊದಲ ಪಂದ್ಯದ ಫೀಲ್ಡಿಂಗ್ ವೇಳೆ ಬಿದ್ದು ಅಯ್ಯರ್ ಗಾಯಗೊಂಡಿದ್ದರು. ಚೆಂಡು ತಡೆಯುವ ಯತ್ನದಲ್ಲಿ ಡೈವ್ ಹೊಡೆದಿದ್ದ ಶ್ರೇಯಸ್ ಅವರ ಎಡಭುಜದ ಕೀಲು ತಪ್ಪಿತ್ತು. ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೆ ಐಪಿಎಲ್ನ ಮೊದಲಾರ್ಧದಲ್ಲೂ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ.
ಇದಾಗ್ಯೂ ಇತ್ತೀಚೆಗಷ್ಟೇ ಬಲಗೈ ದಾಂಡಿಗ, ಶೀಘ್ರದಲ್ಲೇ ಕಂಬ್ಯಾಕ್ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂಗ್ಲೆಂಡ್ನಲ್ಲಿ ನಡೆಯಲಿರುವ ಕೌಂಟಿ ಕ್ರಿಕೆಟ್ ಮೂಲಕ ಮತ್ತೆ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ ಎನ್ನಲಾಗಿತ್ತು. ಆದರೀಗ ಲಂಕಾಶೈರ್ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದ ಶ್ರೇಯಸ್ ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ.
ಲಂಡನ್ ಕಪ್ ಹೆಸರಿನಲ್ಲಿರುವ ನಡೆಯಲಿರುವ ಕೌಂಟಿ ಒನ್ಡೇ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಲಂಕಾಶೈರ್ ಪರ ಕಣಕ್ಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಲಂಕಾಶೈರ್ ತಂಡವು, ಲಂಡನ್ ಕಪ್ ಸರಣಿಗೆ ಭಾರತದ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಅಲಭ್ಯತೆಯನ್ನು ದೃಢಪಡಿಸಿದ್ದಾರೆ. ಇದರೊಂದಿಗೆ ಕೌಂಟಿ ಕ್ರಿಕೆಟ್ ಮೂಲಕ ಮತ್ತೆ ಮೈದಾನಕ್ಕಿಳಿಯುವ ಅಯ್ಯರ್ ಕನಸು ಭಗ್ನಗೊಂಡಿದೆ. ಭುಜದ ನೋವು ಸಂಪೂರ್ಣ ಗುಣವಾಗದ ಕಾರಣ ಕೌಂಟಿ ಟೂರ್ನಿಯಿಂದ ಶ್ರೇಯಸ್ ಅಯ್ಯರ್ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೇಯಸ್ ಅಯ್ಯರ್, ಈ ಬೇಸಿಗೆಯಲ್ಲಿ ಲಂಕಾಶೈರ್ ಪರ ಆಡಲು ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ. ಲಂಕಾಶೈರ್ ತನ್ನದೆಯಾದ ಇತಿಹಾಸ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕ್ರಿಕೆಟ್ ಕ್ಲಬ್. ಭವಿಷ್ಯದಲ್ಲಿ ಲಂಕಾಶೈರ್ ಪರ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಆಡುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ.
ಇದಾಗ್ಯೂ ಯುಎಇನಲ್ಲಿ ನಡೆಯಲಿರುವ ಐಪಿಎಲ್ನ ಎರಡನೇ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವಿಶ್ವಾಸದಲ್ಲಿದ್ದಾರೆ ಶ್ರೇಯಸ್ ಅಯ್ಯರ್. ಐಪಿಎಲ್ 2ನೇ ಭಾಗವು ಸೆಪ್ಟೆಂಬರ್ 19 ರಿಂದ ಶುರುವಾಗಲಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ವೇಳೆಗೆ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಅಯ್ಯರ್ ತಿಳಿಸಿದ್ದಾರೆ. ಒಂದು ವೇಳೆ ಐಪಿಎಲ್ ವೇಳೆ ಕಣಕ್ಕಿಳಿಯದಿದ್ದರೆ ಟಿ20 ವಿಶ್ವಕಪ್ ತಂಡದಲ್ಲಿ ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಗೋದು ಬಹುತೇಕ ಅನುಮಾನ ಎನ್ನಬಹುದು.
Published On - 6:56 pm, Mon, 19 July 21