
ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅದ್ಭುತ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಐಪಿಎಲ್ 2025 (IPL 2025) ರಲ್ಲಿ ಅವರ ಪ್ರದರ್ಶನ ಕೂಡ ಶ್ಲಾಘನೀಯ ಆದರೆ ಆರ್‌ಸಿಬಿ (RCB) ವಿರುದ್ಧ ಆಡುವುದೆಂದರೆ ಶ್ರೇಯಸ್ ಅಯ್ಯರ್‌ಗೆ ಏನೋ ಆದಂತೆ ಭಾಸವಾಗುತ್ತದೆ. ಏಕೆಂದರೆ ಇತರ ತಂಡಗಳ ವಿರುದ್ಧ ಅಬ್ಬರಿಸುವ ಅಯ್ಯರ್, ಆರ್‌ಸಿಬಿ ವಿರುದ್ಧ ಮಾತ್ರ ಬ್ಯಾಟಿಂಗ್ ಮರೆತವರಂತೆ ವರ್ತಿಸುತ್ತಾರೆ. ಐಪಿಎಲ್ 2025 ರ ಮೊದಲ ಕ್ವಾಲಿಫೈಯರ್‌ನಲ್ಲೂ ಇದೇ ರೀತಿ ಕಂಡುಬಂದಿತು. ಅಯ್ಯರ್ ಈ ಪಂದ್ಯದಲ್ಲಿ ಕೇವಲ 3 ಎಸೆತಗಳನ್ನು ಎದುರಿಸಿ ಜೋಶ್ ಹೇಜಲ್ವುಡ್ಗೆ ಬಲಿಯಾದರು. ಅಯ್ಯರ್ ಎಷ್ಟೇ ಉತ್ತಮ ಫಾರ್ಮ್‌ನಲ್ಲಿದ್ದರೂ, ಹೇಜಲ್‌ವುಡ್ ಎಂದರೆ ಅವರಿಗೆ ಒಂದು ರೀತಿಯ ಭಯ ಎಂಬುದು ಮತ್ತೊಮ್ಮೆ ಸಾಭೀತಾಯಿತು.
ಜೋಶ್ ಹೇಜಲ್‌ವುಡ್ ವಿರುದ್ಧ ಶ್ರೇಯಸ್ ಅಯ್ಯರ್ ಕಳಪೆ ದಾಖಲೆ ಹೊಂದಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಹ್ಯಾಝೆಲ್‌ವುಡ್ ವಿರುದ್ಧ 6 ಇನ್ನಿಂಗ್ಸ್‌ಗಳಲ್ಲಿ 22 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಮಾತ್ರ ಕಲೆಹಾಕಿದ್ದಾರೆ. ಇದಕ್ಕೆ ವಿರುದ್ಧವಾಗಿ ನಾಲ್ಕು ಬಾರಿ ಔಟಾಗಿದ್ದಾರೆ. ಹೇಜಲ್‌ವುಡ್ ಅವರ ಅದ್ಭುತ ಲೆಂತ್ ಎದುರು ಅಯ್ಯರ್ ರನ್ ಗಳಿಸಲು ಪರದಾಡುತ್ತಿದ್ದಾರೆ.
ಮುಲ್ಲನ್ಪುರದಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಇದು ಪಂಜಾಬ್ ಕಿಂಗ್ಸ್‌ನ ತವರು ಮೈದಾನವಾಗಿದ್ದರೂ, ಇಲ್ಲಿನ ಪಿಚ್‌ನಲ್ಲಿ ನಾಯಕ ಕಷ್ಟಪಡುತ್ತಿರುವುದನ್ನು ಕಾಣಬಹುದಾಗಿದೆ. ಅಯ್ಯರ್ ಇಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಬಾರಿ ಒಂದೇ ಅಂಕೆಯಲ್ಲಿ ಔಟಾಗಿದ್ದಾರೆ. ಮುಲ್ಲನ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ 10 ರನ್ ಗಳಿಸಿದ್ದ ಅಯ್ಯರ್, ಮುಂದಿನ ಪಂದ್ಯದಲ್ಲಿ 9 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಮೂರನೇ ಇನ್ನಿಂಗ್ಸ್‌ನಲ್ಲಿ ಅಯ್ಯರ್‌ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಕೇವಲ 6 ರನ್‌ಗಳಿಗೆ ಸುಸ್ತಾಗಿದ್ದ ಅಯ್ಯರ್, ಮುಂದಿನ ಪಂದ್ಯದಲ್ಲಿ ಕೇವಲ 2 ರನ್ಗಳಿಸಲಷ್ಟೇ ಶಕ್ತರಾದರು.
IPL 2025 Qualifier 1: ಆರ್‌ಸಿಬಿ ಬೌಲರ್ಗಳ ದಾಳಿಗೆ ಪತರುಗುಟ್ಟಿದ ಪಂಜಾಬ್; ವಿಡಿಯೋ ನೋಡಿ
ಪಂಜಾಬ್ ಕಿಂಗ್ಸ್ ತಂಡ ಆರ್‌ಸಿಬಿ ವಿರುದ್ಧ ಸಂಪೂರ್ಣವಾಗಿ ಶರಣಾಗಿದ್ದು, 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಗಿದೆ. ಈ ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಉಳಿದ 8 ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಮಾರ್ಕಸ್ ಸ್ಟೊಯಿನಿಸ್ 26 ರನ್ ಗಳಿಸಿ ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡರೆ, ಪ್ರಭ್ಸಿಮ್ರಾನ್ ಸಿಂಗ್ 18 ರನ್ ಮತ್ತು ಅಜ್ಮತುಲ್ಲಾ ಒಮರ್ಜೈ 18 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:51 pm, Thu, 29 May 25