ಕೆರಿಬಿಯನ್ನರ ನಾಡಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಮೂರರಲ್ಲೂ ಗೆದ್ದು ಬೀಗಿರುವ ಭಾರತ (India vs West Indies) ತಂಡ ವಿಶೇಷ ಸಾಧನೆ ಮಾಡಿ ಮೆರೆದಿದೆ. ಮೊದಲ ಪಂದ್ಯದಲ್ಲಿ 3 ರನ್ಗಳ ರೋಚಕ ಜಯ ಸಾಧಿಸಿದ್ದ ಟೀಮ್ ಇಂಡಿಯಾ (Team India) ದ್ವಿತೀಯ ಏಕದಿನದಲ್ಲಿ 2 ವಿಕೆಟ್ಗಳಿಂದ ಗೆಲುವು ಪಡೆದುಕೊಂಡಿತ್ತು. ಅಂತಿಮ ತೃತೀಯ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 119 ರನ್ಗಳಿಂದ ಗೆದ್ದು ಬೀಗಿದೆ. ಟೂರ್ನಿಯುದ್ದಕ್ಕೂ ಶುಭ್ಮನ್ ಗಿಲ್ (Shubhman Gill) ಅದ್ಭುತ ಪ್ರದರ್ಶನ ನೀಡಿದರು. ಸಿಕ್ಕ ಅವಕಾಶವನ್ನು ಎರಡೂ ಕೈಯಲ್ಲಿ ಬಾಜಿಕೊಂಡ ಇವರು ಮೊದಲ ಪಂದ್ಯದಲ್ಲಿ 64 ರನ್ ಬಾರಿಸಿದರೆ, ಎರಡನೇ ಪಂದ್ಯದಲ್ಲಿ 43 ರನ್ ಹಾಗೂ ಮೂರನೇ ಪಂದ್ಯದಲ್ಲಿ ಅಜೇಯ 98 ರನ್ ಸಿಡಿಸಿದರು. ಈ ಪ್ರದರ್ಶನಕ್ಕಾಗಿ ಗಿಲ್ ಪಂದ್ಯಶ್ರೇಷ್ಠದ ಜೊತೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಜಿಕೊಂಡರು. ಆದರೆ, ಪಂದ್ಯ ಮುಗಿದ ಬಳಿಕ ಮಾತನಾಡಿದ ಗಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿ ಗಿಲ್, “ಶತಕ ಗಳಿಸುವ ಆಸೆ ಇತ್ತು. ಆದರೆ, ಆಟಕ್ಕೆ ಮಳೆ ಅಡ್ಡಿಸಿತು, ಇದು ನನ್ನ ನಿಯಂತ್ರಣದಲ್ಲಿ ಇರಲಿಲ್ಲ ನಿಜ. ಇದರಿಂದ ತುಂಬಾ ಬೇಸರವಾಗಿದೆ. ಇನ್ನೊಂದು ಓವರ್ ಇರುತ್ತಿದ್ದರೆ ನಾನು ಶತಕ ಗಳಿಸುತ್ತಿದ್ದೆ. ಮೊದಲ ಎರಡು ಏಕದಿನ ಪಂದ್ಯದಲ್ಲೂ ಔಟಾಗಿದ್ದು ನನಗೆ ಸಮಾದಾನ ನೀಡಲಿಲ್ಲ. ನಾನು ಬಾಲ್ಗೆ ತಕ್ಕಂತೆ ಬ್ಯಾಟ್ ಬೀಸಲು ಯತ್ನಿಸುತ್ತೇನೆ. ಮೂರು ಪಂದ್ಯಗಳಲ್ಲಿ ವಿಕೆಟ್ ಅದ್ಭುತವಾಗಿತ್ತು. ನನ್ನ ಪ್ರದರ್ಶನದ ಬಗೆಗ ನನಗೆ ಹೆಮ್ಮೆಯಿದೆ,” ಎಂದು ಗಿಲ್ ಹೇಳಿದ್ದಾರೆ.
ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಮಾತನಾಡಿ, “ನಮ್ಮ ತಂಡದಲ್ಲಿರುವವರು ಯುವ ಆಟಗಾರರು. ಆದರೆ, ಅವರು ಪ್ರಬುದ್ದರಾಗಿ ಆಡಿದ್ದಾರೆ. ಅವರು ಫೀಲ್ಡ್ನಲ್ಲಿ ಅವರನ್ನು ತೊಡಗಿಸಿಕೊಂಡಿದ್ದು ನೋಡಿ ನನಗೆ ಹೆಮ್ಮೆಯಾಗುತ್ತಿದೆ. ಇದು ಭಾರತಕ್ಕೆ ಉತ್ತಮ ಸೂಚನೆ. ನಾನು ಈ ಫಾರ್ಮೆಟ್ನಲ್ಲಿ ಸಾಕಷ್ಟು ಸಮಯದಿಂದ ಆಡುತ್ತಿದ್ದೇನೆ. ನನ್ನ ಪ್ರದರ್ಶನದಿಂದ ನನಗೆ ಸಂತಸವಾಗಿದೆ. ಗಿಲ್ ಗಳಿಸಿದ 98 ರನ್ನ ಆಟವನ್ನು ನೋಡಲು ಉತ್ತಮವಾಗಿತ್ತು. ನಾವು ಇಲ್ಲಿಗೆ ಬಂದಿದ್ದು ಅದೃಷ್ಟ. ಇಲ್ಲಿನ ಅಭಿಮಾನಿಗಳಿಗೆ ಧನ್ಯವಾದ,” ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಓಪನರ್ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಬೊಂಬಾಟ್ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 113 ರನ್ಗಳ ಜೊತೆಯಾಟ ಆಡಿತು. ಧವನ್ 58 ರನ್ ಗಳಿಸಿದರು. ನಂತರ ಎರಡನೇ ವಿಕೆಟ್ಗೆ ಶ್ರೇಯಸ್ ಅಯ್ಯರ್ ಜೊತೆಯಾದ ಗಿಲ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಅಯ್ಯರ್ 34 ಎಸೆತಗಳಲ್ಲಿ 44 ರನ್ ಸಿಡಿಸಿದರು. ಸೂರ್ಯಕುಮಾರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 8 ರನ್ಗೆ ಔಟಾದರು.
ಸಂಜು ಸ್ಯಾಮ್ಸನ್ ಅಜೇಯ 6 ರನ್ ಗಳಿಸಿದರು. ಆರ್ಭಟಿಸಿದ ಗಿಲ್ ಶತಕದ ಅಂಚಿನಲ್ಲಿ ಅಜೇಯರಾಗಿ ಉಳಿದರು. 98 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಅಂತಿಮವಾಗಿ ಭಾರತ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ವಿಂಡೀಸ್ ಗೆಲುವಿಗೆ 35 ಓವರ್‌ಗಳಲ್ಲಿ 257 ರನ್ ಗುರಿ ಮರುನಿಗದಿಪಡಿಸಲಾಯಿತು. ಆದರೆ, ಭಾರತದ ಬೌಲಿಂಗ್ ದಾಳಿಗೆ ಕೆರಿಬಿಯನ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. 26 ಓವರ್ಗಳಲ್ಲೇ 137 ರನ್ಗೆ ಸರ್ವಪತನ ಕಂಡಿತು. ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರು.
Published On - 10:29 am, Thu, 28 July 22