ಶತಕಕ್ಕೆ ಕೇವಲ 2 ರನ್ ಬಾಕಿ, ಗಿಲ್‌ಗೆ ಆಘಾತ: ಧೋನಿ, ಕಪಿಲ್ ದೇವ್ ಸಾಲಿಗೆ ಸೇರ್ಪಡೆ

ನ್ಯೂಜಿಲೆಂಡ್ ವಿರುದ್ಧ 98 ರನ್ ಗಳಿಸಿ ಶತಕ ವಂಚಿತರಾದ ಶುಭ್ಮನ್ ಗಿಲ್, 90ರ ಗಡಿಯಲ್ಲಿ ಔಟಾದ ಭಾರತೀಯ ನಾಯಕರ ಪಟ್ಟಿಗೆ ಸೇರಿದ್ದಾರೆ. ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಕೂಡ ಇದೇ ರೀತಿ 98 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ಪಟ್ಟಿಯಲ್ಲಿ ಸಚಿನ್, ಕೊಹ್ಲಿ, ಗಂಗೂಲಿ ಸೇರಿದಂತೆ ಹಲವು ದಿಗ್ಗಜರೂ ಇದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಅಂಚಿನಲ್ಲಿ ವಿಕೆಟ್ ಕಳೆದುಕೊಂಡ ನಾಯಕರ ದುರದೃಷ್ಟದ ಇತಿಹಾಸ ಇದು.

ಶತಕಕ್ಕೆ ಕೇವಲ 2 ರನ್ ಬಾಕಿ, ಗಿಲ್‌ಗೆ ಆಘಾತ: ಧೋನಿ, ಕಪಿಲ್ ದೇವ್ ಸಾಲಿಗೆ ಸೇರ್ಪಡೆ
Shubman Gill
Image Credit source: PTI

Updated on: Nov 21, 2026 | 10:33 PM

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್‌ ಶತಕದಂಚಿನಲ್ಲಿ ಎಡವಿದರು. ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಕೊನೆಯ ಓವರ್‌ನಲ್ಲಿ ಗಿಲ್ 98 ರನ್ ಗಳಿಸಿ ಬೌಲ್ಡ್ ಆದರು. ಶತಕ ಸಿಡಿಸಲು ಕೇವಲ ಎರಡು ರನ್‌ಗಳ ಅಂತರದಲ್ಲಿದ್ದಾಗ ವಿಕೆಟ್ ಕಳೆದುಕೊಂಡಿದ್ದು ಅವರಿಗೆ ಭಾರೀ ನಿರಾಸೆ ಮೂಡಿಸಿತು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 90ರ ಗಡಿಯಲ್ಲಿ ವಿಕೆಟ್ ಕಳೆದುಕೊಂಡ ಭಾರತೀಯ ನಾಯಕರ ಪಟ್ಟಿಗೆ ಗಿಲ್ ಕೂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಕೂಡ 98 ರನ್ ಗಳಿಸಿದ್ದಾಗ ಶತಕದ ಅವಕಾಶ ಕೈಚೆಲ್ಲಿದ್ದರು.

ನಾರಿ ಕಾಂಟ್ರಾಕ್ಟರ್ ಮೊದಲಿಗರು

ಟೆಸ್ಟ್ ಕ್ರಿಕೆಟ್‌ನಲ್ಲಿ 90ರಿಂದ 99 ರನ್‌ಗಳ ನಡುವೆ ವಿಕೆಟ್ ಕಳೆದುಕೊಂಡ ಭಾರತೀಯ ನಾಯಕರ ಪಟ್ಟಿಯಲ್ಲಿ ಮಾಜಿ ನಾಯಕ ನಾರಿ ಕಾಂಟ್ರಾಕ್ಟರ್ ಮೊದಲಿಗರಾಗಿದ್ದಾರೆ. 1961ರಲ್ಲಿ ದೆಹಲಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು 92 ರನ್ ಗಳಿಸಿ ಔಟಾಗಿದ್ದರು. ಅವರ ಬಳಿಕ ಮನ್ಸೂರ್ ಅಲಿ ಖಾನ್ ಪಟೌಡಿ, ಅಜಿತ್ ವಾಡೇಕರ್, ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಶುಭಮನ್ ಗಿಲ್ ಹೆಸರು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ.

Loading...

ನಾಯಕರ ಪಟ್ಟಿಯಲ್ಲಿ ಕಪಿಲ್, ಧೋನಿ

ಶುಭ್​ಮನ್ ಗಿಲ್‌ಗೂ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ 98 ರನ್ ಗಳಿಸಿ ಔಟಾದ ಭಾರತೀಯ ನಾಯಕರ ಪಟ್ಟಿಯಲ್ಲಿ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಇದ್ದಾರೆ. 1983ರಲ್ಲಿ ಸೇಂಟ್ ಜಾನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕಪಿಲ್ ದೇವ್ 98 ರನ್ ಗಳಿಸಿ ವಿಕೆಟ್ ಕಳೆದುಕೊಂಡಿದ್ದರು. ಬಳಿಕ 2010ರಲ್ಲಿ ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಎಂಎಸ್ ಧೋನಿ ಕೂಡ 98 ರನ್‌ಗಳಿಗೆ ಔಟಾಗಿದ್ದರು. ಇದೀಗ 2026ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೇ ಶುಭಮನ್ ಗಿಲ್ ಕೂಡ 98 ರನ್ ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಈ ಮೂಲಕ ಮೂವರು ಭಾರತೀಯ ನಾಯಕರು ಒಂದೇ ಸ್ಕೋರ್‌ನಲ್ಲಿ ಶತಕ ವಂಚಿತರಾದಂತಾಗಿದೆ.

99 ರನ್‌ಗಳಿಗೆ ಔಟಾಗಿದ್ದ ಇಬ್ಬರು ನಾಯಕರು

ಭಾರತದ ಟೆಸ್ಟ್ ನಾಯಕರ ಪೈಕಿ ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿ ತಲಾ 99 ರನ್ ಗಳಿಸಿ ಶತಕದ ಅವಕಾಶ ಕಳೆದುಕೊಂಡಿದ್ದಾರೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸೌರವ್ ಗಂಗೂಲಿ 99 ರನ್ ಗಳಿಸಿ ಔಟಾಗಿದ್ದರು. 2012ರಲ್ಲಿ ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಎಂಎಸ್ ಧೋನಿ ಕೂಡ 99 ರನ್ ಗಳಿಸಿ ಶತಕದಿಂದ ವಂಚಿತರಾಗಿದ್ದರು.

ಈ ಪಟ್ಟಿಯಲ್ಲಿ ಧೋನಿಗೆ ವಿಶೇಷ ಸ್ಥಾನವಿದೆ. ಅವರು ಟೆಸ್ಟ್ ನಾಯಕನಾಗಿದ್ದಾಗ 90, 92, 98 ಮತ್ತು 99 ರನ್‌ಗಳಿಗೆ ಔಟಾಗಿದ್ದಾರೆ. ಈ ಮೂಲಕ ಶತಕದ ಆಸುಪಾಸಿನಲ್ಲಿದ್ದಾಗ ಅತಿ ಹೆಚ್ಚು ಬಾರಿ ವಿಕೆಟ್ ಕಳೆದುಕೊಂಡ ಭಾರತೀಯ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಹೊಸ ದಾಖಲೆ; ಶ್ರೀನಾಥ್ ಹಿಂದಿಕ್ಕಿ ಟಾಪ್-10ಗೆ ಎಂಟ್ರಿ

ಸಚಿನ್, ಕೊಹ್ಲಿಗೂ ತಪ್ಪಿರಲಿಲ್ಲ 90ರ ಸಂಕಷ್ಟ

ಈ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರು ಎರಡು ಬಾರಿ ಕಾಣಿಸಿಕೊಂಡಿದೆ. 1997ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್ 92 ರನ್ ಗಳಿಸಿದ್ದರು. ನಂತರ 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ 97 ರನ್ ಗಳಿಸಿ ಔಟಾಗಿದ್ದರು. ಇನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಪಟ್ಟಿಯಲ್ಲಿದ್ದಾರೆ. 2018ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 97 ರನ್ ಗಳಿಸಿ ಶತಕ ವಂಚಿತರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us